ಆತ್ಮೀಯರೇ,
ನಿನ್ನೆ ತೀಸ್ತಾ ಸೆಟಲ್ವಾಡ್ ವಿಷಯದಲ್ಲಿ ಸುಪ್ರೀಂ ಕೋರ್ಟು ಅವರಿಗೆ ನೀಡಿದ್ದ ಜಾಮೀನನ್ನೂ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನನ್ನು ಖಾಯಂ ಗೊಳಿಸಿದೆ… ಹಾಗೂ ಅದನ್ನು ವಿರೋಧಿಸಿ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಗಳು ಹಾಕಿಕೊಂಡಿದ್ದ ತಕರಾರು ಅರ್ಜಿಗಳನ್ನು ವಜಾ ಮಾಡಿದೆ…
ವಾದ -ಪ್ರತಿವಾದಗಳ ಪ್ರಕ್ರಿಯೆಯಲ್ಲಿ ಸರ್ಕಾರೀ ವಕೀಲರು ಈ ಪ್ರಕರಣದಲ್ಲಿ ಸುದೀರ್ಘ ಸಮಯ ಕಳೆದರೂ ವಿಚಾರಣೆಯ ಹಂತಕ್ಕೆ ಬರದಿರುವುದಕ್ಕೆ ಆರೋಪಿಗಳ ಅಸಹಕಾರದ ಅಂಶವೂ ಕಾರಣ ಎಂದು ಹೇಳಿದಾಗ, ಆರೋಪಿಗಳು ತನಿಖೆಗೆ ಸಹಕರಿಸಬೇಕು ಎಂಬ ಸೂಚನೆಯನ್ನು ತನ್ನ ಆದೇಶದಲ್ಲಿ ಕೋರ್ಟು ಸೇರಿಸಿದೆ.
ಆದರೆ ಆ ನೆಪವನ್ನು ತೋರಿಸಿ ತೀಸ್ತಾ ಅವರ ಜಾಮೀನು ನಿರಾಕರಿಸುವ ಅಹವಾಲನ್ನು ಖಡಾಖಂಡಿತವಾಗಿ ತಳ್ಳಿಹಾಕಿದೆ.
ಅಂದರೆ ನಿನ್ನೆಯ ಸುಪ್ರೀಂ ಆದೇಶದ ಪ್ರಧಾನ ಅಂಶ:
ಜಾಮೀನು ತಿರಸ್ಕರಿಸಬೇಕೆಂಬ ಕೇಂದ್ರದ ಅಹವಾಲನ್ನು ಆಧಾರ ರಹಿತ ಎಂದು ತಿರಸ್ಕರಿಸಿ ಮಧ್ಯಂತರ ಜಮೀನನ್ನು ಪರಿಪೂರ್ಣ ಜಾಮೀನಾಗಿಸಿರುವುದು.
ಎರಡನೆಯ ಹಾಗೂ ಸಾಂದರ್ಭಿಕ ಅಂಶ:
ಆರೋಪಿಗಳು ತನಿಖೆಗೆ ಸಹಕರಿಸಬೇಕೆಂಬ ಸಾರ್ವತ್ರಿಕ ಸೂಚನೇ.
ಆದರೆ…
ಹಲವು ಇಂಗ್ಲಿಷ್ ಮತ್ತು ಕನ್ನಡದ ‘ದೊಡ್ಡ’ ಹಾಗೂ ತುತ್ತೂರಿ ಮಾಧ್ಯಮಗಳು ಜಾಮೀನು ಆದೇಶದ ಎರಡನೇ ಭಾಗಕ್ಕೆ ಒತ್ತುಕೊಟ್ಟು ಪ್ರಕಟಿಸಿವೆ.
ಇದರ ಹಿಂದಿನ ಉದ್ದೇಶ ಸ್ಪಷ್ಟ..
ನ್ಯಾಯಾಲಯವೇ ತೀಸ್ತಾಗೆ ಜಾಮೀನು ಕೊಟ್ಟರೂ ತಮ್ಮ ಕೋರ್ಟಿನಲ್ಲಿ ಜಾಮೀನು ನಿರಾಕರಿಸುವುದು…
ಆದರೆ ದುರದೃಷ್ಟವಶಾತ್ ಕನ್ನಡದ ಕೆಲವು ಜನಮಿತ್ರ ಮಾಧ್ಯಮಗಳು ಸಹ ಅದೇ ರೀತಿ ವರದಿಯನ್ನು ಮಾಡಿವೆ…
ಪ್ರಾಯಷಃ ಅದಕ್ಕೆ ಮೂಲ ಆದೇಶವನ್ನು ಗಮನಿಸುವಷ್ಟು ಕಾಲ ಮತ್ತು ವ್ಯವಧಾನವಿರದೆ ಕಾರ್ಪೊರೇಟ್ ಇಂಗ್ಲಿಷ್ ಪತ್ರಿಕೆಗಳು ಪ್ರಕಟ ಮಾಡಿದ ಸುದ್ಧಿಯನ್ನು ಆಧರಿಸಿದ್ದು ಒಂದು ಕಾರಣವಾಗಿರಬಹುದು.
ಆದ್ದರಿಂದ ಇನ್ನುಮುಂದೆ ಇಂಥಾ ವರದಿಗಳನ್ನು ಮಾಡುವಾಗ ಇನ್ನು ಹೆಚ್ಚು ವ್ಯವಧಾನ ಹಾಗೂ ವಿಚಕ್ಷಣೆ ತೋರಿಸಬೇಕೆಂದು ಸ್ನೇಹಪೂರ್ವಕವಾಗಿ ಆಗ್ರಹಿಸುತ್ತೇನೆ.
– ಶಿವಸುಂದರ್, ಸಾಮಾಜಿಕ ಹೋರಾಟಗಾರರು



