ಮಹಾರ, ಸಮಗಾರ, ಭಂಗಿ ಮುಂತಾದ ಜಾತಿಗಳಲ್ಲಿ ಒಗ್ಗಟ್ಟಿಲ್ಲದಿರವುದು ನಮ್ಮೆಲ್ಲರ ದುರ್ದೈವ

1 year ago

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಆಡಿದ ಮಾತುಗಳು…

ನಾಳೆ ದಿ: 1, ಜನೆವರಿ 1938 ರಂದು ಸೊಲ್ಲಾಪುರದಲ್ಲಿ ಮಾದಿಗ ಸಮಾಜವು ಹಮ್ಮಿಕೊಂಡ ಪರಿಷತ್ತು ಸೇರುವುದಿದೆ. ಅಲ್ಲಿ ನನಗೆ ಆಮಂತ್ರಣವಿದ್ದು, ಸವಿಸ್ತಾರ ಮಾತನಾಡುವನಿದ್ದೇನೆ. ಆದಕಾರಣ ಕೆಲವು ಮಾತುಗಳನ್ನು ಆಡಲು ಕಾರಣ ನಮ್ಮವರು ಕೆಲವರು ಪರಿಷತ್ತಿಗೆ ಉಪಸ್ಥಿತರಿರವುವವರಿದ್ದಾರೆ ಮತ್ತು ಕೆಲವರು ಅಲ್ಲಿ ಹೋಗದೇ ಇರುವವರೂ ಇರುವುದರಿಂದ ಅವರಿಗೆ ನನ್ನ ಅನಿಸಿಕೆಗಳನ್ನು ಹೇಳಬೇಕಿದೆ.

ಮೊದಲಿಗೆ ಅಸ್ಪೃಶ್ಯ ಸಮುದಾಯಗಳ ಮಹಾರ, ಸಮಗಾರ, ಭಂಗಿ ಮುಂತಾದ ಜಾತಿಗಳಲ್ಲಿ ಒಗ್ಗಟ್ಟಿಲ್ಲದಿರವುದು ನಮ್ಮೆಲ್ಲರ ದುರ್ದೈವವೇ ಹೌದು. ಈ ಒಗ್ಗಟ್ಟಿರದಿರುವುದಕ್ಕೆ ನಿಜವಾದ ಕಾರಣವೆಂದರೆ ಹಿಂದೂ ಸಮಾಜದೊಳಗಿನ ಜಾತಿಭೇದವೇ ಆಗಿದೆ. ಈ ಜಾತಿಭೇದಕ್ಕೆ ಮಹಾರ, ಸಮಗಾರ, ಮಾದಿಗರು ಇಲ್ಲವೆ ಭಂಗಿ ಸಮುದಾಯ ಹೊಣೆಗಾರರಲ್ಲ. ಜಾತಿಭೇದವು ಮೇಲಿಂದ ಹರಿಯುತ್ತಿರುವ ಗಟಾರಿನ ಗಂಗೆಯಾಗಿದೆ. ನಮ್ಮತ್ತ ಹರಿಯುತ್ತ ಬರುವ ನರಕವಾಗಿದೆ. ಆದ್ದರಿಂದ ಜಾತಿಭೇದದ ಕಹಿಫಲಗಳು ಅಸ್ಪೃಶ್ಯ ಸಮಾಜದೊಳಗೆ ಒಗ್ಗಟ್ಟಿಲ್ಲ, ಇದಕ್ಕೆ ಕಾರಣ ಜಾತಿಭೇದವೇ ಆಗಿದೆ. ಮತ್ತದರ ದುಷ್ಪರಿಣಾಮಗಳನ್ನು ನಾವೇ ಅನುಭವಿಸಬೇಕಾಗುತ್ತಿದೆ. ಖೇದ ತರುವ ಸಂಗತಿಯೆಂದರೆ ಈ ಹಿಂದೂಗಳು ತಮ್ಮೊಳಗಿನ ಜಾತಿಭೇದವನ್ನಂತು ದೂರಮಾಡುವುದಿಲ್ಲ. ತಿರುಗಿ ಅಸ್ಪೃಶ್ಯರೊಳಗಿನ ಅಜ್ಞಾನದ ಲಾಭ ಪಡೆದು ಅವರ ಜಾತಿಭೇದವನ್ನು ದೃಢಗೊಳಿಸಲು ಗುದ್ದಾಡುತ್ತಾರೆ.

ಮಾದಿಗರನ್ನು ಹೊಲೆಯರ ವಿರುದ್ಧ ಎತ್ತಿಕಟ್ಟುವುದು, ಸಮಗಾರರನ್ನು ಹೊಲೆಯ ಮಾದಿಗರ ವಿರುದ್ಧ ಎತ್ತಿಕಟ್ಟುವುದು, ತಮ್ಮ ಭೇದನೀತಿ ನಮ್ಮೊಳಗೆ ಹಬ್ಬಿಸುವುದು. ನಮಗೆ ಒಗ್ಗಟ್ಟಾಗಿರಲು ಬಿಡದೇ ಇರುವಂತೆ ನೋಡುವುದು. ಈ ಜಾತಿಭೇದದ ಮೂಲ ಹೊಣೆ ಒಂದು ವೇಳೆ ಹಿಂದೂ ಸಮಾಜದ್ದಾಗಿದ್ದರೂ ನಾವು ನಮ್ಮ ಜವಾಬ್ದಾರಿಯನ್ನು ಮರೆತು ಹೋಗುವುದೆಂದರೆ ಅದು ಆತ್ಮಘಾತುಕವೇ ಸರಿ. ನಮ್ಮಲ್ಲಿಯ ಜಾತಿಭೇದವನ್ನು ಅಳಿಸಿಹಾಕುವುದು. ಅದು ಪಸರಿಸದಂತೆ ನೋಡಿಕೊಳ್ಳುವುದು ನಮ್ಮ ಆದ್ಯಕರ್ತವ್ಯವಾಗಿದೆ. ನಾವಿದನ್ನು ಸಾಧಿಸದೆ ನಮ್ಮ ಉನ್ನತಿಯಾಗುವುದಿಲ್ಲ. ಮಹಾರ ಮಾದಿಗರ ನಡುವಿನ ಹೆಣ್ಣುಗಂಡು ಊಟ ಉಪಹಾರದ ನಿಷೇಧಗಳು ಇಲ್ಲವಾಗಬೇಕು. ಪ್ರತಿಯೊಂದು ಜಾತಿಯು ಒಂದುವೇಳೆ ತನ್ನ ಸೊಕ್ಕನ್ನು ಮೆರೆಯುವುದಕ್ಕಾಗಿ ತನ್ನ ಜಾತಿಗೆ ಅಂಟಿಕೊಂಡಿರಬಹುದು. ಮಹಾರ ಮಹಾರನಾಗಿಯೇ ಉಳಿಯಬಹುದು. ಮಾದಿಗ ಮಾದಿಗನಾಗಿಯೇ ಉಳಿದರೆ ನಮ್ಮ ಮೇಲಾಗುವ ದೌರ್ಜಜ್ಯಕ್ಕೆ ಪ್ರತಿಕಾರ ಮಾಡುವುದು ಸಾಧ್ಯವಿಲ್ಲವಾಗುವುದು. ನಿಮಗೆ ಅಭಿಮಾನವೆನಿಸುವಂಥದ್ದು ಮಹಾರ ಮತ್ತು ಮಾದಿಗ ಹೆಸರಲ್ಲೇನಿದೆ? ಹಳೆಯ ಪರಂಪರೆಯಲ್ಲಿಯೇ ಮುಂದುವರೆಯಲು ನೀವು ಸಂಘರ್ಷ ಮಾಡುವಂತಾಗಲು ಈ ಹೆಸರಲ್ಲಿ ಅಂಥ ಉಜ್ವಲ ಇತಿಹಾಸವು ನಿಮ್ಮ ಕಣ್ಣೆದುರು ಇದೆಯೆ? ಸರ್ವ ಸಮಾಜಗಳು ಈ ಹೆಸರಲ್ಲಿ ತುಚ್ಛತೆಯನ್ನು ಕಾಣುತ್ತವೆ. ತಿಪ್ಪೆಯ ಮೇಲಿನ ಕಸದ ಕಿಮ್ಮತ್ತೂ ನಿಮಗಿಲ್ಲ; ಆಗ ಈ ಹೆಸರಿನ ಅಭಿಮಾನವನ್ನಿಟ್ಟುಕೊಳ್ಳದೆ ನಮ್ಮ ಎರಡೂ ಸಮುದಾಯಗಳು ಒಂದು ಒರಳುಗಲ್ಲಿನಲ್ಲಿ ಪುಡಿಪುಡಿಯಾಗುತ್ತಿವೆ ಎಂಬುದನ್ನು ಅರಿಯಬೇಕು. ಎರಡೂ ಸಮಾಜ ಒಗ್ಗಟ್ಟಾಗಿರಬೇಕು. ಈ ವಿಷಯದಲ್ಲಿ ಮಹಾರ ಸಮಾಜದ ಮಟ್ಟಿಗೆ ಹೇಳುವುದಾದರೆ ಅವರು ಯಾವುದೇ ಜಾತಿಭೇದ ಎಣಿಸಲು ಸಿದ್ಧರಿಲ್ಲ. ಮಾದಿಗ, ಸಮಗಾರ, ಭಂಗಿ ಸಮುದಾಯಗಳ ಮಧ್ಯೆ ಹೆಣ್ಣು ಗಂಡು ಕೊಡುಕೊಳ್ಳುವಿಕೆ ನಡೆಸಲು ಸಿದ್ಧರಿದ್ದಾರೆ. ಒಂದು ವೇಳೆ ಮಹಾರರು ಈ ವಿಷಯದಲ್ಲಿ ಹಿಂದೆಮುಂದೆ ನೋಡತೊಡಗಿದರೆ ಅವರನ್ನು ಈ ಕಾರ್ಯಕ್ಕೆ ಹಚ್ಚುವಂತೆ ಮಾಡಲು ನಾನು ಹೊಣೆಯಿಂದ ನಡೆದುಕೊಳ್ಳುತ್ತೇನೆ.

(ಡಿಸೆಂಬರ್ 30, 1937 ರ ರಾತ್ರಿ 10 ಗಂಟೆಯಲ್ಲಿ ಫಂಡರಾಪುರ ಸಮೀಪದ ಕುರ್ಕಮ ಎಂಬ ಹಳ್ಳಿಯಲ್ಲಿ ಮಹರ್ ಮತ್ತು ಮಾದಿಗ ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣ.)

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳ ಸಂಪುಟ-19/2015/ ಪುಟ 563-566

Leave a Reply