ಬಿಜೆಪಿ ಜಾರಿಗೆ ತಂದ ರೈತರಿಗೆ ಮಾರಕ ಕೃಷಿ ಕಾಯ್ದೆಗಳು ವಾಪಸ್: ಚಲುವರಾಯಸ್ವಾಮಿ

3 years ago

We will withdraw the agricultural laws passed by BJP which are fatal to farmers: Chaluvarayaswamy

ಮೋಡ ಬಿತ್ತನೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ ಕೃಷಿ ಸಚಿವ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ಸಮುದಾಯಕ್ಕೆ ಮಾರಕವೆನ್ನಲಾದ ಕೃಷಿ ಕಾಯ್ದೆಗಳನ್ನು ಹಂತಹಂತವಾಗಿ ವಾಪಸ್ ಪಡೆಯಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರಿಗೆ ಮಾರಕವಾಗಿರುವ ಕೆಲವು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದ್ದು, ಈಗಾಗಲೇ ಕೃಷಿ ಮಾರುಕಟ್ಟೆ ಕಾಯಿದೆ ತಿದ್ದುಪಡಿ ಮಾಡಲಾಗಿದೆ. ಇದೇ ರೀತಿಯಲ್ಲಿ ಇನ್ನಷ್ಟು ಕಾಯಿದೆಗಳನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು.

ಮೋಡ ಬಿತ್ತನೆ ಇಲ್ಲ: ಮಳೆ ಕೊರತೆ ಉಂಟಾಗಿರುವ ಸಮಯದಲ್ಲಿ ಮಳೆ ಸುರಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಮಾಡಲಾಗುತ್ತಿರುವ ಮೋಡ ಬಿತ್ತನೆ ಕಾರ್ಯ ಯಶಸ್ವಿಯಾಗಿರುವ ಕುರಿತು ಎಲ್ಲಿಯೂ ವರದಿಗಳಿಲ್ಲ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಈ ಹಿಂದೆ ರಾಜ್ಯದಲ್ಲಿ ಹಲವು ಬಾರಿ ಮೋಡ ಬಿತ್ತನೆ ನಡೆದಿದೆ. ಇದು ವಿಫಲವಾಗಿದ್ದರಿಂದ ಈ ಬಾರಿ ಮೋಡ ಬಿತ್ತನೆ ಪ್ರಸ್ತಾವನೆ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಸೂಕ್ತ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ಮೋಡಬಿತ್ತನೆ ಸರ್ಕಾರದ ಮುಂದೆ ಇಲ್ಲ. ಸೆಪ್ಟೆಂಬರ್ 4 ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಿದರೆ ಕೇಂದ್ರ ಸರ್ಕಾರ ಬರಗಾಲ ನಿರ್ವಹಣೆಗೆ ಬೇಕಾದ ನೆರವು ನೀಡುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಾನುಸಾರ ಕೇಂದ್ರದಿಂದ ಪರಿಹಾರ ನೀಡಲಾಗುತ್ತದೆ. ಜತೆಗೆ ವಿಮೆಯೂ ದೊರೆಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಿದರೂ, ಮಳೆ ಬೀಳದೆ ಇದ್ದಲ್ಲಿ ಭಾರೀ ಸಂಕಷ್ಟಕ್ಕೆ ರೈತ ವರ್ಗ ಸಿಲುಕಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ ಎಂದರು.

ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ಈ ತಿಂಗಳು ಶೇ 99 ರಷ್ಟು ಮಳೆ ಕೊರತೆಯಾಗಿದೆ. 130 ತಾಲೂಕಿನಲ್ಲಿ ಬರ ಸ್ಥಿತಿ ಇರುವ ಕುರಿತು ಮಾಹಿತಿ ಇದೆ. ಈ ಬಗ್ಗೆ ದಾಖಲೆ ಸಮೇತ ವರದಿ ಸಲ್ಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರದಿ ಸರ್ಕಾರದ ಕೈ ಸೇರಲಿದ್ದು, ಇದನ್ನು ಆಧರಿಸಿ ಬರ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಆಯಾ ಜಿಲ್ಲೆಗಳ ವಾಸ್ತವ ಸ್ಥಿತಿ ತಿಳಿಯುವ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ಬರದಿಂದ ಸಂಕಷ್ಟದಲ್ಲಿ ರೈತರ ನೆರವಿಗೆ ಸರ್ಕಾರ ಸಿದ್ಧವಿದೆ. ಸರ್ಕಾರದ ಮಟ್ಟದಲ್ಲೂ ಶಾಸಕರು ಹಾಗೂ ಹಲವು ಮಂತ್ರಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ ಎಂದರು.

Leave a Reply