ಬೆಂಗಳೂರು: ವಿಧಾನಪರಿಷತ್ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಮೂವರು ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಸಿನಿಮಾ ಮತ್ತು ರಂಗಭೂಮಿ ನಟಿಯಾಗಿದ್ದು ಅವರು ಕಲಾವಿದರ ಖೋಟಾದಲ್ಲಿ ಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ.
ಮತ್ತೊಬ್ಬ ಮಾಜಿ ಮಂತ್ರಿ ಹಾಗೂ ಹಿರಿಯ ಮುಖಂಡ ಎಂ.ಆರ್.ಸೀತಾರಾಮ್ ಶಿಕ್ಷಣ ಕ್ಷೇತ್ರದ ತಜ್ಞರ ಖೋಟಾದಲ್ಲಿ ಹಾಗೂ ನಿವೃತ್ತ ಅಧಿಕಾರಿ ಎಚ್.ಬಿ.ಸುಧಾಮ್ ದಾಸ್ ಸಾರ್ವಜನಿಕ ಆಡಳಿತ ಖೋಟಾದಲ್ಲಿ ನಾಮಕರಣಗೊಂಡಿದ್ದು ಇಂದು ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮುಖದಲ್ಲಿ ನಾಮನಿರ್ದೇಶಿತ ಈ ಮೂವರು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಸಂವಿಧಾನ ಹಾಗೂ ಭಗವಂತನ ಹೆಸರಿನಲ್ಲಿ ಉಮಾಶ್ರೀ, ಸೀತಾರಾಮ್ ಮತ್ತು ಸುಧಾಮ್ ದಾಸ್ ಬುದ್ದ, ಬಸವ, ಅಂಬೇಡ್ಕರ್ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ.ಪಾಟೀಲ್, ಬೋಸ್ರಾಜ್, ವಿಧಾನಪರಿಷತ್ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




