ಬೆಂಗಳೂರು: ಇತ್ತೀಚಿಗೆ ಬಿಜೆಪಿಯ ಶಾಸಕರು ಯಡಿಯೂರಪ್ಪನವರ ಮನೆಯಲ್ಲಿ ಸಭೆ ಸೇರಿ ನೀವೇ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ಶಾಸಕರೆಲ್ಲ BS Yediyurappa ಅವರ ಹಿಂದೆ ಹೋಗಿದ್ದೇ ತಡ ಕುಪಿತರಾದ ಬಿ ಎಲ್ ಸಂತೋಷ್ ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ! ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಮತದಾರರ ಮಹಾ ಚೇತನ ಅಭಿಯಾನ ಸಭೆಯಲ್ಲಿ ಮಾತಾನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಅತೃಪ್ತಗೊಂಡ ಶಾಸಕರು ಈ ಸರ್ಕಾರದ ಪತನಕ್ಕೆ ಸಜ್ಜುಗೊಂಡಿದ್ದಾರೆ. ನನ್ನ ಜೊತೆ ಕಾಂಗ್ರೆಸ್ ನ 40 ರಿಂದ 45 ಜನ ಶಾಸಕರು ಸಂಪರ್ಕದಲ್ಲಿದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆ ಒಂದು ದಿನದ ಕೆಲಸ ಅಷ್ಟೆ. ಈ ಸರ್ಕಾರ ಪತನಗೊಳಿಸಬಹುದಾಗಿದೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್, ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು, ಈಗ BSY ಅವರಿಗೆ ಸೆಡ್ಡು ಹೊಡೆಯಲು ಮತ್ತೆ ಪ್ರತ್ಯಕ್ಷರಾಗಿ ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ! ಎಂದು ಹೇಳಿದೆ.




