ವಿಷ್ಣುವರ್ಧನ್ ಸಮಾಧಿ ಸಂರಕ್ಷಣೆ ಮತ್ತು ಸ್ಮಾರಕ ನಿರ್ಮಿಸಲು ಮನವಿ

3 years ago

ಬೆಂಗಳೂರು: ಅಭಿಮಾನ್ ಸ್ಟುಡಿಯೋ ಅವರಣದಲ್ಲಿ ವಿಷ್ಣುವರ್ಧನ್ ಸಮಾಧಿ ಸಂರಕ್ಷಣೆ ಮತ್ತು ಸ್ಮಾರಕ ಮಾಡಲು ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ನಟ ವಿಷ್ಣುವರ್ಧನ್ ಸ್ಮಾರಕದ ಸಂರಕ್ಷಣೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಕಾರ್ಯಕ್ರಮ ನಡೆಸಲಾಯಿತು.

ನಾಡಪ್ರೇಮಿ ಡಾ||ವಿಷ್ಣು ಅಕಾಡೆಮಿ ಗೌರವಾಧ್ಯಕ್ಷ ಕ್ರಾಂತಿರಾಜು, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಅಕಾಡೆಮಿಯ ಸದಸ್ಯರು, ನಟ ವಿಷ್ಣುವರ್ಧನ್ ರವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕ್ರಾಂತಿರಾಜು ಮಾತನಾಡಿ, ಅಭಿಮಾನಿಗಳಿಂದ ಸಾಹಸಸಿಂಹ, ವಿಷ್ಣುದಾದ ಎಂಬ ಹಲವಾರು ಬಿರುದು ಪಡೆದ ಡಾ.ವಿಷ್ಣುವರ್ಧನ್ ರವರು ಅಪ್ರತಿಮ ಕಲಾವಿದರು. 35 ವರ್ಷಗಳ ಕಲಾಸೇವೆ ಮತ್ತು ನೂರಾರು ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ನಮ್ಮ ರಾಜ್ಯದಲ್ಲಿ ಕಲೆ,ಕಲಾವಿದರನ್ನು ದೇವರಂತೆ ಆರಾಧಿಸುವ ಕನ್ನಡಿಗರ ಇದ್ದಾರೆ ಎಂದರು.

ಸಾಹಸಸಿಂಹ ವಿಷ್ಣುವರ್ಧನ್ ಆಗಲಿಕೆಯಿಂದ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಅಪಾರ ನೋವು, ನಷ್ಟವಾಗಿದೆ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ಡಾ.ವಿಷ್ಣುವರ್ಧನ್‌ರವರ ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಲಾಗುವುದು ಎಂದರು.

ಡಾ.ವಿಷ್ಣುವರ್ಧನ್ ರವರ ಕೋಟ್ಯಂತರ ಅಭಿಮಾನಿಗಳ ಆಸೆ ಅವರ ಅಂತ್ಯಕ್ರಿಯೆ ನಡೆದ ಸ್ಥಳ ನೋಡಬೇಕು, ಗೌರವ ಸಲ್ಲಿಸಬೇಕು ಎಂಬ ಅಭಿಲಾಶೆ ಇರುತ್ತದೆ ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ ಪಾಲನೇತ್ರ ಮಾತನಾಡಿ, ಕನ್ನಡ ನಾಡಿಗೆ ಅಮೂಲ್ಯರತ್ನ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದಲ್ಲಿ ಸಾವಿರಾರು ಅಭಿಮಾನಿಗಳು ಪ್ರತಿನಿತ್ಯ ಆಗಮಿಸಿ, ಗೌರವ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಒಂದಲ್ಲ, ಒಂದು ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿವೆ. ಅಭಿಮಾನಿಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಕೂಡಲೆ ರಾಜ್ಯ ಸರ್ಕಾರ ಅಭಿಮಾನ್ ಸ್ಟುಡಿಯೊ ಸಂಸ್ಥೆಯವರ ಜೊತೆಯಲ್ಲಿ ಚರ್ಚಿಸಿ, ಸಮಾಧಿ ಸ್ಥಳ ಉಳಿಸಿ, ಸ್ಮಾರಕ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಅವರಿಗೆ ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿರವರು ಮನವಿ ಪತ್ರ ಸಲ್ಲಿಸಿದರು.

Leave a Reply