ಚೆನ್ನೈ: ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ತಿರುಚೆಂತುರೈ ಕಾವೇರಿ ನದಿಯ ದಡದಲ್ಲಿರುವ ಒಂದು ಹಳ್ಳಿ. ಈ ಇಡೀ ಗ್ರಾಮವೇ ತನ್ನದು ಎಂದು ವಕ್ಫ್ ಮಂಡಳಿ ಹಕ್ಕು ಮಂಡಿಸಿದ ಕಾರಣಕ್ಕೆ ತಮ್ಮ ಜಮೀನನ್ನೇ ಮಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿರುವ ಘಟನೆ ನಡೆದಿದೆ.
ಎನ್ ರಾಜಗೋಪಾಲ್ ತಿರುಚೆಂಡುರೈ ಗ್ರಾಮದಲ್ಲಿ ತಮ್ಮ ಕೃಷಿ ಜಮೀನನ್ನು ಮಾರಾಟ ಮಾಡಿ ಮಗಳ ಮದುವೆ ಮಾಡಲು ಬಯಸಿದ್ದರು. ಆದರೆ ಅವರ ಹೆಸರಿನಲ್ಲಿರುವ 1.2 ಎಕರೆ ಜಮೀನು ತಮಿಳುನಾಡು ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ಅದನ್ನು ಮಾರಾಟ ಮಾಡಲು ವಕ್ಫ್ ಬೋರ್ಡ್ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ತೆಗೆದುಕೊಳ್ಳಬೇಕಾಗಿದೆ ಎಂದು ವರದಿಯಾಗಿದೆ.
ಈ ಕುರಿತು ವಿಚಾರಿಸಿದ ಸಮಯದಲ್ಲಿ ಇಡೀ ತಿರುಚೆಂದೂರೈ ಗ್ರಾಮ ವಕ್ಫ್ ಮಂಡಳಿಗೆ ಸೇರಿದ್ದು ಎಂದು ತಿಳಿದುಬಂತು. ಈ ಗ್ರಾಮದಲ್ಲಿ ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎರಡೂ ಸಮುದಾಯಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ರಾಜಗೋಪಾಲ್ ಅಭಿಪ್ರಾಯಪಡುತ್ತಾರೆ.
ತಮ್ಮ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, 1996ರಲ್ಲಿ ಗ್ರಾಮದಲ್ಲಿ ಭೂಮಿ ಖರೀದಿಸಿದ್ದೆ. ಆಗ ಅದು ವಕ್ಫ್ ಮಂಡಳಿಗೆ ಸೇರಿರಲಿಲ್ಲ. ಇಂದು ಆಡಳಿತ ಮಂಡಳಿಯೊಂದಿಗೆ ಗ್ರಾಮಸ್ಥರು ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ತನ್ನ ಬಳಿ ಜಮೀನಿನ ಎಲ್ಲ ದಾಖಲೆಗಳಿವೆ. ಆದರೆ ಮಾರಾಟ ಮಾಡಲು ಬಯಸಿದಾಗ ರಿಜಿಸ್ಟ್ರಾರ್ ಅದು ವಕ್ಫ್ ಮಂಡಳಿಗೆ ಸೇರಿದೆ. ಮಾರಾಟ ಮಾಡಲು ಅನುಮತಿ ಪಡೆಯಬೇಕು ಎಂದು ಹೇಳುತ್ತಾರೆ. ಮಗಳ ಮದುವೆಗಾಗಿ ಜಮೀನು ಮಾರಲು ಮುಂದಾಗಿದ್ದೆ. ಆದರೆ ಹಣ ಹೊಂದಿಸಲು ಸಾಧ್ಯವಾಗದೆ ಮದುವೆ ನಿಂತುಹೋಗಿದೆ ಎಂದಿದ್ದಾರೆ.



