ಧಾರವಾಡ: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಸೆ.9ರ ಸಂಜೆ ಕೆಲವರು ವಾಂತಿಬೇಧಿಯಿಂದ ಅಸ್ವಸ್ಥರಾಗಿ, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ನೀರು ಕುಡಿದು ಅನಾರೋಗ್ಯವಾಗಿದೆ ಎಂದು ಹೇಳಲಾಗಿತ್ತು. ತಕ್ಷಣ ನವಲಗುಂದ ತಾಲೂಕು ಆಸ್ಪತ್ರೆಗೆ ವಾಂತಿ ಬೇಧಿ ಪೀಡಿತರನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಎಸ್.ಪಿ ಗುಂಜನ್ ಆರ್ಯ ಅವರು ನವಲಗುಂದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರನ್ನು ಮಾತನಾಡಿಸಿ, ಘಟನೆ ಬಗ್ಗೆ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಎನ್.ಎಚ್.ಕೋನರಡ್ಡಿ, ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಬೇಕು. ಸ್ವಚ್ಛತೆ, ಶುದ್ಧ ನೀರಿನ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗೆ ದಾಖಲಾಗಿರುವವರಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧಿ ನೀಡಬೇಕೆಂದು ಶಾಸಕರು ನಿರ್ದೇಶಿದರು. ವೈದ್ಯರಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಔಷಧಿಗಳನ್ನು ನೀಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸುಮಾರು 19 ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮಸ್ಥರು ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ಈ ಘಟನೆ ಆಗಿದೆ ಎಂದು ದೂರಿದ್ದಾರೆ. ಈ ಕುರಿತು ಪರಿಶೀಲಿಸಿ, ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅವರಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಗ್ರಾಮದ ಕೆರೆ, ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಮನೆಹತ್ತಿರದ ನಳದಿಂದ ನೀರು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದರು.
ಗ್ರಾಮದಲ್ಲಿ ನೀರು, ನೈರ್ಮಲ್ಯ, ನೀರನ್ನು ಶುದ್ಧೀಕರಿಸಿ, ಬಳಸುವ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ 30 ಜನ ಆಶಾ ಸದಸ್ಯರ ತಂಡ ರಚಿಸಿ, ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ. ಗುಡಿಸಾಗರ ಗ್ರಾಮದಲ್ಲಿ ಸುಮಾರು 1,600 ಮನೆ, ಅಂದಾಜು 2,500 ಜನಸಂಖ್ಯೆ ಇದ್ದು, ನಿನ್ನೆ ಮತ್ತು ಇವತ್ತು ಸೇರಿ 600 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಮಾಡಿ ಕುಟುಂಬಗಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಗುಡಿಸಾಗರ ಆರೋಗ್ಯ ಇಲಾಖೆ ಉಪಕೇಂದ್ರಕ್ಕೆ ತಜ್ಞ ವೈದ್ಯರನ್ನು, ಶುಶ್ರೂಷಕೀಯರನ್ನು ನೇಮಿಸಲಾಗಿದ್ದು, ಗ್ರಾಮಸ್ಥರಿಗೆ ಸ್ಥಳದಲ್ಲಿ ಅಗತ್ಯ ಚಿಕಿತ್ಸೆ ನೀಡಿ, ಔಷಧಿ ವಿತರಿಸಲಾಗುತ್ತದೆ. ನೀರಿನ ಪರೀಕ್ಷಾ ವರದಿ ಬಂದ ತಕ್ಷಣ, ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಮಾತನಾಡಿ, ಅಚಾನಕ್ಕಾಗಿ ಈ ಘಟನೆ ನಡೆದಿದೆ. ಪ್ರತಿದಿನ ಗ್ರಾಮಸ್ಥರು ಅದೇ ಕೆರೆಯ ಶುದ್ಧಿಕರಿಸಿದ ನೀರು ಕುಡಿಯುತ್ತಾರೆ. ಗ್ರಾಮದ ಆರ್.ಓ ಗಳನ್ನು ದುರಸ್ತಿಗೊಳಿಸಿ, ಇವತ್ತೇ ಆರಂಭಿಸಲು ಸೂಚಿಸಲಾಗಿದೆ ಎಂದರು.
ಗುಡಿಸಾಗರ ಗ್ರಾಮದಲ್ಲಿ ಮೂರು ಆರ್‍ಓ ಪ್ಲಾಂಟ್‍ಗಳಿದ್ದು, ಸಣ್ಣಪುಟ್ಟ ದುರಸ್ತಿ ಮಾಡಬೇಕು. ಅವುಗಳಲ್ಲಿ ಒಂದನ್ನು ದುರಸ್ತಿಗೊಳಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದವನ್ನು ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ. ಅಲ್ಲಿಯವರೆಗೆ ನವಲಗುಂದ ನೀಲಮ್ಮನ ಕೆರೆಯಿಂದ ಎರಡು ಟ್ಯಾಂಕರ ಮೂಲಕ ಶುದ್ಧೀಕರಿಸಿದ ನೀರನ್ನು ಗುಡಿಸಾಗರ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತದೆ ಎಂದರು.
ನಂತರ ಶಾಸಕರು, ಜಿಲ್ಲಾಧಿಕಾರಿಗಳು, ಸಿಇಓ ಅವರೊಂದಿಗೆ ಗುಡಿಸಾಗರ ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರಿನ ಕೆರೆ, ಕೆರೆ ಕೋಡಿಯನ್ನು ಪರಿಶೀಲಿಸಿದರು. ಆರೋಗ್ಯ ಉಪಕೇಂದ್ರಕ್ಕೆ ಭೇಟಿ ನೀಡಿ, ಚಿಕಿತ್ಸೆಗೆ ಆಗಮಿಸಿದ್ದ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.










