ಕಾಡುವ ಶಬ್ದಗಳೇ ಸೇರಿ ದೃಶ್ಯ ಕಾವ್ಯವೊಂದು ಈಗ ತೆರೆಗೆ ಸಿದ್ಧವಾಗಿದೆ

10 months ago

“ದೂರ ತೀರ ಯಾನ”

ದೂರ, ತೀರ ಮತ್ತು ಯಾನ ಇವು ಮೂರೂ ಬಿಡಿ ಬಿಡಿಯಾಗಿ ಕಾಡುವ ಶಬ್ದಗಳು. ಇಂಥ ಕಾಡುವ ಶಬ್ದಗಳೇ ಸೇರಿ ದೃಶ್ಯ ಕಾವ್ಯವೊಂದು ಈಗ ತೆರೆಗೆ ಸಿದ್ಧವಾಗಿದೆ.

ಸೊಗಸಾದ ಬಣ್ಣಗಳನೆಲ್ಲ ಸೇರಿಸಿ ಅದ್ಭುತವೆನ್ನಿಸುವ ಚಿತ್ರ ರಚಿಸುವ ಮಿತ್ರ Manso Re ಬದುಕಿನ ರಮ್ಯ ಮತ್ತು ಆರ್ದ್ರ ಮತ್ತು ಅತಿಮೋಹದ ಸಂಗತಿಗಳನೆಲ್ಲ ಕಲಸಿ ಹದ ಮಾಡಿ ಚಲನ ಚಿತ್ರವೆಂಬ ದೃಶ್ಯಕಾವ್ಯ ಸೃಜಿಸಿದ್ದಾರೆ.

ಅವರ ಪ್ರತಿ ಸಿನೆಮಾಕ್ಕೂ ಮನುಷ್ಯತ್ವದ ಹೊಸ ಚಹರೆಗಳನ್ನ ತೋರುವ ಮತ್ತು ಎದೆಗಿಳಿಸುವ ಸತ್ವವಿದೆ.

ಕರ್ನಾಟಕದ ಕಳೆದೆರಡು ದಶಕಗಳಲ್ಲಿ ಸಾಮಾಜಿಕ ಆರೋಗ್ಯವನ್ನ ಕಾಪಾಡಲೇಬೇಕೆಂಬ ಹೊಣೆ ಹೊತ್ತ ಅವರ ಕಸುಬುದಾರಿಕೆ ಕನ್ನಡದ ಚಂದನವನಕ್ಕೆ ಹೊಸ ಗಂಧ ಮತ್ತು ಘನತೆ ತಂದಿದೆ.

ಒಂದೊಂದು ದೃಶ್ಯವನ್ನೂ ರಾಜಿಯಿಲ್ಲದೆ ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೆ ಚಿತ್ರಕಲಾವಿದನೊಬ್ಬನ ಮಹಾಶ್ರದ್ಧೆಯಿಂದ ಪ್ರತಿಯೊಂದು ಘಟನೆಗೂ ಅಧಿಕೃತತೆ ಮತ್ತು ಸಂವೇದನೆಗಳನ್ನ ಬೆರೆಸಿ ಪ್ರತಿಯೊಂದು ಪಾತ್ರದ ಎದೆಸದ್ದು ಕೇಳಿಸುವಂತೆ ಚಿತ್ರಿಸುವ ತಾಕತ್ತು ಕನ್ನಡದಲ್ಲಿ ತುಂಬಾ ಕಡಿಮೆ ಜನರಿಗಿದೆ. ಮಂಸೋರೆ ಅಂಥವರಲ್ಲಿ ಒಬ್ಬರು.

ಮಂಸೋರೆ ಕರುನಾಡಿಗೆ ಕೊಡುತ್ತಿರುವುದು ಕರುಳಕಥನಗಳನ್ನ. ಇಲ್ಲಿ ನಮ್ಮ ನಿಮ್ಮೆಲ್ಲರ ಒಡಲಾಳವೂ ಇದೆ, ನಮ್ಮ ಆದಿಮ ಪ್ರೇಮದ ಹಸಿವಿಗೆ ಸಮಾಧಾನವೂ ಇದೆ.

ಮಂಸೋರೆ ಚಿತ್ರಗಳು ಕನ್ನಡಿಗರ ಮನದ ಗೋಡೆಗಳ ಮೇಲೆ ಬರೆದ ಘನತೆಯ ಕಾವ್ಯಗಳು.

ಅಂಥ ಮತ್ತೊಂದು ಸತ್ವಯುತ ದೃಶ್ಯ ಕಾವ್ಯ ಬರುತ್ತಿದೆ… ಬನ್ನಿ ಸ್ವಾಗತಿಸೋಣ.

ಪ್ರಿಯ ಮಿತ್ರ ಮಂಸೋರೆ ಗೆ ಮತ್ತು ತಂಡಕ್ಕೆ ಎಲ್ಲ ಶ್ರೇಯ ಸಿಗಲಿ ಮತ್ತು ಸಿಗುತ್ತದೆ ಕೂಡ.

– ವೀರಣ್ಣ ‌ಮಡಿವಾಳರ

Leave a Reply