ಕಾಡುವ ತಮಿಳು ಸಿನಿಮಾ ‘ಅಯೋಥಿ’’

3 years ago

ನಾನು ಇತ್ತೀಚೆಗಿನ ವರ್ಷಗಳಲ್ಲಿ ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿ, ಏಪ್ರಿಲ್ ತಿಂಗಳಿನಲ್ಲಿ ಜೀ-5 ಮೂಲಕ ಓ.ಟಿ.ಟಿ.ಯಲ್ಲಿ ಪ್ರಸಾರವಾಗುತ್ತಿರುವ ತಮಿಳು ಸಿನಿಮಾ ‘’ ಅಯೋಥಿ’ ಎಂಬ ಸಿನಿಮಾ ಮುಖ್ಯವಾದುದು. ಈ ಪದದ ಅರ್ಥ ತಮಿಳು ಭಾಷೆಯಲ್ಲಿ ಹೇಳಲಾರದ್ದು ಅಥವಾ ಅವ್ಯಕ್ತನೀಯ ಎಂದು ನಾನು ಭಾವಿಸಿದ್ದೀನಿ. ಅಥವಾ ಅಯೋದ್ಯೆ ಎಂಬುದರ ತಮಿಳು ಉಚ್ಚಾರಣೆ ಇರಬೇಕು.

2009 ರಲ್ಲಿ ಬಿಡುಗಡೆಯಾಗಿ ಇಡೀ ದಕ್ಷಿಣ ಭಾರತದಲ್ಲಿ ಬಿರುಗಾಳಿ ಎಬ್ಬೆಸಿದ ಸಮುದ್ರಕಿಣಿ ನಿರ್ದೇಶನದ ನಾಡೋಡಿ ಸಿನಿಮಾದ ಮೂಲಕ ನಾಯಕನಾಗಿ ಹೊರಹೊಮ್ಮಿದ ಶಶಿಕುಮಾರ್ ಈ ಸಿನಿಮಾದಲ್ಲಿ ನಾಯಕನಾಗಿ ತಮ್ಮ ಪ್ರಬುದ್ಧ ಅಭಿನಯದ ಮೂಲಕ ತಾನೋರ್ವ ಯಶಸ್ವಿ ಸಿನಿಮಾ ನಟ, ನಿರ್ದೇಶಕ, ಬರಹಗಾರ ಎಂಬುದನ್ನು ಈ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ. ಈ ಪ್ರತಿಭಾವಂತನ ಸುಬ್ರಮಣ್ಯಪುರಂ, ಹಾಗೂ ನಾನ್ ಕಡವುಳ್, ಪಿತಾಮಹಾನ್ ಖ್ಯಾತಿಯ ಬಾಲ ಅವರ ‘ತಾರಿ ತಪ್ಪಟೈ’ ಸಿನಿಮಾ ಸೇರಿದಂತೆ ಹಲವಾರು ಒಳ್ಳೆಯ ಸಿನಿಮಾಗಳನ್ನು ನೀಡಿರುವುದು ವಿಶೇಷ.

ಅಯೋಥಿ ಸಿನಿಮಾದ ಕಥೆಯು ಇಡೀ ಪ್ರಕೇಕ್ಷಕರನ್ನು ಚಿತ್ರದ ನಟರುಗಳ ಅಭಿನಯದ ಮೂಲಕ ಹೃದಯವನ್ನು ಕಲಕುವುದರ ಜೊತೆಗೆ ಕಣ್ಣುಗಳನ್ನು ಒದ್ದೆಯನ್ನಾಗಿಸುತ್ತದೆ. ಈ ಸಿನಿಮಾದಲ್ಲಿ ನಾಯಕಿ ಇಲ್ಲ, ಮನರಂಜನೆ ನೀಡುವ ನೃತ್ಯಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಂದಿರ ಮೂರ್ತಿ ಎಂಬ ಹೊಸ ಯುವ ನಿರ್ದೇಶಕ ಈ ಸಿನಿಮಾಕ್ಕೆ ಅದ್ಭೂತವಾದ ಕಥೆ ಬರೆದು ನಿರ್ದೇಶನ ಮಾಡಿರುವುದು ಅಚ್ಚರಿ ಮೂಡಿಸುತ್ತದೆ. ನಿರ್ದೇಶಕನ ಜೊತೆಗೆ ಛಾಯಾಚಿತ್ರಗ್ರಹ ಣ ಮಾಡಿರುವ ಮಹೇಶ್ ಮಾಣಿಕ್ಯಂ, ಸಂಗೀತ ನೀಡಿರುವ ಎನ್.ಆರ್. ರಘುನಾಥನ್ ಇಡೀ ಸಿನಿಮಾವನ್ನು ದೃಶ್ಯ ಕಾವ್ಯವನ್ನಾಗಿ ಪರಿವರ್ತಿಸಿದ್ದಾರೆ.

ಧರ್ಮಕ್ಕಿಂತ ಮನುಷ್ಯತ್ವ ಮತ್ತು ಮಾನವೀಯತೆ ಮುಖ್ಯ ಎಂದು ಹೇಳುವ ಈ ಸಿನಿಮಾ ಉತ್ತರದ ಅಯೋಧ್ಯೆ ಮತ್ತು ದಕ್ಷಿಣದ ರಾಮೇಶ್ವರಂ ನ ರಾಮನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ರಾಮನಿಗಿಂತ ಭಾಷೆ, ಜಾತಿ ಮತ್ತು ಧರ್ಮವನ್ನು ಮೀರಿದ ಮನುಷ್ಯತ್ವ ದೊಡ್ಡದು ಎಂಬುದನ್ನು ತಣ್ಣನೆಯ ಧ್ವನಿಯಲ್ಲಿ ಗಂಭೀರವಾಗಿ ಸಂದೇಶವನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ. ಅಯೋಧ್ಯೆ ನಗರದ ಬಲರಾಂ ಎಂಬ ಸರ್ವಾಧಿಕಾರಿ ಮನೋಭಾವದ ವ್ಯಾಪಾರಿ ತನ್ನ ಪತ್ನಿ ಜಾನಕಿ ಹಾಗೂ ಪುತ್ರಿ ಶೀತಲ್ ಹಾಗೂ ಸೋನು ಎಂಬ ಪುಟ್ಟ ಬಾಲಕನೊಂದಿಗೆ ರಾಮಶ್ವೇರಕ್ಕೆ ಭೇಟಿ ನೀಡುತ್ತಾನೆ. ಮಧುರೈ ವರೆಗೆ ರೈಲಿನಲ್ಲಿ ಬಂದು ನಂತರ ಟ್ಯಾಕ್ಸಿ ಹಿಡಿದು ರಾಮಾಶ್ವರಕ್ಕೆ ತೆರಳುತ್ತಾನೆ.

ಸದಾ ಗುಟ್ಕಾ ಜಿಗಿಯುವ ಈತನಿಗೆ ಹಿಂದಿ ಹೊರತು ಪಡಿಸಿ ಬೇರೆ ಭಾಷೆ ತಿಳಿಯದು. ಟ್ಯಾಕ್ಸಿ ಚಾಲಕನಿಗೆ ತಮಿಳು ಬಿಟ್ಟು ಹಿಂದಿ ಬಾರದು. ಏರ್ ಕಂಡಿಷನ್ ಕಾರಿನಲ್ಲಿ ಕಿಟಕಿ ಬಾಗಿಲು ಮುಚ್ಚಿದ್ದರೂ ಸಹ ಜೇಬಿನಿಂದ ಗುಟ್ಕಾ ತೆಗೆದು ಬಾಯಿಗೆ ಹಾಕಿಕೊಂಡು ಬಾಗಿಲುಗಳ ಕಿಟಕಿ ತೆಗೆಯದೆ ಗಾಜಿನ ಮೇಲೆ ಉಗುಳುತ್ತಾನೆ. ಈ ವಿಷಯಕ್ಕೆ ಬಲರಾಂ ಮತ್ತು ಟ್ಯಾಕ್ಷಿ ಚಾಲಕ ನಡುವೆ ಜಗಳವಾಗಿ ನೂರು ಕಿಲೊಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಕಾರ್ ರಾಮೇಶ್ವರಂ ಬಳಿ ಅಪಘಾತವಾಗುತ್ತದೆ. ಮನೆಯ ಯಜಮಾನನ ಮಾತಿಗೆ ಉಸಿರು ಎತ್ತಲಾರದ ತಾಯಿ, ಮಗಳು ಮತ್ತು ಮಗ ಮೌನವಾಗಿ ಚಡಪಡಿಸುತ್ತಿರಲಾಗಲೇ ಕಾರು ರಸ್ತೆಯಾಚೆಗೆ ಉರುಳಿ ಬೀಳುತ್ತದೆ. ಚಾಲಕನ ಕಾಲಿಗೆ ಪೆಟ್ಟು ಹಾಗೂ ಬಲರಾಂ ಮತ್ತು ಮಕ್ಕಳಿಗೆ ಸಣ್ಣ ಪುಟ್ಟ ಪೆಟ್ಟುಗಳಾಗುತ್ತವೆ. ಗೃಹಿಣಿ ಜಾನಕಿಯ ತಲೆಗ ಬಲವಾದ ಪೆಟ್ಟು ಬಿದ್ದಕಾರಣ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗುತ್ತದೆ.

ಗೆಳಯ ಚಾಲಕನ ಕಾಲಿಗೆ ಪೆಟ್ಟು ಬಿದ್ದ ಕಾರಣ ಆತನನ್ನು ನೋಡಲು ಬರುವ ನಾಯಕ ಮತ್ತ ಆತನ ಮಿತ್ರ ಪಾಂಡಿ ಇಬ್ಬರೂ ಅಯೋಧ್ಯೆಯಿಂದ ರಾಮೇಶ್ವರಕ್ಕೆ ಬಂದು ಅಪಘಾತಕ್ಕೆ ಈಡಾದ ಕುಟುಂಬನ್ನು ಸಂತೈಸುತ್ತಾರೆ. ಮಿದುಳೀಗೆ ತೀವ್ರವಾಧ ಪೆಟ್ಟು ತಿಂದ ಜಾನಕಿಯನ್ನ ಮಧುರೈಗೆ ತೆಗೆದುಕೊಂಡು ಹೋಗಬೇಕು ಎಂದಾಗ ಆ ದಿನ ದೀಪಾವಳಿ ಹಬ್ಬದ ಪ್ರಯುಕ್ತ ಯಾವ ಅಂಬುಲೆನ್ಸ್ ಚಾಲಕನೂ ದೊರೆಯುವುದಿಲ್ಲ.ಕೊನೆಗೆ ನಾಯಕ ಗೆಳೆಯನ ಅಂಬುಲೆನ್ಸ್ ಪಡೆದು ತಾನೇ ಡ್ರೈವ್ ಮಾಡಿಕೊಂಡು ಗೆಳೆಯ ಪಾಂಡಿಯನ್ನು ಕರೆದುಕೊಂಡು ಮಧುರೈಗೆ ಪ್ರಯಾಣಿಸುತ್ತಾನೆ. ಮಾರ್ಗ ಮಧ್ಯ ಜಾನಕಿ ಮೃತಪಟ್ಟಾಗ ನಿಜವಾದ ಸಮಸ್ಯೆ ಉದ್ಭವವಾಗುತ್ತದೆ.

ಬಲರಾಂ ಗೆ ತನ್ನ ಪತ್ನಿಯ ಶವವನ್ನು ಅಯೋಧ್ಯೆಗೆ ಕೊಂಡೊಯ್ಯಬೇಕು. ಆದರೆ, ಅದಕ್ಕೆ ಯಾವುದೇ ಕಾರಣಕ್ಕೂ ಶವ ಪರೀಕ್ಷೆ ನಡೆಯಕೂಡದು.ಇಂತಹ ನಂಬಿಕೆ ಅವನದು. ಅಯೋಧ್ಯೆಯ ಸ್ವಾಮೀಜಿ ಜೊತೆ ಮಾತನಾಡಿ ವಿಮಾನದಲ್ಲಿ ಶವ ತೆಗೆದುಕೊಂಡು ಹೋಗಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ಹೋದಾಗ ಸಮಸ್ಯೆ ಆರಂಭವಾಗುತ್ತದೆ. ಹೆಣ ಸಾಗಿಸಲು ಶವ ಪರೀಕ್ಷೆಯ ಜೊತೆಗೆ ಹತ್ತು ಬಗೆಯ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮ ಅರಿವಾಗುತ್ತದೆ. ಹೆಣವನ್ನು ಇಳಿಸಿ ಹೋಗಬೇಕು ಅನಿಸಿದರೂ ತಾಯಿಯ ನಿಧನದಿಂದ ರೋಧಿಸುವ ಪುತ್ರಿ ಹಾಗೂ ಪುಟ್ಟ ಮಗುವನ್ನು ನೋಡಿ ಹೋ್ಲಾರದ ನಾಯಕ ಮಧುರೈ ಆಸ್ಪತ್ರೆಗೆ ಕೊಂಡೊಯ್ದು ಶವ ಪರೀಕ್ಷೆ ಮಾಡಿಸಿ. ಯಜಮಾನನ ವಿರೋಧದ ನಡುವೆ ಶವ ಕೆಡದಂತೆ ಎಂಬಾಮಿಂಗ್ ಮಾಡಿಸುತ್ತಾನೆ.

ಅಪ್ಪನ ಮಾತಿಗೆ ಎಂದೂ ಎದುರಾಡದ ಬಾಲಕಿ ಆಸ್ಪತ್ರೆಯಲ್ಲಿ ಅಪ್ಪನನ್ನು ತರಾಟೆಗೆ ತೆಗೆದುಕೊಂಡು ಆತನ್ನು ಸುಮ್ಮನಿರಿಸುತ್ತಾಳೆ. ಶವ ಪರೀಕ್ಷೆ, ಪ್ರಮಾಣ ಪತ್ರ ಇವುಗಳಿಂ ದ ಹಿಡಿದು ಎಲ್ಲದಕ್ಕೂ ಖರ್ಚು ಮಾಡುವ ನಾಯಕ ಗೆಳೆಯರಿಂದ ಹಣ ಪಡೆದು ಎಲ್ಲಾ ವ್ಯವಸ್ಥೆ ಮಾಡುತ್ತಾನೆ. ಅಂತಿಮವಾಗಿ ಅವರಿಗೆ ವಿಮಾನದ ಟಿಕೇಟ್ ತೆಗೆದುಕೊಟ್ಟು ಕಳಿಸಿಕೊಡುವಾಗ ಅಯೋಧ್ಯೆಯ ಬಲರಾಂ ಕೇಳುತ್ತಾನೆ. ‘’ ಭಯ್ಯಾ ನಿನ್ನ ಹೆಸರೇನು’ ಎಂದು ಕೇಳಿದಾಗ ನಾಯಕ ‘ಅಬ್ದುಲ್ ರೆಹಮಾನ್’’ಎಂದು ಉತ್ತರಿಸುವಾಗ ಪ್ರೇಕ್ಷಕರ ಕಣ್ಣಲ್ಲಿ ಅರಿವಿಲ್ಲದೆ ನೀರು ಉದುರುತ್ತದೆ ಜೊತೆಗೆ ಬಲರಾಂ ಎದೆಯೊಳಗಿನ ಧರ್ಮ ಪ್ರಜ್ಞೆ ಆ ಕ್ಷಣಕ್ಕೆ ಅಳಿಸಿಹೋಗುತ್ತದೆ.

ಮಾಜಿ ರಾಷ್ಟ್ರಪತಿ ಅಬ್ದಲ್ ಕಲಾಂ ಜನಿಸಿದ . ರಾಮೇಶ್ವರಂ ಪಟ್ಟಣದಲ್ಲಿ ಅಪಾರ ಪ್ರಮಾಣಧ ಮುಸ್ಲಿಮರು ವಾಸಿಸುತ್ತಿದ್ದು ಅವರ ಪ್ರೀತಿ ವಿಶ್ವಾಸವನ್ನು ಕಣ್ಣಾರೆ ನೋಡಿರುವ ನನಗೆ ಈ ದೃಶ್ಯ ಮನಕಲಕಿತು. ಬಾಲಕಿಯ ಪಾತ್ರದಲ್ಲಿ ಪ್ರೀತಿ ಅಸ್ರಾಣಿ, ಬಾಲಕನ ಪಾತ್ರದಲ್ಲಿಅದ್ವೈತ್ ವಿನೋದ್ ನೀಡಿರುವ ಅಭಿನಯ ಮತ್ತು ಪತಿ ಮತ್ತು ಪತ್ನಿಯರಾಗಿ ಯಶಪಾಲ್ ಶರ್ಮ, ಅಂಜು ಅಸ್ರಾಣಿ ಎಲ್ಲರೂ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.

ಕೇವಲ ಎರಡು ದಿನದಲ್ಲಿ ನಡೆಯುವ ಘಟನೆಯನ್ನು ಇಷ್ಟು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವೆ ಎಂದು ನಿರ್ದೇಶಕ ಮಂದಿರಮೂರ್ತಿ ನಮ್ಮಲ್ಲಿ ಅಚ್ಚರಿ ಮೂಡಿಸುತ್ತಾನೆ. ಮಧುರೈ ಆಸ್ಪತ್ರೆಯ ದೃಶ್ಯ, ಶವಾಗಾರ, ವಿಮಾನ ನಿಲ್ದಾಣ, ಅಯೋಧ್ಯೆ ನಗರ ಮತ್ತು ರಾಮೇಶ್ವರಂ ಪಟ್ಟಣದ ರಸ್ತೆ ಮತ್ತು ಜನಜೀವನವನ್ನು ಕ್ಯಾಮರಾ ಮ್ಯಾನ್ ಅದ್ಭುತವಾಗಿ ಸೆರೆ ಹಿಡಿದಿದ್ದಾನೆ, ಸಿನಿಮಾ ನೋಡಿದ ನಂತರ ಇಡೀ ದಿನ ಕಾಡುವ ಕಥೆ ಇದು. ಖ್ಯಾತ ನಿರ್ದೇಶಕ ಭಾರತಿರಾಜ, ನಟ ರಜನಿಕಾಂತ್ ಈ ಸಿನಿಮಾ ಬಗ್ಗೆ ಮತ್ತು ನಟ ಶಶಿಕುಮಾರ್ ಮತ್ತು ನಿರ್ದೇಶಕನ ಕುರಿತಾಗಿ ಮನತುಂಬಿ ಹೊಗಳಿದ್ದಾರೆ. ದಯವಿಟ್ಟು ನೀವು ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply