ಕಾಡುವ ಕಿರಂ ೨೦೨೩: ದಶಮಾನದ ಕಾರ್ಯಕ್ರಮದಲ್ಲಿ ಶತಮಾನದ ಕಾವ್ಯ ಸಂಭ್ರಮ

3 years ago

#KaduvaKiram #Poetic #celebration #century #decade #program

‘ನಾಸ್ತಿ ಜಾಗರತೊ ಭಯಂ’ಎನ್ನುವ ಭಾವಕ್ಕೆ ಸಾಂಕೇತಕವಾಗಿ ‘ಕಿರಂ’ಎಂಬ ಸುಪ್ತ ಚೇತನದ ನೆನಹಿಗೆ ಒಂದಿಡಿ ದಶಕದಿಂದಲು ‘ಕಾವ್ಯನೆಪ’ದಲ್ಲಿ ಅಹೋರಾತ್ರಿ ನಮ್ಮನೆಲ್ಲ ಎಚ್ಚರದಿಂದಿರಿಸಿ ‘ಕಾಡುವ ಕಿರಂ-೨೦೨೩’ ನಾಮಾಂಕಿತದಲ್ಲಿ ನಾಡಿನ ವಿವಿಧ ಭಾಗದ, ವಿವಿಧ ಬಗೆಯ ಕವಿತೆಗಳನ್ನು ವೈಯಕ್ತೀಕರಿಸಿಕೊಂಡು, ವ್ಯಕ್ತಿವಿಶಿಷ್ಟ ನೆಲೆಯಲ್ಲಿ ಆಸ್ವಾದಿಸುವ ಅವಕಾಶವನ್ನಿತ್ತ ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ , ಹಿರಿಯರಾದ ಸಂಸ ಸುರೇಶ್, ಗೆಳೆಯರಾದ ಶಂಕರ್ ಸಿಹಿಮೊಗೆ ಮತ್ತು ಸೂರ್ಯಕೀರ್ತಿ ಒಳಗೊಂಡಂತೆ ಕಾರ್ಯಕ್ರಮದ ರೂವಾರಿಗಳೆಲ್ಲರಿಗೂ ಮೊದಲಿಗೆ ನನ್ನ ವಂದನೆಗಳನ್ನು ಇಲ್ಲಿ ಸಮರ್ಪಿಸದೆ ಇರಲಾರೆ.

ಏನಕೇನ, ನಾವು ಬರೆದ ಕವಿತೆ ನಮ್ಮ ಸುತ್ತಲಿನ ಸಮಾಜವನ್ನು, ಜಡ್ಡುಗಟ್ಟಿದ ವ್ಯವಸ್ಥೆಯನ್ನು ರಾತ್ರೋರಾತ್ರಿ ಬದಲಿಸಿಬಿಡುತ್ತದೆ ಎಂಬೆಲ್ಲ ಬೋಳೇತನವನ್ನು ಬಿಟ್ಟು, ಕವಿ ಮತ್ತು ಕವಿತ್ವಕ್ಕೆ ಕುತ್ತು ಬಂದೊದಗಿದ ಇಂತಹ ದುರಿತ ಕಾಲದಲ್ಲಿ ಪ್ರಶಸ್ತಿ, ಪುರಸ್ಕಾರ, ಫೇಮಸ್ಸಾಗುವಿಕೆ ಈ ಎಲ್ಲವನ್ನೂ ಬದಿಗಿಟ್ಟು ಕಾವ್ಯವನ್ನು ಇನ್ನಿಲ್ಲದಂತೆ ಪ್ರೀತಿಸುವವರೆಲ್ಲ ಕಾವ್ಯದ ಹೆಸರಲ್ಲಿ ಒಗ್ಗಟ್ಟಾಗಿ ಕಲೆತು, ಕೂತು, ಹರಟಿ, ಅವರ ಕವಿತೆಯನ್ನು ಇವರು ಇವರ ಕವಿತೆಯನ್ನು ಕೇಳಿಸಿಕೊಳ್ಳುವುದೇ ಇಂದಿನ ಕಾವ್ಯಕ್ಕೆ ಸಲ್ಲಬಹುದಾದ ಬಹುದೊಡ್ಡ ಪ್ರಯೋಜನ.

ಪರಂಪರೆಯಿಂದ ಅದಾಗಲೆ ಬಹುದೂರ ಸಾಗಿರುವ ಸ್ವಯಂ ಪ್ರಕಟಣೆಯ ಸೌಲಭ್ಯಾಲಂಕೃತ ಕವಿಗಳಿಗೆ ವಿಮರ್ಶೆಯ ನೆಲೆಗಳನ್ನು ಅರಿಯಲು, ಪರಂಪರೆಯೊಂದಿಗೆ ಬೆಸೆದುಕೊಳ್ಳಲು ಇಂತಹ ಕಾರ್ಯಕ್ರಮಗಳು ಅವಕಾಶದ ಬಾಗಿಲನ್ನು ತೆರೆದರೆ ಆಯೋಜಕರಿಗೆ ಅದಕಿಂತ ಸಾರ್ಥಕ್ಯವೇನಿದೆ? ಈ ನಿಟ್ಟಿನಲ್ಲಿ ದಶಮಾನೋತ್ಸವ ಸಂಭ್ರಮದ ಈ ಬಾರಿಯ ‘ಕಾಡುವ ಕಿರಂ – ೨೦೨೩’ಪೂರ್ವಕವಿ ಸ್ಮರಣೆಯಷ್ಟೇ ಆಗಿರದೆ ತಮಗೆ ಋಣದ ಗಣಿಯಾದ ಪರಂಪರೆಯ ಹರಹನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂಬುದು ನನಗೆ ತಿಳಿದ ಮಟ್ಟಿಗೆ ಭಾಗವಹಿಸಿದವರ ಅಭಿಪ್ರಾಯವೂ ಹೌದು. ವರ್ತಮಾನದ ಕನ್ನಡಿಯಲ್ಲಿ ಕಂಡ ಕಾವ್ಯದ ಮೌಲ್ಯಾಂಕನಕ್ಕೆ ಮುಂದಾದ ಹಿರಿಯರೊಂದಿಗೆ ಕಿರಿಯರು ಒಂದಾಗಿ ಬೆರೆತು ಒಂದಷ್ಟು ಕಲಿತು ತನ್ಮೂಲಕ ಕನ್ನಡ ಕಾವ್ಯಾನುಸಂಧಾನಕ್ಕೆ ದನಿಯಾದದ್ದು ಕನ್ನಡ ಕಾವ್ಯದ ಚಲನಶೀಲತೆಯ ಮಟ್ಟಿಗೆ ನಿಜಕ್ಕೂ ಆಶಾದಾಯಕ ಬೆಳವಣಿಗೆಯೆ ಸರಿ.

ಕೃತಿ ನಿರ್ಮಿತಿ ಒಂದು ಭಾಷೆಯ ಹಾಗೂ ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿ ನಡೆಯುವ ಕ್ರಿಯೆ ಎನ್ನುವ ಬಗ್ಗೆ ನಿಚ್ಚಳವಾದ ಅರಿವನ್ನು ಇರಿಸಿಕೊಂಡ ಪ್ರತೀ ಗೋಷ್ಠಿಯೂ ಹೊಸಜನದ ಜೊತೆಗಿನ ಹೊಸತನದಲ್ಲಿ ಒಂದೊಂದು ಡಿಸ್ನಿ ವಂಡರ್ ಲ್ಯಾಂಡಿನ ಪ್ರವಾಸದಂತೆ ಭಾಸವಾಗುತ್ತಿತ್ತು. ಕಾರ್ಯಕ್ರಮದ ಅಚ್ಚುಕಟ್ಟುತನ, ಸಮಯ ನಿರ್ವಹಣೆ ಪ್ರತೀ ಗೋಷ್ಠಿಯಲ್ಲೂ ಅನುಕರಣಾತ್ಮಕ ಕಾವ್ಯಗಳಿಗಿಂತ ವಿಭಿನ್ನ ಕವಿತೆಗಳು ಹೊರಹೊಮ್ಮಿದ್ದು ಈ ಬಾರಿಯ ವಿಶೇಷ.

ಚಳುವಳಿಗಳು ಮರೆಯಾದ ಕಾಲಕ್ಕೆ ಬಳುವಳಿಯಾಗಿ ಕಾಡುವ ಕಿರಂ ನಂತಹ ಕಾರ್ಯಕ್ರಮಗಳು ಭಾಸವಾಗುವುತ್ತಿರುವುದಕ್ಕೆ ಕಳೆದ ಹತ್ತು ವರ್ಷಗಳಿಂದ ಇಂತಹ ಕಾರ್ಯಕ್ರಮಕ್ಕೆ ರೂಪು-ರೇಷೆಗಳನ್ನು ಒದಗಿಸಿಕೊಟ್ಟ ಎಲ್ಲರೂ ಕಾರಣ.

ಕವಿತೆಯ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಹೊಸಬೆಳಕು ಚಲ್ಲಿದ ಓದುಗಬ್ಬವನ್ನು, ಹಾಡುಗಬ್ಬವಾಗಿಸಿದ್ದು ಮಾತ್ರ ನಾಡಿನ ಹೆಮ್ಮೆಯ ಜನಪದ ಕಲಾವಿದರಾದ ಸಿ. ಎಂ.ನರಸಿಂಹ ಮೂರ್ತಿ, ಕೆ.ಎಸ್. ಮಂಜುನಾಥ್, ಶಂಕರ್ ಭಾರತೀಪುರ ಮತ್ತು ನನ್ನ ಅಚ್ಚುಮೆಚ್ಚಿನ ಜನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರು ಹಾಡಿ ನಲಿ(ಸಿ)ದ ನೆಲೆಮೂಲ ಸಂಸ್ಕೃತಿಯ ‘ಮಂಟೆಸ್ವಾಮಿ ಕಾವ್ಯ’, ಭಾವೈಕ್ಯತೆಯ ಸೊಗಡಿನ ಶರೀಫರ ತತ್ವಪದಗಳು.

ಉಳಿದಂತೆ ಮುಖಪುಸ್ತಿಕೆಯ ಮರೆತು ಹೋಗಿದ್ದ ಹಳಬರ ಮರೆಯಬಹುದಾದ ಹೊಸಬರ ಮುಖತಃ ಭೇಟಿ, ಮಾತು ಮುದಗೊಳಿಸಿದವು. ಅಜ್ಞಾತ ಓದುಗ ಬಂಧುಗಳು ಬರಿಯ ಕಾವ್ಯ ಕೇಳುವಿಕೆಗಾಗಿ ಬಂದು ಜೊತೆಗೂಡಿದ್ದು ಸಂತಸದ ಬೆರಗಿಗೆ ಮೆರಗು ತಂದುಕೊಟ್ಟಾಂತಾಯಿತು.

ಓದುವ ಸಂಸ್ಕೃತಿಯೆ ಕಾಣೆಯಾಗುತ್ತಿದೆ ಎಂಬ ಕೂಗು ದಟ್ಟವಾಗುತ್ತಿರುವ ಸಂದರ್ಭದಲ್ಲಿ ಸುಮಾರು ೨೦೦೦೦ ರೂ.ಗಳ ಪುಸ್ತಕಗಳು ಈ ಬಾರಿಯ ಕಾರ್ಯಕ್ರಮದ ಅಂಗವಾಗಿ ದಾಖಲೆಯ ಮಾರಾಟ ಕಂಡದ್ದು ಸಂಪಾದಕ, ಮುದ್ರಕ ಮತ್ತು ಪ್ರಕಾಶಕರ ಸಂತಸಕ್ಕೆ ಕಾರಣವಾದದ್ದು ಬಹು ವಿಶೇಷ.

ಹೊರಳು ದಾರಿಯಲ್ಲಿರುವ ಕನ್ನಡ ಕಾವ್ಯಕ್ಕೆ ಕಾಯಕಲ್ಪ ಕಲ್ಪಿಸುವಲ್ಲಿ ಜೀವಜೀವೋನ್ಮೇಷಶಾಲಿನಿಯಾದ ಇಂತಹ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಲಿ ಎಂದು ಆಶಿಸುತ್ತ ಮುಂದಿನ ‘ಕಾಡುವ ಕಿರಂ – ೨೦೨೪’ಗೆ ತಮ್ಮೆಲ್ಲರ ಕವಿತೆಗೆ ಕಿವಿಯಾಗುವುದಕ್ಕೆ, ಭೇಟಿಗೆ, ಮಾತಿಗೆ-ನಗೆಗೆ ಮತ್ತೆ ಎದುರು ನೋಡುತ್ತೇನೆ.

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೋ ಏನೋ
ಯಾಕ ಹಿಂಗ ಅಸರಂತ ಕೂಗತದೋ ಏನು ಇದಕ ಬಾನ್ಯೋ
ಸುತ್ತ ಗುಡ್ಡ ನುಗ್ಗಾಗಿ ಹೋದವೋ ಇದಕ ಓ ಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದs ಮಳಿಯ ಹದಕs

  • ಅಂಬಿಕತನಯದತ್ತ
  • ರಾಜ್ ಆಚಾರ್ಯ

Leave a Reply