ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನೇಮಕ, ವಿಪಕ್ಷ ನಾಯಕನ ಆಯ್ಕೆ ಕುರಿತ ವರಿಷ್ಠರ ತೀರ್ಮಾನದಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಅಧ್ಯಕ್ಷ ವಿಜಯೇಂದ್ರ ಮುಂದಾಗಿದ್ದಾರೆ.
ವಿಪಕ್ಷ ನಾಯಕನ ಆಯ್ಕೆಗಾಗಿ ಕರೆದಿದ್ದ ಬಿಜೆಪಿ ಶಾಸಕಾಂಗ ಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ವಿಜಯೇಂದ್ರ ಉಪಹಾರ ಸೇವಿಸಿ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಜಾರಕಿಹೊಳಿ ಅವರಿಗೆ ಕರೆ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪುತ್ರನಿಗೆ ಸಹಕಾರ ಕೊಡುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಸಮರ್ಥವಾಗಿ ಸಂಘಟಿಸಬೇಕು ಇದಕ್ಕೆ ನಿಮ್ಮ ಸಹಕಾರಬೇಕಿದೆ ಎಂದು ಮನವಿ ಮಾಡಿದರು ಎನ್ನಲಾಗಿದೆ.
ಅನಂತರ ವಿಜಯೇಂದ್ರ ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾದರು. ಈ ವೇಳೆ ತಾವು ಹಿರಿಯರು ನನಗೆ ತಮ್ಮ ಮಾರ್ಗದರ್ಶನ ಅಗತ್ಯ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷದ ಹಿತದೃಷ್ಟಿಯಿಂದ ತಮ್ಮೊಂದಿಗೆ ಸಹಕರಿಸುವಂತೆ ವಿಜಯೇಂದ್ರ ಮನವಿ ಮಾಡಿದರು ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಸೋಲು ಹಲವರನ್ನು ಧೃತಿಗೆಡುವಂತೆ ಮಾಡಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಹೊಸ ಉತ್ಸಾಹ ಮೂಡಿಸಬೇಕು. ಈ ವಿಷಯದಲ್ಲಿ ತಮ್ಮ ಸಹಕಾರ ಅಗತ್ಯ. ನೀವು ಹೇಳಿದಂತೆ ಕೇಳುತ್ತೇನೆ. ಒಟ್ಟಿಗೆ ಕೆಲಸ ಮಾಡೋಣಾ ಎಂದು ಹೇಳಿದರು ಎಂದು ವರದಿಯಾಗಿದೆ.

ವರಿಷ್ಠರು ಈ ಹಿಂದೆ ನಮಗೆ ಇಷ್ಟವಿಲ್ಲದಿದ್ದರೂ ಕೆಲವು ನಿರ್ಧಾರಗಳನ್ನು ಕೈಗೊಂಡಾಗ ನಾವು ಕೂಡ ಒಪ್ಪಿಕೊಂಡಿದ್ದೇವೆ. ನನ್ನನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ವರಿಷ್ಠರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪಕ್ಷ ಸಂಘಟನೆ ಮಾಡುತ್ತೇನೆ. ಒಂದು ಪಕ್ಷವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಎಲ್ಲವನ್ನು ಬದಿಗೊತ್ತಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಮನವಿ ಮಾಡಿರುವುದಾಗಿ ಹೇಳಲಾಗಿದೆ.

ಇದಕ್ಕೆ ಸ್ಪಂದಿಸಿದ ಜಾರಕಿಹೊಳಿ, ನನಗೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧವಿಲ್ಲ. ಆದರೆ ರಾಜ್ಯ ನಾಯಕರ ಬಳಿ ಒಂದು ಬಾರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನನ್ನ ಒತ್ತಾಸೆಯಾಗಿತ್ತು. ಹಿಂದೆ ಕಷ್ಟಕಾಲದಲ್ಲಿದ್ದಾಗಲೂ ಯಡಿಯೂರಪ್ಪನವರ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಯಾವುದೇ ನಿರ್ಧಾರ ಪಕ್ಷದ ವೇದಿಕೆಯಲ್ಲೇ ತೀರ್ಮಾನವಾಗಬೇಕು. ಆತುರದ ಇಲ್ಲವೇ ಯಾರದೋ ಒತ್ತಡಕ್ಕೆ ಮಣಿದು ತೀರ್ಮಾನಿಸಬೇಡಿ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪಕ್ಷ ಸಂಘಟನೆಗೆ ಒತ್ತು ಕೊಡಿ. ನಿಮ್ಮೊಂದಿಗೆ ನಾವು ಕೂಡ ಇರುತ್ತೇವೆ ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಏನೇ ಅಸಮಾಧಾನವಿದ್ದರೂ ವರಿಷ್ಠರು ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಸೇರಿದಂತೆ ಎಲ್ಲ ಹಂತದಲ್ಲೂ ಬಿ.ವೈ.ವಿಜಯೇಂದ್ರ ಅವರಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.
ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಚರ್ಚಿಸಿ ಪರಿಹರಿಸಿಕೊಳ್ಳಲಾಗುವುದು. ವರಿಷ್ಠರ ತೀರ್ಮಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕೆ ನಾನು ಕೂಡ ಹೊರತಾಗಿಲ್ಲ. ಬುಧವಾರ ನಾನು ಮಾಜಿ ಸಚಿವರಾದ ವಿ.ಸುನೀಲ್‍ಕುಮಾರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಮನೆಯಲ್ಲೇ ಸಭೆ ಸೇರಿ ಪಕ್ಷದ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಿದ್ದೇವೆ. ಅಸಮಾಧಾನವೆಂಬುದು ಮುಗಿದ ಅಧ್ಯಾಯ. ವಿಜಯೇಂದ್ರ ಇನ್ನು ಮುಂದೆ ನಮ್ಮ ಹುಡುಗ. ಅವರಿಗೆ ಸಹಕಾರ ನೀಡಲಿದ್ದೇವೆ ಎಂದರು.
ಪಕ್ಷದ ಕೆಲವು ತೀರ್ಮಾನಗಳಿಂದ ಬೇಸರವಾಗಿದ್ದು ನಿಜ. ಇದನ್ನೇ ವಿವಾದ ಮಾಡಿದರೆ ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಗಲಿದೆ. ಬರುವ ದಿನಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಕೊಡಬಾರದು. ಇನ್ನು ಮುಂದೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಲು ವಿಜಯೇಂದ್ರಗೆ ಸಲಹೆ ಕೊಟ್ಟಿದ್ದೇನೆ. ಅವರು ಎಲ್ಲವನ್ನು ಸಹನೆಯಿಂದ ಕೇಳಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಗೆ ಖಂಡಿತವಾಗಿಯೂ ಒಳ್ಳೆಯ ದಿನಗಳು ಬರಲಿವೆ ಎಂದರು.




