ಇದು ಗಾಂಧಿ ಹತ್ಯೆಯ ‘ಸತ್ಯಾನ್ವೇಷಣೆಯ ಕಥೆ’
ನೀವು ಓದಬೇಕಾದ ಒಂದು ಪುಸ್ತಕ
ಪ್ರಖರ ಚಿಂತಕರಾದ ಎ.ನಾರಾಯಣ ಮತ್ತು ಗೆಳೆಯ ಮನೋಜಕುಮಾರ್ ಗುದ್ದಿ ಅವರು ಅನುವಾದಿಸಿದ ದೀರೇಂದ್ರ ಕೆ.ಝಾ ಅವರ (‘Gandhi Assassin’) ‘ಗಾಂಧೀಜಿಯ ಹಂತಕ’ ಕೃತಿಯು ನಾನು ಈಚೆಗೆ ಓದಿದ ಅತಿ ಮಹತ್ವದ ಪುಸ್ತಕ.
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
- ರೌಡಿಗಳ ಜೊತೆ ಸೆಲ್ಫಿ, ಡ್ರಗ್ಸ್ ದಂಧೆಗೆ ಬ್ರೇಕ್
- ಅಥಣಿಯಲ್ಲಿ ಭೀಕರ ಅಪಘಾತ: ಟಿಪ್ಪರ್ ಹರಿದು ವೃದ್ಧ ಸ್ಥಳದಲ್ಲೇ ಸಾವು
ಗಾಂಧಿವಾದಿಗಳು ಎಂದು ಹೇಳಿಕೊಳ್ಳುವವರು ಜಿಲ್ಲಾವಾರು/ತಾಲೂಕವಾರು ಈ ಪುಸ್ತಕದ ಚರ್ಚೆ ಸಂವಾದವನ್ನು ಇಟ್ಟುಕೊಳ್ಳಬೇಕು. ಕಾರಣ ಗಾಂಧಿ ಹತ್ಯೆಯ ಬಗೆಗೆ ಇರುವ ಸುಳ್ಳು-ಹುಸಿ ಮಿಥ್ ಗಳನ್ನು ಈ ಪುಸ್ತಕ ಒಡೆಯುತ್ತದೆ. ಗಾಂಧಿ ಹತ್ಯೆಯ ಶೋಧದ ಮೂಲಕ ಭಾರತದ ‘ಹಿಂಸಾವಾದ’ ದ ಬೆಳವಣಿಗೆಯನ್ನೂ ಕಟ್ಟಿಕೊಡಲಾಗಿದೆ.
ದೀರೇಂದ್ರ ಝಾ ಅವರು ‘ಗಾಂಧಿ ಹತ್ಯೆ’ ಯಂತಹ ಭಾರತದ ಒಂದು ಚಾರಿತ್ರಿಕ ಅನ್ಯಾಯದ ಈ ಘಟನೆಯನ್ನು ಬಹಳ ಎಚ್ಚರಿಕೆಯಿಂದಲೂ ಜಾಗರೂಕತೆಯಿಂದಲೂ ಕರಾರುವಕ್ಕಾಗಿ ಅಧಿಕೃತ ದಾಖಲೆಗಳ ಮೂಲಕ ಕಥನ ಕಟ್ಟುತ್ತಾ ಹೋಗಿದ್ದಾರೆ. 328 ಪುಟದ ಈ ಪುಸ್ತಕದಲ್ಲಿ ಅಡಿಟಿಪ್ಪಣಿ ಮತ್ತು ಆಕರಗ್ರಂಥಗಳ ಪಟ್ಟಿಯೇ 40 ಪುಟದಷ್ಟಿದೆ. ಊಹೆಯ ಮೂಲಕವೋ ಅಂತೆ-ಕಂತೆಗಳ ಹೇಳಿಕೆಗಳ ಮೂಲಕವೋ ರೂಪಗೊಂಡ ಸಂಶೋಧನೆ ಇದಲ್ಲ. ಒಂದರ್ಥದಲ್ಲಿ ಗಾಂಧೀಜಿಯ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆಯ ಕತೆ’ ಯಂತೆ ಇದು ಗಾಂದೀಜಿ ಹತ್ಯೆಯ ಸತ್ಯಾನ್ವೇಷಣೆಯ ಕಥೆಯಾಗಿದೆ.
ಗಾಂಧಿ ಹತ್ಯೆಯು ‘ಗೋಡ್ಸೆ’ ಎಂಬ ಏಕ ವ್ಯಕ್ತಿಯದಲ್ಲ. ಇದೊಂದು ಸಾಂಸ್ಥಿಕ ಕೊಲೆ. ಗೋಡ್ಸೆಯನ್ನು ಒಂದು ಆಯುಧವನ್ನಾಗಿ ಬಳಸಿಕೊಂಡ ಸಂಸ್ಥೆ ಯಾವುದು? ಅದು ಹೇಗೆ ಗೋಡ್ಸೆಯ ಒಳಗೆ ಹಿಂಸೆಯ ಬೀಜಗಳನ್ನು ಬಿತ್ತನೆ ಮಾಡಿತು. ಮುಂತಾದ ಸಾಂಸ್ಥಿಕ ಕೊಲೆಯ ಸಂಚು-ಹತ್ಯೆ- ನಂತರದ ಬೆಳವಣಿಗೆಯನ್ನು ಅಪಾರ ಅಧ್ಯಯನ, ಹಲವರ ಸಂದರ್ಶನ, ಅಪರೂಪದ ಆಕರಗಳ ಮೂಲಕ ಕಟ್ಟಿ ಕೊಡಲಾಗಿದೆ. ಹಾಗಾಗಿ ಇದೊಂದು ಗಂಭೀರ ಸಂಶೋಧನ ಕೃತಿ ಇದಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ಓದಲೆಬೇಕಾದ ಪುಸ್ತಕವೂ ಇದಾಗಿದೆ.
ಇಂತಹದ್ದೊಂದು ಮಹತ್ವದ ಕೃತಿಯನ್ನು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಅವರು ಪ್ರಕಟಿಸಿದ್ದಾರೆ. ಸಾಧ್ಯವಾದರೆ ಓದಿ. ಚರ್ಚಿಸಿ. ಇದು ಹಿಂಸಾವಾದದ ವಿರುದ್ಧದ ನಮ್ಮದೊಂದು ಸಣ್ಣ ದನಿಯಾಗಲಿ.
– ಡಾ ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು


