ಮಾಧ್ಯಮಗಳು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಹಾಗಂತ ನಾವೆಲ್ಲ ನಂಬಿಕೊಂಡಿದ್ದೆವು. ಆದರೆ ಅದು ಸುಳ್ಳೆಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. `ನಾಸೀರ್ ಸಾಬ್ ಜಿಂದಾಬಾದ್’ ಘೋಷಣೆಯನ್ನು `ಪಾಕಿಸ್ತಾನ್ ಜಿಂದಾಬಾದ್’ ಎಂದು ತಿರುಚಿದ ರೀತಿಯಲ್ಲೇ ಮಾಧ್ಯಮಗಳ ಅದಃಪತನ ಮತ್ತೊಮ್ಮೆ ದೃಢಪಟ್ಟಿದೆ. ಕಳೆದ ವರ್ಷ ಸಿ.ಎಸ್.ಡಿ.ಎಸ್-ಲೋಕನೀತಿ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ, ಶೇ. 82ರಷ್ಟು ಹಿರಿಯ ಪತ್ರಕರ್ತರು “ಇವತ್ತಿನ ಮೀಡಿಯಾಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ” ಎಂದಿದ್ದರು. ಅಲ್ಲದೇ, ಶೇ.61ರಷ್ಟು ಹಿರಿಯ ಪತ್ರಕರ್ತರು “ಮೀಡಿಯಾಗಳು (ರಾಷ್ಟ್ರೀಯ) ವಿರೋಧ ಪಕ್ಷಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ” ಎಂದಿದ್ದರು. (https://www.newsclick.in/75-journalists-believe-news-channels-are-less-free-do-their-job-lokniti-csds-survey)
ಅದೆಲ್ಲ ಹಾಳಾಗಿ ಹೋಗಲಿ, ಈಗ ನಾಸೀರ್ ಹುಸೇನ್ ಪ್ರಕರಣವನ್ನು ಮುಂದಿಟ್ಟುಕೊಂಡು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೈಮೇಲೆ ಬಂದಂತೆ ಅರಚಾಡುತ್ತಿರುವ ಟೀವಿ ಪತ್ರಕರ್ತರಿಗೆ ನಾನು ಎರಡೇ ಎರಡು ಪ್ರಶ್ನೆ ಕೇಳಲು ಬಯಸುತ್ತೇನೆ.
ಮೊದಲನೆಯದು; ಒಬ್ಬ ಮುಸಲ್ಮಾನ ಎನ್ನುವ ಕಾರಣಕ್ಕೆ ನಾಸೀರ್ ಹುಸೇನ್ ಮೇಲೆ, ಪಾಕ್ ಘೋಷಣೆಯ ಆರೋಪ ಹೊರಿಸಿ, ಏಕಾಏಕಿ ಆತನನ್ನು ಹಾಗೂ ಆತನ ಹಿಂಬಾಲಕರನ್ನು ದೇಶದ್ರೋಹಿಗಳೆಂದು ತೀರ್ಪು ನೀಡಿ, ಗಲ್ಲು ಶಿಕ್ಷೆಗೆ ಆಗ್ರಹಿಸಿ ಅಬ್ಬರಿಸುತ್ತಿರುವ ಮೀಡಿಯಾ ಮಹಾತ್ಮರೇ, ಅವತ್ತು ಕೆರೆಗೋಡು ಧ್ವಜ ಪ್ರಕರಣದಲ್ಲಿ ನಮ್ಮ ರಾಷ್ಟ್ರಪ್ರೇಮದ ಸಂಕೇತವಾದ ತ್ರಿವರ್ಣ ಧ್ವಜವನ್ನು `ತಾಲಿಬಾನ್ ಧ್ವಜ’ ಎಂದು ಕರೆದು ದ್ರೋಹವೆಸಗಿದ್ದ ಬಿಜೆಪಿಯ ಸಿ ಟಿ ರವಿ ವಿರುದ್ಧವೂ ನೀವು ಇಷ್ಟೇ ತೀಕ್ಷ್ಣವಾಗಿ ಅಬ್ಬರಿಸಿದ್ದಿರಾ? ಅವತ್ತು ಆ ಬಿಜೆಪಿ ನಾಯಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು ನಿಮ್ಮ ಪ್ರಕಾರ ದೇಶದ್ರೋಹವಾಗಿರಲಿಲ್ಲವೇ? ಅಥವಾ ಮಾಫಿ ಮಾಡಬಹುದಾದ ಕ್ಷುಲ್ಲಕ ಪ್ರಕರಣವಾಗಿತ್ತೆ? ಆಗ ಎಲ್ಲಿ ಹೋಗಿತ್ತು ನಿಮ್ಮ ರಾಷ್ಟ್ರಭಕ್ತಿ?
ಎರಡನೆಯದು; ನಾವೆಲ್ಲ, ಅಂದರೆ ನಿಮ್ಮನ್ನೂ ಸೇರಿ ಸಮಸ್ತ ಭಾರತೀಯರೆಲ್ಲ, ಭಾರತೀಯ ಸಂಸತ್ತನ್ನು ದೇಶದ ಆತ್ಮವೆಂದು ಭಾವಿಸಿದ್ದೇವೆ. ಅಂತಹ ಸಂಸತ್ತಿನೊಳಕ್ಕೆ ನುಸುಳಿ, ಅಧಿವೇಶನ ನಡೆಯುತ್ತಿರುವಾಗಲೇ ಸ್ಮೋಕ್ ಬಾಂಬ್ ಎಸೆದು ದಾಳಿ ಮಾಡಿದ್ದು ನಿಮಗೆ ನಿನಪಿದೆ ತಾನೇ… ಆ ದಾಳಿಕೋರರಿಗೆ ಒಳ ನುಸುಳಲು ಪಾಸ್ ನೀಡಿದ್ದು ಯಾರು? ನಿಮ್ಮ ಪ್ರೀತಿಪಾತ್ರ ಬಿಜೆಪಿ ಪಕ್ಷದ ಸಂಸದ, ಪ್ರತಾಪ್ ಸಿಂಹ! ದೇಶದ ಆತ್ಮದ ಮೇಲೆ ನಡೆದ ದಾಳಿಗೆ ಪಾಸ್ ಕೊಟ್ಟು ಕುಮ್ಮಕ್ಕು ನೀಡಿದ್ದು ದೇಶದ್ರೋಹವಲ್ಲವೇ? ಈಗ ಕಲ್ಪಿತ ಘೋಷಣೆಯನ್ನಿಟ್ಟುಕೊಂಡು ನಾಸೀರ್ ಹುಸೇನ್ ಮೇಲೆ ಅರಚಾಡುತ್ತಿರುವ ನೀವೆಲ್ಲ, ಅವತ್ತು ಪ್ರತಾಪ್ ಸಿಂಹನ ವಿರುದ್ಧವೂ ಇಷ್ಟೇ ಪ್ರಾಮಾಣಿಕ ಆಕ್ರೋಶ, ಅಬ್ಬರ, ಅರಚಾಟ ಹೊರಹಾಕಲಿಲ್ಲವೇಕೆ? ಅವತ್ತು ನಿಮ್ಮೊಳಗೆ ರಾಷ್ಟ್ರಪ್ರೇಮ ಮರಗಟ್ಟಿ ಹೋಗಿತ್ತೆ?
ಮಾಧ್ಯಮಗಳು ಇವತ್ತು ಅಕ್ಷರಶಃ ಬಿಜೆಪಿಯ ಬೂಟು ನೆಕ್ಕುತ್ತಿವೆ ಎನ್ನಲು ನಿಮ್ಮ ಇಂತಹ ಕುಕೃತ್ಯ ವರದಿಗಾರಿಕೆಯೇ ಸಾಕ್ಷಿ. ಹೌದು, ಒಪ್ಪಿಕೊಳ್ಳುತ್ತೇವೆ… ಪ್ರಶ್ನೆ ಮಾಡುವುದು ನಿಮ್ಮ ಹಕ್ಕು; ವಿಮರ್ಶೆ ಮಾಡುವುದು ನಿಮ್ಮ ಕರ್ತವ್ಯ. ಆದರೆ ಆ ಹಕ್ಕು ಮತ್ತು ಕರ್ತವ್ಯಗಳ ಪಾಲನೆಯಲ್ಲಿ ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಪಾಲಿಸದಿರುವುದು ನೀವು ಎಸಗುತ್ತಿರುವ ಮಹಾದ್ರೋಹ. ಇಂಥಾ ದ್ರೋಹದಿಂದಲೇ ಇವತ್ತು ಮಾಧ್ಯಮಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ. ಯಾವುದೇ ವೃತ್ತಿಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ಆ ವೃತ್ತಿಯಿಂದ ನಾವು ಏನೆಲ್ಲ ಗಳಿಸಿದೆವು ಎನ್ನುವುದಕ್ಕಿಂತ, ಆ ಕ್ಷೇತ್ರದ ಮುಂಬರುವ ಪೀಳಿಗೆಗೆ ನಾವು ಏನನ್ನು ಉಳಿಸಿಹೋಗುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲ ದೊಡ್ಡ `ಜೀರೋ’ಗಳು! ನೆನಪಿರಲಿ…
ನಾನು ಎತ್ತಿರುವ ಈ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿಲ್ಲವೆನ್ನುವುದು ನನಗೆ ಗೊತ್ತು, ಆದರೂ ಈ ಪ್ರಶ್ನೆಗಳನ್ನು ನಿಮ್ಮ ಮುಂದಿಟ್ಟಿದ್ದೇನೆ; ಬಾಯಿಗೆ ಬಂದಂತೆ ಮತ್ತೊಬ್ಬರನ್ನು ಪ್ರಶ್ನಿಸುವ ನಿಮ್ಮ ಕುತ್ತಿಗೆಯ ಕಾಲರ್ ಪಟ್ಟಿಯನ್ನೂ ಹಿಡಿದು ಕೇಳಲು ಒಂದಷ್ಟು ಪ್ರಶ್ನೆಗಳು ಕಾದಿವೆ ಎಂಬ ವಿಚಾರ ನಿಮ್ಮ ಗಮದಲ್ಲಿರಲೆಂದು. ನಿಮ್ಮನ್ನು ನೀವು ಸರಿಪಡಿಸಿಕೊಳ್ಳದಿದ್ದರೆ ಈ ಪ್ರಶ್ನೆಗಳು ಬೆಳೆದು ಅಸಂಖ್ಯವಾಗಿ ಬೀದಿಬೀದಿಯಲ್ಲಿ ನಿಮ್ಮನ್ನು ಜಗ್ಗಾಡಲಿವೆ…
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




