ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ನೀಡಿದ ಲೇಖಕಿ, ಹೆಣ್ಣಿನ ಮನದಾಳದ ನೋವನ್ನು ಬರಹದ ಮೂಲಕ ತಂದ ಹೆಗ್ಗಳಿಕೆಯ ಬರಹಗಾರ್ತಿ. ತಮ್ಮ ಕಥೆ-ಕಾದಂಬರಿಗ ಮೂಲಕ ಹೊಸ ಓದುಗರನ್ನು ಸೃಷ್ಟಿ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ನೀಡಿ ಸಂಚಲನ ಮೂಡಿಸಿದವರು ತ್ರಿವೇಣಿ ಅವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಹಿರಿಯ ಕಾದಂಬರಿಗಾರ್ತಿ ತ್ರಿವೇಣಿ ಅವರ ೯೫ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕವರ್ಗದಲ್ಲಿ ಅವರನ್ನು ಅಮರವಾಗಿಸಿವೆ. ಅವರು ಬರೆದ ಮೊದಲ ಕಾದಂಬರಿ ‘ಅಪಸ್ವರ’ವಾದರೂ ಮೊದಲು ಪ್ರಕಟವಾದದ್ದು ‘ಹೂವು ಹಣ್ಣು’. ಸ್ವಾವಲಂಬಿಯಾಗಿ, ಸ್ವತಂತ್ರಳಾಗಿ ಬಾಳಬೇಕೆಂಬ ಹಿರಿಯಾಸೆ ಹೊತ್ತು ಬಂದ ಹೆಣ್ಣು ಪರಾವಲಂಬಿಯಾದರೆ ಅವಳ ಬಾಳು ಎಷ್ಟು ಅಸಹನೀಯವಾಗುತ್ತದೆ ಎಂಬುದನ್ನು ‘ಅಪಸ್ವರ’, ‘ಅಪಜಯ’ ಕಾದಂಬರಿಗಳು ಚಿತ್ರಿಸುತ್ತವೆ ಎಂದರು.
ತ್ರಿವೇಣಿ ಅವರ ‘ಬೆಳ್ಳಿ ಮೋಡ’ ಮತ್ತು ‘ಶರಪಂಜರ’ ಕಾದಂಬರಿಗಳನ್ನು ಪುಟ್ಟಣ್ಣ ಕಣಗಾಲ್ ಚಲನಚಿತ್ರವಾಗಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ಕಾದಂಬರಿಯನ್ನು ವಿಠಲ್ ಮತ್ತು ‘ಹೂವು ಹಣ್ಣು’ ಕಾದಂಬರಿಯನ್ನು ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಚಲನಚಿತ್ರವಾಗಿಸಿದರು. ಅವರ ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ‘ಪೂಚಿಕಣ್ಣು’ ಎಂಬ ಹೆಸರಿನಲ್ಲಿ ಪುಟ್ಟಣ್ಣನವರು ಮಲೆಯಾಳಂನಲ್ಲಿ ಚಿತ್ರವಾಗಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮಾತನಾಡಿ, ತ್ರಿವೇಣಿ ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಮುಗಿಸಿ, 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸ್ನಾತಕಪದವಿಯನ್ನು ಪಡೆದಿದ್ದರು. ತಾನು ಬರೆಯುವ ಕಥೆಗಳಲ್ಲಿ ತಾನು ಕಲಿತ ವಿಷಯವನ್ನು ಸೇರಿಸುವ ಮೂಲಕ ತನ್ನ ಅಧ್ಯಯನಕ್ಕೆ ಒಂದಿ ರೀತಿಯಲ್ಲಿ ಅರ್ಥವನ್ನು ತಂದು ಕೊಟ್ಟಿದ್ದರು. ಪಾಕಿಸ್ತಾನ ಹಾಗೂ ಭಾರತದ ಸೌಹಾರ್ದತೆಯ ವಿಷಯಗಳನು ಒಳಗೊಂಡ ʻಅಲಿ ಅನೀಲʼ ಎನ್ನುವ ಕಥೆಯಲ್ಲಿ ಸಂಭಂಧಗಳನ್ನು ನಾಜೂಕಾಗಿ ಹೆಣೆದಿರುವುದು ಗಮನಾರ್ಹ. ಆ ಕಾಲದಲ್ಲಿ ಮಹಿಳೆಯರ ಶೋಷಣೆಯನ್ನು ಬಿಂಬಿಸುತ್ತ ವರದಕ್ಷಿಣೆ, ವಿಧುರ ವಿವಾಹ, ಬಾಲ್ಯವಿವಾಹದಂತಹ ಘಟನೆಗಳನ್ನು ತನ್ನ ಕಥೆಯಲ್ಲಿ ಅಳವಡಿಸಿಕೊಂಡಿರುವುದು ಅಸಾಮಾನ್ಯ ಸಾಧನೆ ಎಂದರು.
ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಮಾತನಾಡಿ, ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು. ‘ವಸಂತ ಗಾನ’, ‘ಬಾನು ಬೆಳಗಿತು’, ಅವಳ ಮನೆ’, ‘ಹೃದಯ ಗೀತೆ’ ಮುಂತಾದ ಕಾದಂಬರಿಗಳು ‘ ಹೆಣ್ಣಿನ ಮನದಾಳವನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಮುಗ್ಧ ಯುವತಿಯ ಮನಸಿನ ನೆಲೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಕಾದಂಬರಿ ‘ಬೆಳ್ಳಿ ಮೋಡ’. ಕಾಮದ ಅರಗಿಣಿಯಾಗಿ ಬಾಳೆಲ್ಲ ಕಣ್ಣೀರಿನಿಂದ ಕೈ ತೊಳೆಯುವ ಹೆಣ್ಣಿನ ಅಸಹಾಯಕ ಚಿತ್ರಣ ‘ಕೀಲುಗೊಂಬೆ’ ಕಾದಂಬರಿಯಲ್ಲಿದೆ. ‘ಮೊದಲ ಹೆಜ್ಜೆ’ಯಲ್ಲಿ ಪುರುಷ ಪ್ರಧಾನ ಸಮಾಜದ ಕಪಿಮುಷ್ಟಿಗೆ ಸಿಲುಕಿ ಬಾಳಿನಲ್ಲಿ ಕಹಿಯನ್ನೇ ಉಂಡ ದುರ್ದೈವಿ ಹೆಣ್ಣಿನ ಚಿತ್ರಣವಿದೆ. ‘ತಾವರೆ ಕೊಳ’ ಗಂಭೀರವಾದ ವಸ್ತುವನ್ನುಳ್ಳ ಕಾದಂಬರಿ. ಮನುಷ್ಯ ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರವೇ ಜೀವಿಸಲಾರ, ಅವನ ಜೀವನ ಹಸನಾಗಬೇಕಾದರೆ ಅವನಿಗೆ ಪ್ರೀತಿ, ವಿಶ್ವಾಸ ಅತ್ಯವಶ್ಯಕವಾಗಿ ಬೇಕು ಎಂಬುದನ್ನು ಈ ಕಾದಂಬರಿ ಧ್ವನಿಸುತ್ತದೆ ಎಂದರು.
ತ್ರಿವೇಣಿಯವರ ಮಗಳು ಮೀರಾ ಶಂಕರ್ ಅವರು ತ್ರಿವೇಣಿಯವರು ಬಾಳಿದ್ದ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಸ್ವಂತ ಪ್ರಯತ್ನದಿಂದ ರೂಪಿಸಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್.ಪಟೇಲ್ ಪಾಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ, ಪರಿಷತ್ತಿನ ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಸಿ. ಪದಾಧಿಕಾರಿಗಳು ಮತ್ತು ಸಿಬ್ಬಂದಿ ಹಿರಿಯ ಕಾದಂಬರಿಗಾರ್ತಿ ತ್ರಿವೇಣಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.




