ರಾಜಕೀಯ ರಂಗದಲ್ಲೊಂದು ಅಪರೂಪದ ವ್ಯಕ್ತಿತ್ವ ಟಿ ಆರ್ ಶಾಮಣ್ಣ

2 years ago

1980ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಆಯ್ಕೆಯಾದಂತಹ ಟಿ ಆರ್ ಶಾಮಣ್ಣನವರನ್ನ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರು ಕುತೂಹಲದಿಂದ ನೋಡಿದರು. ಕಾರಣ 1980ರಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಎಲ್ಲ ಕಡೆಯಲ್ಲೂ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಜಯಭೇರಿಯನ್ನು ಬಾರಿಸಿತು. ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶಾಮಣ್ಣನವರ ಮುಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗರ್ಭ ಶ್ರೀಮಂತ ಡಿಪಿ ಶರ್ಮ ಅವರು ಸೋಲನ್ನು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಪಿ ಶರ್ಮಾರಂತಹ ಶ್ರೀಮಂತರನ್ನು ಜೊತೆಗೆ ಕಾಂಗ್ರೆಸ್ ಅಲೆಯ ವಿರುದ್ಧ ಗೆದ್ದಿರುವಂತಹ ವ್ಯಕ್ತಿ ಯಾರು ಎನ್ನುವುದು ಕುತೂಹಲವಾಗಿತ್ತು.

ಟಿಆರ್ ಶಾಮಣ್ಣ ಎಂದರೆ ಅಂತಹ ಒಂದು ಶಕ್ತಿ ಇತ್ತು, ಶಾಮಣ್ಣ ಹೇಳಿದವರಿಗೆ ವೋಟು ಹಾಕುತ್ತಾರೆ ಎನ್ನುವ ಕಾಲವಿತ್ತು, ಬಡವರು ಮತ್ತು ಮಧ್ಯಮ ವರ್ಗದವರು ಎಲ್ಲರಿಗೂ ಶಾಮಣ್ಣ ಅವರ ಮನೆಯ ಪ್ರೀತಿಯ ವ್ಯಕ್ತಿಯಾಗಿದ್ದರು. ಯಾವುದೇ ಸಂದರ್ಭದಲ್ಲಿ ಯಾವುದೇ ನಾಗರಿಕರು ಇವರನ್ನು ನೇರವಾಗಿ ಭೇಟಿ ಮಾಡಿ, ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಪರಿಹಾರವನ್ನು ಪಡೆದುಕೊಳ್ಳಬಹುದಾಗಿತ್ತು. ಇವರೇ ತಮ್ಮ ಸಹಾಯಕರ ಮೂಲಕ ಪ್ರತಿದಿನ ಶಿಫಾರಸ್ಸು ಪತ್ರಗಳನ್ನ ಬರೆಸಿಕೊಡುತ್ತಿದ್ದರು. ಅಗತ್ಯ ಬಿದ್ದರೆ ದೂರವಾಣಿ ಕರೆಯನ್ನ ಮಾಡುತ್ತಿದ್ದರು.

ನಾಗರೀಕರ ಸಮಸ್ಯೆಗಳನ್ನ ಪರಿಹರಿಸು ಅನುಕೂಲ ಮಾಡಿಕೊಡುವ ಸಲುವಾಗಿ ಪ್ರತಿದಿನ ಬಿಡಿಎ, ಮಹಾನಗರ ಪಾಲಿಕೆ, ಕೊಳಚೆ ನಿರ್ಮೂಲನ ಮಂಡಳಿ ಹೀಗೆ ಅನೇಕ ಕಚೇರಿಗಳಿಗೆ ಇವರು ಭೇಟಿಕೊಡುತ್ತಿದ್ದರು. ನಾಗರೀಕರ ಕಡತಗಳನ್ನ ಅಧಿಕಾರಿಗಳು ಇವರು ಕುಳಿತಿರುತ್ತಿದ್ದ ಆಟೋರಿಕ್ಷಾ ಬಳಿಗೆ ತಂದು ವಿವರವನ್ನು ನೀಡಬೇಕಾಗಿತ್ತು. ಶಾಮಣ್ಣನವರು ಬಡವರ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಅಧಿಕಾರಿಗಳಿಗೆ ಅಲ್ಲಿಯೇ ನಿಷ್ಟೂರವಾಗಿ ಮಾತನಾಡಿ ತಮ್ಮ ಕರ್ತವ್ಯವನ್ನ ನೆನಪು ಮಾಡಿಕೊಡುತ್ತಿದ್ದರು.

ಹಣ ಖರ್ಚು ಮಾಡದೆ ಜನರ ಪ್ರೀತಿಯಿಂದ ಚುನಾವಣೆಯನ್ನು ಗೆಲ್ಲಬಹುದು ಎನ್ನುವುದಕ್ಕೆ ಶಾಮಣ್ಣನವರಿಗಿಂತ ಮತ್ತೊಬ್ಬರು ಉದಾಹರಣೆ ಸಿಗುವುದಿಲ್ಲ. ಮೂರು ಬಾರಿ ಶಾಸಕರಾಗಿ ಒಂದು ಬಾರಿ ಲೋಕಸಭಾ ಸದಸ್ಯರಾಗಿ, ನಗರಪಾಲಿಕೆ ಸದಸ್ಯರಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶಾಮಣ್ಣನವರು ಚುನಾವಣೆಯಲ್ಲಿ ಎಂದೂ ಸಹ ಹಣ ಹಂಚಿದವರಲ್ಲ, ಹೆಂಡ ಕುಡಿಸಿದವರಲ್ಲ, ತೋಳ್ಬಲವನ್ನ ನಂಬಿದವರಲ್ಲ. ಜನಸೇವೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಇವರ ಮಾತು ಎಂದರೆ ಮತದಾರರಿಗೆ ವೇದ ವಾಕ್ಯವಾಗಿತ್ತು.

ಬಡವರು ವಾಸಿಸುವ ಪ್ರದೇಶಗಳಿಗೆ ಮತ್ತು ಎಲ್ಲ ಬಡಾವಣೆಗಳಿಗೆ ಶಾಮಣ್ಣನವರು ಬರುತ್ತಾರೆ ಎಂದರೆ ಜನರು ಮನೆಗಳಿಂದ ಹೊರಗೆ ಬಂದು ಇವರಿಗಾಗಿ ಕಾಯುತ್ತಿದ್ದರು. ಇವರು ಬಂದೊಡನೆ ಇವರು ಹೇಳುವ ಮಾತಿಗಾಗಿ ಕಾತುರದಿಂದ ಇರುತ್ತಿದ್ದರು. ಶಾಮಣ್ಣನವರು ಯಾರಿಗೆ ಮತ ನೀಡಬೇಕು ಎಂದರೆ ಅವರಿಗೆ ಮತದಾರರು ಮತ ನೀಡಲು ಸಿದ್ದರಿಸುತ್ತಿದ್ದರು. ಕಾರಣ ಶಾಮಣ್ಣ ಎಂದರೆ ಹೋರಾಟಗಾರರು, ಶಾಮಣ್ಣ ಎಂದರೆ ಜನಪರ ಕಾಳಜಿಯ ನಾಯಕ, ಶಾಮಣ್ಣ ಎಂದರೆ ಪ್ರಾಮಾಣಿಕತೆಯ ಪ್ರತೀಕ, ಶಾಮಣ್ಣ ಎಂದರೆ ಗಾಂಧಿವಾದದ ಅಪ್ಪಟ ಅನುಯಾಯಿ, ಶಾಮಣ್ಣ ಎಂದರೆ ನಿಷ್ಟೂರವಾದಿ ಶಾಮಣ್ಣ ಎಂದರೆ ಸರಳತೆಯ ಮತ್ತು ಶುದ್ಧ ಬದುಕಿನ ವ್ಯಕ್ತಿತ್ವವಾಗಿತ್ತು. ಈ ಕಾರಣಕ್ಕಾಗಿ ಶಾಮಣ್ಣನವರನ್ನು ಹೆಚ್ಚು ಗೌರವಿಸುತ್ತಿದ್ದರು ಮತ್ತು ಅವರ ಆದೇಶಗಳನ್ನ ಚಾಚು ತಪ್ಪದೇ ಜನರು ಪಾಲಿಸುತ್ತಿದ್ದರು.

1987 ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿ ಶ್ರೀ ರಾಮಕೃಷ್ಣ ಹೆಗಡೆ ಜನತಾ ಪಕ್ಷದ ಸರ್ಕಾರ ಶಾಮಣ್ಣನವರು ಜನತಾ ಪಕ್ಷದ ನಾಯಕರು ಆದರು. ವಿಧಾನಸೌಧದ ಕೆಂಗಲ್ ಹನುಮಂತಯ್ಯ ದ್ವಾರದ ಮೆಟ್ಟಲುಗಳ ಮೇಲೆ ಶಾಮಣ್ಣ ಏಕಾಂಗಿಯಾಗಿ ಧರಣಿಯನ್ನ ನಡೆಸುತ್ತಿದ್ದರು. ಕಾರಣ ಅಂದು ಮಹಾಪೌರರಾಗಿದ್ದ ಪುಟ್ಟೇಗೌಡರು ಮಹಾನಗರ ಪಾಲಿಕೆಯ ಆಸ್ತಿಯರಿಗೆಯನ್ನು ಹೆಚ್ಚಿಸಿ ಜನರಿಗೆ ತೊಂದರೆಯನ್ನು ಮಾಡಿದ್ದರು ಎನ್ನುವ ಕಾರಣಕ್ಕೆ ಸರ್ಕಾರದ ವಿರುದ್ಧವೇ ಜನರ ಹಿತಕ್ಕಾಗಿ ಧರಣಿಯನ್ನ ನಡೆಸಿದರು. ಕೂಡಲೇ ಅಲ್ಲಿಗೆ ಆಗಮಿಸಿದ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆಯವರು ಇವರನ್ನು ಸಮಾಧಾನಪಡಿಸಿ ಕೂಡಲೇ ತೆರಿಗೆ ಹೆಚ್ಚಳದ ಪ್ರಸ್ತಾವನೆಯನ್ನು ರದ್ದುಗೊಳಿಸಿದರು. ಇದು ಶಾಮಣ್ಣನವರ ಶಕ್ತಿ.

ಟಿಆರ್ ಶಾಮಣ್ಣನವರು ಸಣ್ಣ ವಯಸ್ಸಿನಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದರು. ಜೈಲಿನಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಇವರುಗಳನ್ನ ಗಲ್ಲಿಗೇರಿಸಿದಂತಹ ಸಂದರ್ಭದಲ್ಲಿ ಇವರು ಅದೇ ಸೆರೆಮನೆಯಲ್ಲಿದ್ದರೂ ಅಂದು ಸೆರೆಮನೆಯಲ್ಲಿ ಎಲ್ಲರೂ ಈ ಹುತಾತ್ಮರ ನೆನಪಿಗಾಗಿ ಉಪವಾಸವನ್ನು ಮಾಡಿದ ಸಂದರ್ಭವನ್ನು ಶಾಮಣ್ಣ ಸ್ಮರಿಸಿಕೊಳ್ಳುತ್ತಾರೆ.

ಸೆರೆಮನೆಯಿಂದ ಬಿಡುಗಡೆಯಾಗಿ ಮನೆಗೆ ಬಂದಾಗ ತಂದೆಯ ಸಾವು ಇವರನ್ನು ಕುಟುಂಬದ ಜವಾಬ್ದಾರಿಯನ್ನ ಹೊರುವಂತೆ ಮಾಡಿತು. ಕೂಡಲೇ ಗುತ್ತಿಗೆದಾರರಾಗಿ ಕಟ್ಟಡಗಳನ್ನ ನಿರ್ಮಿಸುವ ಕೆಲಸವನ್ನು ಆರಂಭಿಸಿದರು.

ತಮ್ಮ ಬದುಕಿಗೆ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಂತಹ ನಿಟ್ಟಿನಲ್ಲಿ ಕ್ರಿಯಾಶೀಲರಾದರು. ಇದರ ಜೊತೆಗೆ ರಂಗನಾಥ ಟೈಪಿಂಗ್ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಯುವ ಜನರಿಗೆ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಕೋರ್ಸ್ಗಳನ್ನ ತರಬೇತಿ ನೀಡುವ ಸಂಸ್ಥೆಯನ್ನ ಆರಂಭಿಸಿದರು. ಈ ರೀತಿಯಲ್ಲಿ ಶಾಮಣ್ಣನವರು ತಮ್ಮ ಬದುಕಿಗೆ ಆರ್ಥಿಕ ಭದ್ರತೆಯನ್ನ ರೂಪಿಸಿಕೊಂಡು ಮತ್ತೆ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದರು.

ಸುದೀರ್ಘವಾದ ರಾಜಕಾರಣದ ಸೇವೆಯನ್ನ ಮಾಡಿದರು. ಸಹ ನಗರ ಪಾಲಿಕೆ ಸದಸ್ಯರಾಗಿ ಶಾಮಣ್ಣ ಮಹಾಪೌರಾಗಲಿಲ್ಲ, ಶಾಸಕರಾಗಿ ಮಂತ್ರಿಯಾಗಲಿಲ್ಲ, ಆದರೂ ಸಹ ಶಾಮಣ್ಣನವರ ಜನಪ್ರಿಯತೆ ಅವರ ಶಕ್ತಿ ಒಂದಿಷ್ಟು ಕಡಿಮೆ ಇರಲಿಲ್ಲ. ಸರ್ಕಾರಗಳು ಯಾವುದೇ ಇರಲಿ ತ್ರಿಮೂರ್ತಿಗಳಾದ ಶಾಮಣ್ಣ, ವಿಎಸ್ ಕೃಷ್ಣ ಅಯ್ಯರ್ ಮತ್ತು ಜಿ ನಾರಾಯಣ್ ರವರು ಮುಖ್ಯಮಂತ್ರಿಗಳ ಬಳಿಗೆ ಹೋದರೆ ಮುಖ್ಯಮಂತ್ರಿಗಳು ದೇವರಾಜ್ ಅರಸುರವರು ಇರಬಹುದು ಗುಂಡೂರಾಯರು ಇರಬಹುದು ರಾಮಕೃಷ್ಣ ಹೆಗಡೆ ರವರು ಇರಬಹುದು ಇವರಿಗೆ ಮೊದಲ ಆದ್ಯತೆಯನ್ನು ಕೊಡುತ್ತಿದ್ದರು. ಕಾರಣ ಇವರುಗಳು ಬೆಂಗಳೂರು ನಗರದ ಜನರ ಬದುಕಿನ ಕಾಳಜಿಯನ್ನ ಹೊತ್ತು ಅವುಗಳ ಪರಿಹಾರಕ್ಕಾಗಿ ಮಾತ್ರ ಬಂದಿರುತ್ತಾರೆ, ಇವರುಗಳಲ್ಲಿ ಸ್ವಾರ್ಥವಿಲ್ಲ ಎನ್ನುವ ಸತ್ಯದ ಅರಿವು ಎಲ್ಲ ನಾಯಕರಲಿತ್ತು.

ಇವರುಗಳಿಗೆ ಎಲ್ಲ ಪಕ್ಷದ ನಾಯಕರು ಗೌರವವನ್ನು ಕೊಡುತ್ತಿದ್ದರು. ಕಾರಣ ಇವರು ರಾಜಕಾರಣವನ್ನ ಎಂದೂ ಸಹ ತಮ್ಮ ಮನೆಯ ಏಳಿಗೆಗೆ ತಮ್ಮ ಕುಟುಂಬದ ಸದಸ್ಯರ ಕಲ್ಯಾಣಕ್ಕೆ ಬಳಸಿಕೊಳ್ಳುವುದಿಲ್ಲ ಎನ್ನುವ ಅಚಲವಾದ ನಂಬಿಕೆ ಸರ್ಕಾರಗಳಲ್ಲಿತ್ತು.

ಟಿಆರ್ ಶಾಮಣ್ಣನವರು ಸೈಕಲ್ ತೆರಿಗೆ ವಿರುದ್ಧ ಹೋರಾಟವನ್ನು ಮಾಡಿರುತ್ತಾರೆ. ನೀರಿನ ದರವನ್ನ ಆಸ್ತಿ ತೆರಿಗೆಯನ್ನು ವಿದ್ಯುತ್ ದರವನ್ನ ಹಾಲಿನ ದರವನ್ನ ಏರಿಕೆ ಮಾಡಿದರೆ ಕೂಡಲೇ ಶಾಮಣ್ಣನವರು ಪ್ರತಿಭಟನೆಯನ್ನು ಮಾಡುತ್ತಿದ್ದರು. ಜನಸಾಮಾನ್ಯರಿಗೆ ನಮ್ಮ ಪರವಾಗಿ ಹೋರಾಟ ಮಾಡುವ ಒಂದು ಶಕ್ತಿ ಇದೆ ಎನ್ನುವ ನಂಬಿಕೆ ಇತ್ತು. ಶಾಮಣ್ಣನವರು ಬೆಂಗಳೂರು ನಗರದ ಅನೇಕ ರೆವಿನ್ಯೂ ಬಡಾವಣೆಗಳನ್ನ ಬಿಡಿಎ ಮತ್ತು ಸಿ ಐ ಟಿಬಿ ಮೂಲಕ ಮರು ಹಂಚಿಕೆ ಮಾಡಿಕೊಟ್ಟು ಅವುಗಳ ಆಸ್ತಿಯ ಸಮಸ್ಯೆಯನ್ನ ಪರಿಹರಿಸಿಕೊಟ್ಟವರಾಗಿರುತ್ತಾರೆ.

ಶಾಮಣ್ಣನವರು ಸಾರ್ವಜನಿಕ ಬದುಕಿಗೆ ಬಂದ ಸಂದರ್ಭದಲ್ಲಿ ಪ್ರತಿಕ್ರಿಯೆಯನ್ನು ಮಾಡಿರುತ್ತಾರೆ. ತನ್ನ ಬದುಕಿಗೆ ಶಾಶ್ವತವಾದಂತಹ ಆದಾಯವನ್ನು ಕಂಡುಕೊಳ್ಳಬೇಕು, ಕಾಫಿ, ಟಿ ಅಥವಾ ಮಧ್ಯ ಇವುಗಳನ್ನು ಸೇವಿಸಬಾರದು. ಸರಳವಾಗಿ ಬದುಕಬೇಕು ಆಡಂಬರದ ಜೀವನವನ್ನು ನಡೆಸಬಾರದು ಎಂಬ ಸಂಕಲ್ಪ ಇವರದಾಗಿತ್ತು. ಅದರಂತೆಯೇ 1980 ನಿಧನದ ಸಂದರ್ಭದವರೆಗೆ ಇವರು ಬದುಕಿದರು. 1912ರ ಮಾರ್ಚ್ 13ರಂದು ಹುಟ್ಟಿದಂತಹ ಶಾಮಣ್ಣನವರಿಗೆ ಈಗ 113ನೇ ವರ್ಷದ ಹುಟ್ಟು ಹಬ್ಬದ ದಿನವಾಗಿರುತ್ತದೆ.

ಬೆಂಗಳೂರು ನಗರದಲ್ಲಿ ಆಟೋರಿಕ್ಷಾದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬಂದು ಇಳಿಯುತ್ತಿದ್ದ ಶಾಮಣ್ಣನವರ ಆಟೋರಿಕ್ಷಾ ಬೆಂಗಳೂರು ನಗರದ ಎಲ್ಲ ಜನರಿಗೆ ಪರಿಚಿತವಾದ ವಾಹನವಾಗಿತ್ತು. ಬದುಕಿನ ಕೊನೆಯ ದಿನದ ತನಕ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡಿದ ಇವರನ್ನು ಸೈಕಲ್ ಶಾಮಣ್ಣ ಎನ್ನುವುದರ ಜೊತೆಗೆ ಆಟೋ ಶಾಮಣ್ಣ ಎಂದು ಸಹ ಕರೆಯುತ್ತಾರೆ.

ಶ್ರೀ ರಾಮಕೃಷ್ಣ ಹೆಗಡೆ ರವರು 1985ರಲ್ಲಿ ಮತ್ತು 1989ರಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ಶಾಸಕರಾಗಲು ಹೆಗಡೆ ರವರ ಜನಪ್ರಿಯತೆಗೆ ಜೊತೆಗೆ ಶಾಮಣ್ಣನವರ ವರ್ಚಸ್ಸು ಮತ್ತು ಸಂಘಟನೆ ಪ್ರಮುಖವಾದ ಶಕ್ತಿಯಾಗಿತ್ತು.

ಜಾತಿ, ಮತ, ಧರ್ಮ, ಬಡವ ಅಥವಾ ಶ್ರೀಮಂತ ಎಂಬ ಯಾವ ತಾರತಮ್ಯವನ್ನು ಮಾಡದೆ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಾ ಎಲ್ಲರಿಗೂ ಮನೆಯ ಬಾಗಿಲನ್ನು ಸಾದಾ ಕಾಲ ತೆರೆದಿರುತ್ತಿದ್ದ ಶಾಮಣ್ಣನವರ ಹೃದಯವು ಸಹ ಎಲ್ಲರಿಗೂ ತೆರೆದಿರುತ್ತಿತ್ತು. ಮಾನವೀಯತೆಯ ಮೌಲ್ಯಗಳಿಗೆ ಬದುಕಿದಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಶಾಮಣ್ಣ ಅತ್ಯಂತ ಪ್ರಮುಖರು

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply