ಟಿಪ್ಪುವಿನ ಕೊನೆಯ ದಿನಗಳು

3 years ago

ಟಿಪ್ಪುವಿನ ಕೊನೆಯ ದಿನಗಳು

ಟಿಪ್ಪು ಸಾವಿನ ಕುರಿತಾಗಿ ನಮಗೆ ಅಧಿಕೃತ ದಾಖಲೆಗಳು ಸಿಗುವುದು ಬ್ರಿಟೀಷ್ ಲೈಬ್ರರಿ ಹಾಗೂ ಖ್ಯಾತ ಲೇಖಕ ವಿಲಿಯಂ ಡಾಲ್ರಿಂಪೆಲ್ ಬರೆದ ದ ಅನಾರ್ಚಿ ( The Anarchi) ಎಂಬ ಕೃತಿಯಲ್ಲಿ ಮತ್ತು ಅಮೇರಿಕಾದ ಕೊಲಂಬಿಯಾ ವಿಶ್ವ ವಿದ್ಯಾನಿಲಯ 1830 ರಿಂದ 1894 ರವರೆಗೆ ನಿರಂತರವಾಗಿ ಸಂಗ್ರಹಿಸಿ ದಾಖಲಿಸಿರುವ ಮಾಹಿತಿ ಮತ್ತು ಚಿತ್ರಗಳ ಮೂಲಕ. ಈ ಮೇಲಿನ ಬಹುತೇಕ ವರದಿಗಳಲ್ಲಿ ಒಂದೇ ಬಗೆಯ ಸಾಮ್ಯತೆ ಕಂಡು ಬರುತ್ತದೆ. ಎಲ್ಲಿಯೂ ಉರಿಗೌಡ ಅಥವಾ ನಂಜೇಗೌಡನ ಹೆಸರು ಬರುವುದಿಲ್ಲ.

ಈ ದಿನ ಮೈಸೂರು ವಿ.ವಿ.ಯ. ನಿವೃತ್ತ ಪುರಾತತ್ವ ಶಾಸ್ತ್ರದ ಪ್ರೊಫೆಸರ್ ಹಾಗೂ ಐದು ದಿನಗಳ ಹಿಂದೆ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಗೆ ಹೇಳಿಕೆ ನೀಡಿದ್ದ ಎನ್.ಎಸ್. ರಂಗರಾಜು ಅವರನ್ನು ಸಂಪರ್ಕಿಸಿದ್ದೆ. ಅವರು ನೀಡಿದ್ದ ಹೇಳಿಕೆಯ ಕುರಿತಾಗಿ ಈಗ ದಾಖಲೆ ಹುಡುಕುತ್ತಿದ್ದಾರೆ. ಅವರು ಕೃತಿಯೊಂದರಲ್ಲಿ ಓದಿದ್ದ ಆ ಮಾಹಿತಿಯನ್ನು ವಿ.ವಿ.ಗ್ರಂಥಾಲಯಕ್ಕೆ ಹೋಗಿ ಹುಡುಕಿ ನಿಮಗೆ ತಲುಪಿಸುತ್ತೇನೆ ಎಂದಿದ್ದಾರೆ. ಇರಲಿ. ಟಿಪ್ಪುವನ್ನು ಕೊಂದಿದ್ದು ಇಬ್ಬರು ಬ್ರಿಟೀಷ್ ಅನಾಮಿಕ ಯೋಧರು ಎಂಬುದಕ್ಕೆ ಆ ಕಾಲದಲ್ಲಿ ಬ್ರಿಟೀಷ್ಅಧಿಕಾರಿಗಳು ತಮ್ಮ ಚಿತ್ರಕಾರರ ಮೂಲಕ ಕಪ್ಪು ರೇಖಾಚಿತ್ರಗಳ ಮೂಲಕ ಸನ್ನಿವೇಶಗಳನ್ನು ರಚಿಸಿ, ಈಸ್ಟ್ ಇಂಡಿಯಾ ಕಂಪನಿಗೆ ರವಾನಿಸಿದ್ದಾರೆ. ನಂತರದ ದಿನಗಳಲ್ಲಿ ಅವುಗಳು ಬಣ್ಣದ ಚಿತ್ರಗಳಾಗಿ ಮಾರ್ಪಟ್ಟಿವೆ. ಇವುಗಳ ಕಪ್ಪು ಬಿಳುಪಿನ ಚಿತ್ರಗಳನ್ನು ಕೊಲಂಬಿಯಾ ವಿ.ವಿ.ಯ ಸಂಗ್ರಹದಲ್ಲಿ ನೀವು ನೋಡಬಹುದಾಗಿದೆ.

1799 ರ ಪೆಬ್ರವರಿ ತಿಂಗಳಲ್ಲಿ ಟಿಪ್ಪುಸುಲ್ತಾನ್ ಮೇಲೆ ದಾಳಿ ಮಾಡಿ ಆತನನ್ನು ಮುಗಿಸಬೇಕು ಎಂದು ಗೌರ್ನರ್ ಜನರಲ್ ಅರ್ಥರ್ ವೆಲ್ಲೆಸ್ಲಿ ಯು ದಕ್ಷಿಣ ಪ್ರಾಂತ್ಯದ ಸೇನಾ ಕಮಾಂಡರ್ ಜನರಲ್ ಹ್ಯಾರಿಸ್ ಎಂಬಾತನಿಗೆ ಆಜ್ಞೆ ಮಾಡುತ್ತಾನೆ. ಏಕೆಂದರೆ, ಆ ವೇಳೆಯಲ್ಲಿ ಪ್ರಾನ್ಸ್ ನಿಂದ ಶ್ರೀರಂಗಪಟ್ಟಣಕ್ಕೆ ಯುದ್ಧ ಶಸ್ತ್ರಾಸ್ತ್ರಗಳ ಹಡುಗು ಬರುತ್ತಿರುವುದು ಈಸ್ಟ್ ಇಂಡಿಯಾ ಕಂಪನಿಗೆ ಮಾಹಿತಿ ಲಭ್ಯವಾಗಿತ್ತು.ಕೂಡಲೇ ಹೈದರಾಬಾದಿನ ನಿಜಾಂ ಬಳಿ ಇದ್ದ ಹತ್ತು ಸಾವಿರ ಬ್ರಿಟೀಷ್ ಸೈನಿಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗುತ್ತದೆ. ನಂತರ ಮದ್ರಾಸ್ ರೆಸಿಡೆನ್ಸಿಯಲ್ಲಿ ಇದ್ದ ಇಪ್ಪತ್ತು ಸಾವಿರ ಸೈನಿಕರೊಂದಿಗೆ ಜನರಲ್ ಹ್ಯಾರಿಸ್ ಬೆಂಗಳೂರಿಗೆ ತಲುಪುತ್ತಾನೆ. ಒಟ್ಟು ಮುವತ್ತು ಸಾವಿರ ಸೈನಿಕರು ನೂರಾರು ಎತ್ತಿನ ಗಾಡಿಯಲ್ಲಿ ದವಸ ಧಾನ್ಯ ಮತ್ತು ಕುರಿ, ಮೇಕೆ ಮತ್ತು ದನಗಳೊಂದಿಗೆ ಏಪ್ರಿಲ್ ನಲ್ಲಿ ಬೆಂಗಳೂರಿನಿಂದ ಹೊರಟು 1799 ಏಪ್ರಿಲ್ 22 ರಂದು ಶ್ರೀರಂಗಪಟ್ಟಣದ ಉತ್ತರ ಭಾಗದ ಕಾವೇರಿ ನದಿ ತೀರದ ಬಾಬುರಾಯನ ಕೊಪ್ಪಲು ಹಾಗೂ ಕರೀಗಟ್ಟದ ಬೆಟ್ಟವನ್ನು ತಲುಪಿ ಶಿಬಿರವನ್ನು ಸ್ಥಾಪಿಸುತ್ತಾರೆ.

ಕೋಟೆಯನ್ನು ಲಗ್ಗೆ ಹಾಕುವ ಮುನ್ನ ಪರಿಶೀಲನೆಗೆ ಹೋಗಿದ್ದ ಕೆಲವು ಬ್ರಿಟೀಷ್ ಸೈನಿಕರು ಟಿಪ್ಪು ಸೈನಿಕರಿಂದ ಬಂಧಿಸಲ್ಪಟ್ಟು ಚಿತ್ರಹಿಂಸೆಯಿಂದ ಹತರಾಗುತ್ತಾರೆ. ಕೊನೆಗೂ ಗುಪ್ತಚರ ಮಾಹಿತಿದಾರರಿಂದ ಕೋಟೆಗೆ ನುಗ್ಗಲು ಉತ್ತರ ಭಾಗದಲ್ಲಿ ಇರುವ ವಾಟರ್ ಗೇಟ್ ಎಂದು ಕರೆಯುವ ಕೋಟೆ ಬಾಗಿಲು ಸೂಕ್ತ ಎಂಬ ಮಾಹಿತಿ ಬ್ರಿಟೀಷರಿಗೆ ದೊರೆಯುತ್ತದೆ. ಏಕೆಂದರೆ, ಈ ಗೇಟ್ ಮೂಲಕ ಪ್ರತಿದಿನ ಟಿಪ್ಪು ಅರಮನೆಗೆ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ನೀರನ್ನು ಕಾವೇರಿ ನದಿಯಿಂದ ಸೈನಿಕರು ಮತ್ತು ಅರ್ಚಕರು ಬಳಸುತ್ತಿದ್ದರು. ಈ ನಡುವೆ ಕೋಟೆಯನ್ನು ಸುತ್ತುವರಿದ್ದ ಬ್ರಿಟೀಷ್ ಸೈನಿಕರು ಟಿಪ್ಪು ಹಾಗೂ ಆತನ ಕುಟುಂಬ ವರ್ಗ ತಪ್ಪಿಸಿಕೊಂಡು ಹೋಗದಂತೆ ಎಚ್ಚರ ವಹಿಸುತ್ತಾರೆ.

1799 ರ ಏಪ್ರಿಲ್ 29 ರಿಂದ ನಿರಂತರವಾಗಿ ಶ್ರೀರಂಗಪಟ್ಟಣದ ಕೋಟೆಯ ಮೇಲೆ ಫಿರಂಗಿ ದಾಳಿ ನಡೆಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಟಿಪ್ಪುಸುಲ್ತಾನ್ ಫಿರಂಗಿ ದಾಳಿ ನಡೆಸಿದರೂ ಕೂಡಾ ಮೇ 3 ರ ವೇಳೆಗೆ ಆತನ ಬಳಿ ಇದ್ದ ಫಿರಂಗಿ ಮದ್ದುಗಳು ನಿಷ್ಕ್ರಿಯವಾಗಿರುತ್ತವೆ.( ಇದಕ್ಕೆ ಮೀರ್ ಸಾದಕ್ ಕಾರಣ ಎಂಬ ಮಾತುಗಳು ಜನಮಾನಸದಲ್ಲಿ ಇದ್ದರೂ ಕೂಡ ಅಧಿಕೃತ ಮಾಹಿತಿಗಳು ಇಲ್ಲ. ಟಿಪ್ಪು ಲಾವಣಿಗಳಲ್ಲಿ ಈ ವಿಷಯ ಪ್ರಸ್ತಾಪವಾಗಿರುವುದರಿಂದ ಜನಪದರ ಮಾತನ್ನು ನಾವು ನಂಬಲೇ ಬೇಕು)

ಟಿಪ್ಪು ಸುಲ್ತಾನ್ ಅರಮನೆಗೆ ಜ್ಯೋತಿಷಿಗಳನ್ನು ಕರೆಯಿಸಿ ಭವಿಷ್ಯ ಕೇಳುತ್ತಾನೆ. ಇದು ಕೆಟ್ಟ ಕಾಲ ಎಂದು ಭವಿಷ್ಯ ನುಡಿಯುತ್ತಾರೆ. ಕೂಡಲೇ ಎಲ್ಲಾ ದೇವಾಲಾಯಗಳಲ್ಲಿ ಸಾಮ್ರಾಜ್ಯದ ರಕ್ಷಣೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯಬೇಕೆಂದು ಆದೇಶಿಸಿ ಹಣ ನೀಡುವುದರ ಮೂಲಕ ದೇವಾಲಯಗಳಿಗೆ ಎಣ್ಣೆ, ಹಣ್ಣು, ಕಾಯಿ, ಪೂಜಾ ಸಾಮಾಗ್ರಿಗಳನ್ನು ಪೂರೈಸುತ್ತಾನೆ. ಬೇಸಿಗೆಯ ದಿನವಾದ್ದರಿಂದ ಮಧ್ಯಾಹ್ನದ ವೇಳೆ ಎಲ್ಲರೂ ಮಲಗಿರುತ್ತಾರೆ ಎಂಬುದನ್ನು ಅರಿತ ಬ್ರೀಟಿಷ್ ಅಧಿಕಾರಿಗಳು ಡೆವಿಡ್ ಬೈರ್ಡ್ ಎಂಬಾತನ ನೇತೃತ್ವದಲ್ಲಿ ನಾಲ್ಕು ಸಾವಿರ ಸೈನಿಕರನ್ನು ಮೇ 4ರಂದು ಬೆಳಿಗ್ಗೆ ಅಸಂಖ್ಯಾತ ಬಿದಿರಿನ ಬೊಂಬುಗಳು ಮತ್ತು ಬಂದೂಕಗಳೊಂದಿಗೆ ಕಾವೇರಿ ನದಿಯನ್ನು ದಾಟಲು ಸೂಚಿಸುತ್ತಾರೆ.
1799 ರ ಮೇ4 ರಂದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಬಿದುರು ಬೊಂಬಿನ ಸಹಾಯದಿಂದ ವಾಟರ್ ಗೇಟ್ ಬಳಿ ಕೋಟೆ ಏರಿದ ಬ್ರಿಟೀಷ್ ಸೈನಿಕರು ಟಿಪ್ಪುವಿನ ಸೈನಿಕರನ್ನು ಬಂದೂಕುಗಳಿಂದ ಎದುರಿಸಿ,ಗೇಟ್ ಬಾಗಿಲು ತೆಗೆಯುವಲ್ಲಿ ಯಶಸ್ವಿಯಾಗುತ್ತಾರೆ. ಕೋಟೆಯ ಒಳನುಗ್ಗಿದ ಬ್ರಿಟೀಷ್ ಯೋಧರ ಬಂದೂಕಿನ ಗುಂಡಿನ ದಾಳಿ ಎದುರು ಕತ್ತಿ ಹಿಡಿದಿದ್ದ ಟಿಪ್ಪು ಯೋಧರ ಹೋರಾಟ ಮರಣದೊಂದಿಗೆ ಕೊನೆಯಾಗುತ್ತದೆ.

ಆಗತಾನೆ ಅರಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿದ್ದ ಟಿಪ್ಪು ಸುಲ್ತಾನ್ಗೆ ಈ ವಿಷಯ ತಿಳಿದು ಕತ್ತಿ ಹಿಡಿದು ತನ್ನ ಅಂಗರಕ್ಷಕನೊಡನೆ ವಾಟರ್ ಗೇಟ್ ಬಳಿ ಬರುತ್ತಾನೆ. ಆ ವೇಳೆಗೆ ಬ್ರಿಟೀಷ್ ಯೋಧರು ಸಿಡಿಸಿದ ಫಿರಂಗಿ ಗುಂಡಿನ ದಾಳಿಯಿಂದ ಆತನ ಎಡಬುಜಕ್ಕೆ ಗಾಯವಾಗುತ್ತದೆ. ಕೂಡಲೇ ಅಂಗರಕ್ಷಕ ತನ್ನ ದೊರೆಗೆ ‘’ಬನ್ನಿ ಅರಮನೆಗೆ ಹೋಗೋಣ, ಶರಣಾಗತಿ ಒಂದೇ ನಮಗೆ ದಾರಿ’’ ಎಂದಾಗ ಸಿಟ್ಟಿಗೆದ್ದ ಟಿಪ್ಪು ನಿನಗೆ ಹುಚ್ಚು ಹಿಡಿದಿದೆಯಾ? ಬಾಯ್ಮುಚ್ಚು ಎಂದು ಗದರಿಸುತ್ತಾ ಗಾಯದ ನೋವಿನಿಂದ ಕೆಳಗೆ ಕೂರಲು ಯತ್ನಿಸುತ್ತಾನೆ. ಆ ಸಮಯದಲ್ಲಿ ಹತ್ತಿರದಲ್ಲಿದ್ದ ಬ್ರಿಟೀಷ್ ಯೋಧನೊಬ್ಬ ಟಿಪ್ಪು ಸೊಂಟದಲ್ಲಿದ್ದ ಆಭರಣದ ಪಟ್ಟಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಆತನಿಗೆ ಟಿಪ್ಪುಸುಲ್ತಾನ್ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಾರಣಾಂತಿಕ ಪೆಟ್ಟು ನೀಡುತ್ತಾನೆ. ಇದರಿಂದ ಕೋಪಗೊಂಡ ಮತ್ತೊಬ್ಬ ಯೋಧ ತನ್ನ ಬಳಿ ಇದ್ದ ಬ್ಲಾಕ್ ರೇಂಜ್ ಬಂದೂಕಿನಿಂದ ತೀರ ಹತ್ತಿರದಲ್ಲಿ ಟಿಪ್ಪುವಿನ ಎದೆಗೆ ಎರಡು ಗುಂಡು ಹಾರಿಸುತ್ತಾನೆ. ಕೂಡಲೇ ಟಿಪ್ಪುಸುಲ್ತಾನ್ ಮರಣ ಹೊಂದುತ್ತಾನೆ. ಆದರೆ, ಆ ಅನಾಮಿಕ ಬ್ರಿಟೀಷ್ ಯೋಧರಿಗೆ ತಾವು ಕೊಂದಿದ್ದು ನಮ್ಮ ಪರಮ ಶತೃವನ್ನು ಎಂಬುದು ಗೊತ್ತಿರುವುದಿಲ್ಲ.

ಮೇ 4 ರಂದು ಮಧ್ಯಾಹ್ನದಿಂದ ಸಂಜೆ ಏಳು ಗಂಟೆಯವರೆಗೆ ಬ್ರಿಟಿಷ್ ಯೋಧರಿಂದ ಹತ್ತು ಸಾವಿರ ಟಿಪ್ಪು ಸೈನಿಕರು ಹತರಾಗುತ್ತಾರೆ. ಬ್ರಿಟೀಷ್ ಅಧಿಕಾರಿಗಳು ಸೈನಿಕರೊಂದಿಗೆ ಅರಮನೆಗೆ ಲಗ್ಗೆ ಹಾಕಿದಾಗ ಅಲ್ಲಿ ಟಿಪ್ಪು ಇರುವುದಿಲ್ಲ. ಮಧ್ಯಾಹ್ನ ವಾಟರ್ ಗೆಟ್ ಬಳಿ ಹೋದ ವಿಷಯ ತಿಳಿಯುತ್ತದೆ. ನಂತರ ಬೆಳಕಿನ ಪಂಜು ಹಿಡಿದು ವಾಟರ್ ಬಳಿಯ ಪ್ರದೇಶದಲ್ಲಿ ಸತ್ತು ಮಲಗಿದ್ದ ಸಾವಿರಾರು ಯೋಧರ ನಡುವೆ ಟಿಪ್ಪುವಿನ ಶವವನ್ನು ಡೆವಿಡ್ ಬ್ರೈಡ್ ಪತ್ತೆ ಹಚ್ಚುತ್ತಾನೆ. ಏಕೆಂದರೆ, ಹಿಂದೊಮ್ಮೆ ಆತ ಟಿಪ್ಪುವಿನ ಕೈದಿಯಾಗಿ ಶ್ರೀರಂಗಪಟ್ಟಣದಲ್ಲಿ ಕಾಲ ಕಳೆದಿದ್ದನು ಜೊತೆಗೆ ಟಿಪ್ಪುವನ್ನು ನೋಡಿದ್ದನು ಕೂಟಲೇ ಬ್ರಿಟೀಷರು ಅರಮನೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಟಿಪ್ಪುವಿನ ಶವ ಎಂದು ಖಾತರಿಪಡಿಸಿಕೊಳ್ಳುತ್ತಾರೆ. ನಂತರ ಅರಮನೆಗೆ ಶವವನ್ನು ಸಾಗಿಸುತ್ತಾರೆ. ಟಿಪ್ಪುವಿನ ಮರಣದ ಸುದ್ದಿ ಹಬ್ಬುತ್ತಿದ್ದಂತೆ ಜೀವಭಯದಿಂದ ಜನತೆ ಶ್ರೀರಂಗಪಟ್ಟಣದಿಂದ ಮನೆಬಿಟ್ಟು ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಸೈನಿಕರ ಕೈಗಿತ್ತು ಓಡಿ ಹೋಗುತ್ತಾರೆ. ಆ ರಾತ್ರಿ ಇಡೀ ಪಟ್ಟಣ ದಲ್ಲಿ ಲುಟಿ, ಅತ್ಯಚಾರ ಜರಗುತ್ತದೆ. ಟಿಪ್ಪುವಿನ ಅರಮನೆಯಲ್ಲಿ ಆ ಕಾಲಕ್ಕೆ ಇಪ್ಪತ್ತು ಕೋಟಿ ಬೆಲೆ ಬಾಳುವ ಚಿನ್ನದ ನಾಣ್ಯ, ಚಿನ್ನದ ತಟ್ಟೆ, ಆಭರಣ, ವಜ್ರ, ರೇಷ್ಮೇ ಶಾಲುಗಳು, ಸೀರೆಗಳು, ತರಾವರಿ ಕತ್ತಿಗಳು, ಹುಲಿಯ ಪ್ರತಿಮೆ ಹೀಗೆ ಎಲ್ಲವನ್ನು ಬ್ರಿಟೀಷ್ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ.

ಮರುದಿನ ಮೇ 5 ರಂದು ಟಿಪಪ್ಪುವಿನ ಪಾರ್ಥಿವ ಶರೀರಕ್ಕೆ ಮಿಲಿಟರಿ ಗೌರವ ಸಲ್ಲಿಸುವುದರ ಮುಲಕ ಆತನ ಶರೀರವನ್ನು ಶ್ರೀರಂಗಪಟ್ಟಣದಗಅರಮನೆಯಿಂದ ಗಂಜಾಂ ಬಳಿ ಇರುವ ತಂದೆ ಹೈದರಾಲಿಯ ಸಮಾಧಿಯ ಬಳಿ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ಇಡೀ ದಾರಿಯುದ್ಧಕ್ಕೂ ಜನತೆ ಮತ್ತು ಬ್ರಿಟೀಷ್ ಯೋಧರು ನಿಂತು ಟಿಪ್ಪುವಿಗೆ ಗೌರವ ಸಲ್ಲಿಸುತ್ತಾರೆ. ನಂತರ ಬ್ರಿಟೀಷ್ ಅಧಿಕಾರಿಗಳು ಟಿಪ್ಪುವಿನ ಮಡದಿಯರು, ತಾಯಿ ಮತ್ತು ಮಕ್ಕಳು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ದು ವೆಲ್ಲೂರು ಕೋಟೆಯಲ್ಲಿ ತಮ್ಮ ಸುಪರ್ಧಿಯಲ್ಲಿ ಇಟ್ಟುಕೊಳ್ಳುತ್ತಾರೆ. ಟಿಪ್ಪುವಿನ ಸಮಗ್ರ ಚರಾಸ್ತಿಯನ್ನುಲಂಡನ್ ಗೆ ರವಾನಿಸುತ್ತಾರೆ.

ಅಂತಿಮವಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಯುದ್ಧದಲ್ಲಿ ನೇತೃತ್ವದ ವಹಿಸಿದ ಅಧಿಕಾರಿಗಳಿಗೆ ಬಹುಮಾನ ಕೊಟ್ಟು ಗೌರವಿಸುತ್ತದೆ. ಡೆವಿಡ್ ಬ್ರೈಡ್ ಗೆ ಬಹುಮಾನದ ಜೊತೆಗೆ ಸರ್ ಎಂಬ ಪದವಿ ನೀಡಿ ಗೌರವಿಸಿದೆ, ಇತ್ತ ಯುದ್ಧದಲ್ಲಿ ಸತ್ತ ಹತ್ತು ಸಾವಿರ ಸೈನಿಕರನ್ನು ಸ್ಥಳಿಯ ಜನರು ಹೆಗಲಮೇಲೆ ಹೊತ್ತೊಯ್ದು ಗಂಜಾಂ ಬಳಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಈ ಕಾರಣದಿಂದಾಗಿ ನನ್ನ ಬಾಲ್ಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸೋಮಾರಿ ಮತ್ತು ಪೆದ್ದನನ್ನು ‘’ ಗಂಜಾಂ ಗೆ ಹೋಗು ಹೆಣ ಹೊರಕೆ’’ ಎಂದು ಬೈಯ್ಯುವ ಬೈಗುಳವೊಂದು ಅಸ್ತಿತ್ವದಲ್ಲಿತ್ತು.
ಇಡೀ ಬ್ರಿಟೀಷರ ದಾಖಲೆಗಳಲ್ಲಿ ಟಿಪ್ಪುವನ್ನು ಕೊಂದದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ಯೋಧರಲ್ಲ ಎಂಬುದು ಸ್ಪಷ್ಟವಾಗಿ ಖಚಿತವಾಗುತ್ತದೆ. ಇನ್ನು ಆ ಇಬ್ಬರು ಗೌಡರು ಇದ್ದರಾ ಎಂಬುದಕ್ಕೆ ಈಗ ಪ್ರೊಫೆಸರ್ ನರಸರಾಜು ಅವರು ದಾಖಲೆ ಹುಡುಕಿಕೊಡಬೇಕು. ಇಲ್ಲಿ ಒಂದು ಅಂಶವನ್ನು ನಾವು ಮನಗಾಣಬೇಕಿದೆ. ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಮತ್ತು ಇಪ್ಪತ್ತನೇ ಶತಮಾನದಲ್ಲಿ ಗಾಂಧಿ ಇಬ್ಬರೂ ಬ್ರಿಟೀಷರಿಗೆ ಪರಮ ಶತೃಗಳಂತೆ ಕಾಡಿದರು. ಆದರೆ, ಅವರಿಬ್ಬರ ಮರಣಾನಂತರ ಬ್ರಿಟೀಷರು ಯಾವುದೇ ಧ್ವೇಷವಿಲ್ಲದೆ ಅವರ ಹೋರಾಟವನ್ನು ಸ್ಮರಿಸಿದ್ದಾರೆ ಜೊತೆಗೆ ದಾಖಲಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಅತವಾ ಪುರಾಣದಲ್ಲಿ ಯುದ್ದದಲ್ಲಿ ಹತರಾದ ದೊರೆಗಳನ್ನು ಕೊಂದ ಯೋಧರ ಹೆಸರಿಲ್ಲ. ಚಕ್ರವ್ಯೂಹದಲ್ಲಿ ಅಭಿಮನ್ಯವನ್ನು ಕೊಂದವರು ಕೌರವರೇ ಹೊರತು, ದುರ್ಯೋಧ, ದುಶ್ಯಾಸನ ಅಥವಾ ಕರ್ಣ ಎಂಬ ಹೆಸರಿಲ್ಲ. ಆತನನ್ನು ಕೊಂದವರು ಅನಾಮಿಕ ಯೋಧರು. ಇದೇ ಇತಿಹಾಸವನ್ನು ಪಾಂಡ್ಯರು, ಚೋಳರು, ವಿಜಯನಗರ ಅರಸರ ಕಥೆಯಲ್ಲಿಯೂ ಕಾಣ ಬಹುದು. ಯುದ್ಧರಂಗದ ಮಡಿದ ದೊರೆಯನ್ನು ಕೊಂದು ಹಾಕಿದ ಸೈನಿಕನ ಹೆಸರಿಲ್ಲ. ಇನ್ನೂ ಉರಿಗೌಡ ಮತ್ತು ನಂಜೇಗೌಡ ಟಿಪ್ಪುವಿನ ಕಥೆಯಲ್ಲಿ ಸಂಘಪರಿವಾರದ ಕೋಡಂಗಿಗಳು ಹೇಗೆ ಸೃಷ್ಟಿದರು? ಇದು ನಮ್ಮ ಮುಂದಿರುವ ಪ್ರಶ್ನೆ.

ಹೆಚ್ಚಿನ ಓದಿಗಾಗಿ ಡಾಲ್ರಿಂಪೆಲ್ ಅವರ ಅನಾರ್ಚಿ ಕೃತಿ ಯ ಪುಟ ಸಂಖ್ಯೆ 327ರಿಂದ 352 ಗಮನಿಸಿ.
ಹಾಗೂ ಕೊಲಂಬಿಯಾ ವಿಶ್ವ ವಿದ್ಯಾನಿಲಯದ ತಾಣಕ್ಕೆ ಭೇಟಿ ನೀಡಿ ವಿಳಾಸ ಹೀಗಿದೆ. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ http://www.columbia.edu/itc/mealac/pritchett/00routesdata/1700_1799/tipusultan/death/death.html

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply