ನಡು ರಾತ್ರಿಯಲ್ಲಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ತೋರಿದ ಬೆಳಕು

3 years ago

ಕನ್ನಡ ಸಾಹಿತ್ಯದ ಎಲ್ಲ‌ ಪ್ರಕಾರಗಳನ್ನು ಅತ್ಯಂತ ಆಳವಾಗಿ ಓದಿಕೊಂಡಿರುವ ಮತ್ತು ಅತ್ಯಂತ ನಿಖರತೆಯಿಂದ ಅದರ ಬಗ್ಗೆ ಮಾತನಾಡುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾರ್ಕ್ಸ್‌ವಾದಿ ಚಿಂತಕ ಜಿ.ಎನ್.ನಾಗರಾಜ್ ಪ್ರಮುಖರು.‌ 80 ದಶಕದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕನನಾಗಿ ಕೆಲಸ ಮಾಡುವಾಗಲೇ ಬುಗಿಲೆದ್ದ ನರಗುಂದ ರೈತ ಬಂಡಾಯಕ್ಕೆ ಆಕರ್ಷಣೆ ಗೊಂಡು ಅಧಿಕಾರಿ ಹುದ್ದೆ ತ್ಯಜಿಸಿ ಕಳೆದ ಕಳೆದ 40 ವರ್ಷಗಳಿಂದ‌ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್‌ ಪಕ್ಷ ನೀಡುವ ಕೆಲವೇ ಸಾವಿರ ರೂ.ಗಳ ಗೌರವ ಧನ ಪಡೆಯುತ್ತಾ ಗ್ರಾಮೀಣ ಬಡ ಕೃಷಿ ಕಾರ್ಮಿಕರು ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಚಳವಳಿಗೆ ಧುಮುಕಲು ಪ್ರಾಚೀನ ಕನ್ನಡ ಸಾಹಿತ್ಯದ ಪಂಪ,ರನ್ನ ಕುಮಾರ ವ್ಯಾಸ,‌ಹತ್ತಾರು ವಚನಕಾರರು ಹಾಗೂ ಕುವೆಂಪು, ಬೇಂದ್ರೆ, ಕಾರಂತ,ಕಟ್ಟಿಮನಿ,ಅಡಿಗ,ಮೊದಲಾದ‌ ಅನೇಕ ಕಾರಣವಾಗಿದ್ದರೂ ಅಸಮಾನ ಸಮಾಜದ ಬದಲಾವಣೆಗೆ ಕಾರಣವಾದ ಈ ಬಂಡವಾಳಶಾಹಿ ವ್ಯವಸ್ಥೆ ಬದಲಾಗದೇ ಸಮಸಮಾಜದ‌ ಕನಸು ಸಾಧ್ಯವಿಲ್ಲ ಎಂದು ಅವರಿಗೆ ಮನದಟ್ಟಾಗಿದ್ದು ಮಾಡಿದ್ದು ಮಾರ್ಕ್ಸ್ ಹಾಗೂ ಎಂಗೆಲ್ಸ್‌ ಒಟ್ಟಾಗಿ ರೂಪಿಸಿದ “ಕಮ್ಯೂನಿಸ್ಟ್‌ ಮ್ಯಾನಿಫೆಸ್ಟೋ” ಎನ್ನುವ ಕೃತಿ ಎಂದು ನೆನಪಿಸಿಕೊಂಡಿದ್ದಾರೆ. ಇಂದು ಆ ಕೃತಿ ಪ್ರಕಟಗೊಂಡು ದಿನ ಜಗತ್ತಿನಾದ್ಯಂತ ಅದನ್ನು “ಕೆಂಪು ಪುಸ್ತಕ ದಿನ”(Red book day) ಎಂದು ಇಂದು ಆಚರಿಸಲ್ಪಡುತ್ತಿದೆ…..ಅದರ ಅಂಗವಾಗಿ ಜಿ.ಎನ್.ನಾಗರಾಜ  ಅವರು ಸಣ್ಣ ಬರಹ ಓದಿ…..

ನಡು ರಾತ್ರಿಯಲ್ಲಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ತೋರಿದ ಬೆಳಕು

ಬಹಳ ಚೆನ್ನಾಗಿ ನೆನಪಿದೆ ನನಗೆ. ಅಂದು ಜೂನ್ ಮೂವತ್ತು ಮುಗಿದು ಜುಲೈ ಒಂದು ಆರಂಭವಾಗಿದ್ದ ನಡು ರಾತ್ರಿ 2.30. “ಯುರೇಕ ಯುರೇಕ” (ಕಂಡುಕೊಂಡೆ ಕಂಡುಕೊಂಡೆ) ಎಂದು ಕೂಗುತ್ತಾ ನಡುರಾತ್ರಿಯಲ್ಲಿ ಬೀದಿಯಲ್ಲಿ ಓಡಿದ ವಿಜ್ಞಾನಿಯಂತೆ ಕೂಗಬೇಕೆನ್ನಿಸಿತು. ಏನಿಲ್ಲವೆಂದರೂ ನನ್ನ ಮನೆಯ ತಾರಸಿ ಹತ್ತಿಯಾದರೂ ಜಗತ್ತಿಗೆಲ್ಲ ಕೇಳುವಂತೆ ಕೂಗಬೇಕೆಂದುಕೊಂಡೆ. ತಾರಸಿಯ ಮೇಲೆ ಹತ್ತಿದೆ. ಕೂಗುವ ಧೈರ್ಯ ಬರಲಿಲ್ಲ.ಆದರೆ ಬೀಸುತ್ತಿದ್ದ ತಂಗಾಳಿ, ಮಿನುಗುತ್ತಿದ್ದ ನಕ್ಷತ್ರಗಳು ಮನಸ್ಸಿಗೆ ಅಹ್ಲಾದವನ್ನು ಮೂಡಿಸಿದವು. ಮನಸ್ಸಿನೊಳಗೆ ಮೂಡಿದ್ದ ಉಲ್ಲಾಸ, ಉಲ್ಲಾಸದಿಂದ ಪುಟಿಯುತ್ತಿದ್ದ ಉತ್ಸಾಹಕ್ಕೆ ಸಂವಾದಿಯಾಗಿತ್ತು ಆ ವಾತಾವರಣ. ಎಷ್ಟೋ ಹೊತ್ತು ಅಲ್ಲಿಯೇ ಕುಳಿತು ನನ್ನ ಮನಸ್ಸನ್ನು ತುಂಬಿ ತುಳುಕುತ್ತಿದ್ದ ಯೋಚನೆಗಳ ಹರಿವಿನಲ್ಲಿ ಕಳೆದುಹೋದೆ. ನಂತರ ಬಂದು ನಿದ್ದೆಗೆ ಜಾರಿದರೆ ಅದೆಂತ ಸುಖಕರ ನಿದ್ದೆ. ಅಂದೇ ನಾನು ನನ್ನ ಅಧಿಕಾರಿ ಪಟ್ಟ ತ್ಯಜಿಸುವ ನಿರ್ಧಾರಕ್ಕೆ ನಾಂದಿಯಾಯಿತು.
ಬಹುಕಾಲದಿಂದ ನನ್ನ ಒಳಗೆ, ಹೊರಗೆ ನಡೆಯುತ್ತಿದ್ದ ತೊಳಲಾಟಕ್ಕೆ ಒಂದು ಅರ್ಥಪೂರ್ಣ ಮುಗಿತಾಯ ಸಿಕ್ಕಿತು. ನನಗೆ ಬುದ್ಧಿ ಬಂದಾಗಿನಿಂದ , ನಾನು ಸ್ವತಂತ್ರವಾಗಿ ಓದಲಾರಂಭಿಸಿದಂದಿನಿಂದ ನನಗೇ ಗೊತ್ತಿಲ್ಲದೆ ನನ್ನೊಳಗೆ ನಡೆಯುತ್ತಿದ್ದ ಹುಡುಕಾಟ ಅದು.
‘ವಿಗಡ ವಿಕ್ರಮರಾಯ’ ( ಅದನ್ನು ಮುಂದೆ ಕೆ.ವಿ ನಾರಾಯಣರು ‘ಹುತ್ತವ ಬಡಿದರೆ’ ಎಂದು ರೂಪಾಂತರಿಸಿ ಸಮುದಾಯ ಅಭಿನಯಿಸಿದೆ.) ಬರೆದ‌ ಸಂಸರು ಹಚ್ಚಿದ ಕಿಡಿಯೇ ಮೊದಲೆಂದು ಕಾಣುತ್ತದೆ ಅಥವಾ ಕುಮಾರವ್ಯಾಸನ ಕೌರವರಾಯನು ಮಡಿಯಲೆ ಬೇಕೆ ? ಎಂಬ ಪ್ರಶ್ನೆಯೇ ಮೊದಲಿರಬಹುದು. ನದೀ ಮೂಲ ಹುಡುಕಲಾಗುತ್ತದೆಯೇ ? ಮುಂದೆ ನದಿ ಪಡೆದುಕೊಂಡ ಓಟವಷ್ಟೇ ಕಣ್ಣಿಗೆ ಕಾಣುತ್ತದೆ. ಈ ಹುಡುಕಾಟ ಕಾಕನಕೋಟೆಯ ಕಾಚನ ಪ್ರಶ್ನೆಗಳಿಂದ ಬೆಳೆಯಿತು. ತ್ರಿವೇಣಿಯವರ ಅಪಜಯ,ಶರಪಂಜರಗಳೂ ಅದಕ್ಕೆ ಕಾಣಿಕೆ ನೀಡಿವೆ.
ಕುವೆಂಪು, ಕಾರಂತರು ಹಲವು‌ ಕಾಲ ನನ್ನ ಹುಡುಕಾಟದ ಮುಂದಿನ ದಾರಿಯನ್ನು ಹಾಕಿಕೊಟ್ಟರು. ಕುವೆಂಪುರವರ
“ಹಳೆಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ ಬರಲಿ ವಿಜ್ಞಾನ ಬುದ್ಧಿ” “ಸರ್ವರಿಗೆ ಸಮಪಾಲು,ಸರ್ವರಿಗೆ ಸಮಬಾಳು ” ಇವು ಆಗ ಪೂರ್ತಿಯಾಗಿ ಅರ್ಥವಾಗದಿದ್ದರೂ ಮನಸ್ಸಿನೊಳಗೇ ಕೊರೆಯಹತ್ತಿದವು. ಅವರ ಸುಬ್ಬಮ್ಮ, ಚಂದ್ರೇಗೌಡ, ಗುತ್ತಿ , ಸಿಂಬಾವಿ ಹೆಗ್ಗಡೆ ಕಾರಂತರ ಚೋಮ ಮತ್ತವನ ಒಡೆಯ, ಒಡೆಯನ ವಿಧವೆ ತಾಯಿ ಇವರೆಲ್ಲ ನನ್ನ ಮನಸ್ಸಿನ ರಂಗಭೂಮಿಯಲ್ಲಿ ಒಳಗೇ ತಳಮಳದಿಂದ ಕುದಿಯುತ್ತಿದ್ದರು. ಹಲವೊಮ್ಮೆ ತಾಂಡವ ನೃತ್ಯ ಆರಂಭಿಸಿಬಿಡುತ್ತಿದ್ದರು. ಇವರ ಜೊತೆಗೆ ತೇಜಸ್ವಿ, ಲಂಕೇಶ‌ರ ಕತೆ, ಬರಹಗಳು, ಕಂಬಾರರ ಕಾವ್ಯ,ನಾಟಕಗಳು, ಅನಂತಮೂರ್ತಿಯವರ ನಾರಣಪ್ಪನ‌ ಹೆಣ ಇತ್ಯಾದಿ ಕೂಡಾ ಇವುಗಳ ಜೊತೆಗೂಡಿದರು.
ಇದಕ್ಕೆ ನನ್ನ ವೃತ್ತಿಯ ಅನುಭವಗಳು- ಮಂತ್ರಿಗಳ ದರ್ಪ, ಅವರ ಬಾಲಂಗೋಚಿಗಳೆಂಬವರ ಆಟಾಟೋಪಗಳು, ಬಡ ರೈತ,ಕೂಲಿಕಾರರ ಬವಣೆಗಳು ಕೂಡ ಹಲವು ಪ್ರಶ್ನೆಗಳನ್ನು ಮೂಡಿಸಿದವು . ಅದರಲ್ಲಿ ಕೊನೆಯ ಅಂಕದಲ್ಲಿ ನರಗುಂದದ ಹತ್ತಿ ಬೆಳೆಗಾರರು- ತಾವು ಅನುಭವಿಸುತ್ತಿದ್ದ ಜೀವಮಾನದ ಸಂಕಟ, ಅವರಲ್ಲಿ ಗರಿಗೂಡುತ್ತಿದ್ದ ಸಿಟ್ಟಿನೊಂದಿಗೇ ನನ್ನ ಮನಸ್ಸೆಂಬ ರಂಗಭೂಮಿಗೆ ಒಮ್ಮೆಲೇ ನುಗ್ಗಿಬಿಟ್ಟರು.
ಅದೇ ಸಮಯದಲ್ಲಿ ಕುರಿ,ಬೆಲ್ಚಿ, ಪತ್ರೆ ಸಂಗಪ್ಪನ ಕೊಲೆ,ಇವರೆಲ್ಲ ಇಕ್ರಲಾ ವದೀರ್ಲಾ ನನ್ಮಕ್ಕಳ ಚರ್ಮ ಎಬ್ರಲಾ ಎಂದು ಆವೇಶದಿಂದ ಕುಣಿಯುತ್ತಿದ್ದರು.
ಜೂನ್ 30 ರಂದು ನರಗುಂದದ ತಹಸೀಲ್ದಾರ್ ಕಛೇರಿಯ ಮುಂದೆ ಒಂದು ದೊಡ್ಡ ಬಹಿರಂಗ ಸಭೆ. ಅಲ್ಲಿ ನರೆದಿದ್ದ ರೈತರಲ್ಲಿ ಕುದಿಯುತ್ತಿದ್ದ ಸಿಟ್ಟೇ ಮನಸ್ಸನ್ನು ಆವರಿಸಿತ್ತು. ಏನು ಕಾರಣ, ಇದಕ್ಕೆಲ್ಲ ಏನು ಕಾರಣ ಎಂಬ ಎರಡು ದಶಕಗಳ ಕಾಲದಿಂದ ಕಾಡುತ್ತಿದ್ದ ಪ್ರಶ್ನೆಯನ್ನು ಮತ್ತಷ್ಟು ಬಲವಾಗಿ ಎತ್ತುತ್ತಿತ್ತು. ಅಂದು ರೈತ ನಾಯಕರನ್ನು ಮನೆಗೆ ಆಹ್ವಾನಿಸಿ ನಡೆಸಿದ ಸುದೀರ್ಘ ಚರ್ಚೆ ಈ ಹುಡುಕಾಟಕ್ಕೆ ವೇಗ ತಂದಿತ್ತು.
ಅಂದು ಹಲವು ತಿಂಗಳುಗಳ ಹಿಂದೆಯೇ ತಂದಿಟ್ಟುಕೊಂಡಿದ್ದರೂ ಓದುವುದಕ್ಕೆ ಎತ್ತಿಕೊಳ್ಳದಿದ್ದ ಪುಸ್ತಕ ಎತ್ತಿಕೊಳ್ಳಲು ಮನಸ್ಸು ಹವಣಿಸಿತು. ಆ ಕಿರು ಪುಸ್ತಕ ಓದುತ್ತಾ ಓದುತ್ತಾ ಹಲ ಕಾಲದ ಪ್ರಶ್ನೆಗಳಿಗೆ ಒಮ್ಮೆಲೆ ಉತ್ತರ ಸಿಕ್ಕಂತಾಗುತ್ತಿತ್ತು.
ಪುಸ್ತಕ ಓದಿ ಮುಗಿಸುತ್ತಿದ್ದಂತೆ ಹಳೆಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗುತ್ತಾ ವಿಜ್ಞಾನ ಬುದ್ಧಿ ಮನಸ್ಸನ್ನಾವರಿಸಿತು. ಮನಸ್ಸು ಹಗುರಾಗಿ ರೆಕ್ಕೆ ಬಿಚ್ಚಿ ಹಾರಾಡತೊಡಗಿತು.
ಅಂದು ನಾನು ಓದಿದ ಪುಸ್ತಕ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ. . ಅದನ್ನು ಓದಿ ಮುಗಿಸಿದ ಕೂಡಲೇ ನಾನು ಕಮ್ಯುನಿಸ್ಟನಾಗಿಬಿಟ್ಟೆ. ಆ ಕ್ಷಣದಿಂದಲೇ ನನ್ನ ಅಧಿಕಾರಿ ಸ್ಥಾನದ ಕುರ್ಚಿಯ ಕಾಲುಗಳು ಮುರಿದು ಬೀಳಲಾರಂಭಿಸಿದವು.
ಇಂದು ಕಮ್ಯುನಿಸ್ಟ್ ಮ್ಯಾನಿಫೆಸ್ಟೊವನ್ನು ಅದರ ಕತೃಗಳಾದ ಮಾರ್ಕ್ಸ್, ಎಂಗೆಲ್ಸ್ ಜಗತ್ತಿನ ಮುಂದಿಟ್ಟ ದಿನ. ಇಂದು ಜಗತ್ತಿನ ಕೆಂಪು ಪುಸ್ತಕ ದಿನ.
ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಜಗತ್ತಿನ ಕೋಟ್ಯಾಂತರ ಜನರನ್ನು ಸೆಳೆದಿದೆ.ಮತ್ತೆ ಮತ್ತೆ ಸೆಳೆಯುತ್ತಿದೆ. ಅವರನ್ನು ಕ್ರಾಂತಿಯ‌ ದಾರಿಗೆ ಹಚ್ಚಿದೆ. ಜಗತ್ತಿನ ವಿವಿಧ‌ ಪ್ರದೇಶಗಳ ಕ್ರಾಂತಿಕಾರಿ ಪ್ರಕ್ರಿಯೆಯನ್ನು ಅಳೆಯಲು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಆಯಾ ಭಾಷೆಗೆ‌ ಅನುವಾದವಾದ ಸಮಯ,ಅದರ ಓದಿನ ವ್ಯಾಪಕತೆಯನ್ನು ಮಾಪಕವಾಗಿ ಬಳಸುತ್ತಾರೆ ಎಂಬುದು ಈ ಕೃತಿಯ ವಿಶ್ವ ಪ್ರಾಮುಖ್ಯತೆಯ ಸೂಚಕ.
ಇಂದು ಕ್ರಾಂತಿಕಾರಿ ಕ್ರಿಯೆ ಮಸಳಿಸಿದಂತೆ ಕಾಣುತ್ತಿದೆ ನಿಜ. ಆದರೆ ಒಳಗೇ ಕುದಿಯುತ್ತಿದೆ. ಗರಿಗಟ್ಟಿಕೊಳ್ಳುತ್ತಿದೆ. ಇತ್ತೀಚೆಗೆ ಕೂಡಾ ಲ್ಯಾಟಿನ್ ಅಮೆರಿಕದ ಆರು ದೇಶಗಳು ಕೆಲವೇ ವರ್ಷಗಳಲ್ಲಿ ಎಡಪಂಥೀಯವಾದಂತೆ ವಿವಿಧ‌ ಪ್ರದೇಶಗಳಲ್ಲಿ ಈ ಕುದಿಯುವಿಕೆ ಹೊರಗೆ ಚಿಮ್ಮುತ್ತದೆ.
ಮುಂದಿನ ದಿನಗಳಲ್ಲಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಹುಟ್ಟಿಕೊಂಡ ಕ್ರಾಂತಿಕಾರಿ ಹಿನ್ನೆಲೆ ಮತ್ತು ಅದರ ತಿರುಳು.

– ಜಿ.ಎನ್.ನಾಗರಾಜ್

Leave a Reply