ನಿಮ್ಮ ಕಣ್ಣೀರಿನಲ್ಲಿ ನಾವೂ ಸಹಭಾಗಿಗಳು
ಆ ಒಂದು ಗೆಲುವು ಆಸ್ಟ್ರೇಲಿಯಾ ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್ ನಂತಹ ಯಾವುದೇ ದೇಶದ ಮೇಲಾಗಿದ್ದರೂ ನೂರ್ನಲ್ವತ್ತು ಕೋಟಿ ಭಾರತೀಯ ಜನರ ಸಂಭ್ರಮವು ಭೂಮ್ಯಂತರೀಕ್ಷವನ್ನೂ ಒಂದಾಗಿಸಿಬಿಡುತ್ತಿತ್ತು…..ಆದರೆ ….ಈ ಸೋಲನ್ನು, ಸೋತ ತಂಡದ ಕಣ್ಣೀರನ್ನು ಕಂಡಾಗ ನಮ್ಮ ಗೆಲುವೂ ಗೆಲುವಲ್ಲ, ಅವರ ಸೋಲು ಸೋಲಲ್ಲ, ಆದರಾಚೆ ಅದಮ್ಯ ಕ್ರೀಡಾಲೋಕವೊಂದು ಮಾಂತ್ರಿಕ ಕ್ರಿಕೆಟ್ ನ ಮೂಲಕ ಆಫ್ರಿಕಾ ಮತ್ತು ಭಾರತವನ್ನು ಮತ್ತೊಮ್ಮೆ ಭಾವನಾತ್ಮಕವಾಗಿ ಬೆಸೆಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಅದೆಷ್ಟು ಭಾವಪೂರ್ಣ ಘಟನೆಗಳಿಗೆ 2024 ರ ಈ 20-20ವಿಶ್ವಕಪ್ ಪಂದ್ಯ ಸಾಕ್ಷಿಯಾಯಿತು.
ಅದೊಂದು ಸಾಧಾರಣ ಹೋರಾಟವಲ್ಲ. ಜಾಗತಿಕ ಕ್ರಿಕೆಟ್ ಚರಿತ್ರೆಯಲ್ಲೂ ಈ ದಿನ ಚರಿತ್ರಾರ್ಹ ದಿನವಾಗಿ ಒಡಮೂಡಿತು..ಇದ್ದರೆ ಹೀಗಿಬೇಕು ಪಂದ್ಯ ಎಂಬಷ್ಟು ರೋಚಕತೆ..
ಸದಾ ಚೋಕರ್ಸ್ ಗಳ ಹಣೆಪಟ್ಟಿಯಿಂದ ಹೊರಬಂದು ಫೈನಲ್ ನಲ್ಲಿ ಗೆಲ್ಲುವ ಮೂಲಕ ಅದರ ವಿಧಿಲಿಖಿತ ಸೋಲಿನ ನಿಯಮವನ್ನು ಬದಲಿಸಬೇಕೆಂದು ಪಣತೊಟ್ಟ ಹರಿಣಗಳ ಪಡೆಯೊಂದುಕಡೆಯಾದರೆ… ಕೋಟ್ಯಾನುಕೋಟಿ ಭಾರತೀಯ ಜೀವಾಳದ ಆಸೆಯೊಂದನ್ನು ಕೈಗೂಡಿಸಲೇಬೇಕೆಂಬ ಹಠತೊಟ್ಟ ಭಾರತೀಯ ಕಲಿಗಳ ಪಡೆಯೊಂದುಕಡೆ….
ಅದೊಂದು ಬರಿಯ ಪಂದ್ಯವಲ್ಲ ಮಹಾಭಾರತದ ಮದೋನ್ಮತ್ತ ಮದಗಜಗಳ ಕಾಳಗದಂತಿತ್ತು. “ಕುಲಗಿರಿ ಕುಲಗಿರಿಯ ಕೆಡೆವಂದದೆ ಕೌರವೇಂದ್ರನಾಗಳ್ ಕೆಡೆಡೆದಂ” ಎಂಬಂತೆ ಸಮಭಾವದ, ಸಮಚಿತ್ತದ, ಸಮತೋಲನದ, ಸಮಬಲದ ಹೋರಾಟ, ದ.ಆಫ್ರಿಕಾದ ಸೋಲು ಮಹಾಭಾರತದ ದುರ್ಯೋಧನನ ಸೋಲನ್ನು ನೆನಪಿಸುವಂತಿತ್ತು “ಛಲದೊಳ್ ಆಫ್ರಿಕನ್ಸ್ ನಂತಿದ್ದರೂ…. ಅವರ ಸೋಲು ಮಹಾಭಾರತದ ಕರ್ಣಾವಸಾನದಂತೆಯೇ ಭಾಸವಾಗುತ್ತಿತ್ತು. ಭಾರತೀಯ ಕ್ರಿಕೆಟ್ ಕಲಿಗಳು ಈ ಕ್ರೀಡಾ ಕದನದಲ್ಲಿ ಗೆದ್ದು ಬೀಗಿದರೂ ಕರ್ಣಾವಸಾನಕ್ಕೆ ದುಃಖಿಸುವಂತೆ, ಆಫ್ರಿಕನ್ ಹರಿಣಗಳ ಸೋಲಿಗೆ ತಾವೂ ಕಣ್ಣೀರಿಟ್ಟು ಸಹಭಾಗಿಗಳಾದರು.
ಮಹಾಭಾರತದ ಕರ್ಣ ತನ್ನ ಬದುಕಿನುದ್ದಕ್ಕೂ ಎಂಥಹ ನತದೃಷ್ಟನೋ ಆಫ್ರೀಕಾದ ಕಲಿಗಳೂ ಕೂಡ ಅಷ್ಟೇ ನತದೃಷ್ಟರಾದರು. ಆದರೂ ಅವರ ಹೋರಾಟ, ಛಲ ಜಗತ್ತಿಗೆ ಮಾದರಿಯಾಯಿತು.
ಕಣ್ಣೀರು, ರೋಮಾಂಚನ, ಆಶ್ಚರ್ಯ, ಹರ್ಷೋದ್ಘಾರ, ಸಂಕಟ, ಸ್ನೇಹತ್ವ, ಒಗ್ಗಟ್ಟು, ವಿದಾಯಗಳ ಒಟ್ಟು ಭಾವಪೂರ್ಣ ಸಮ್ಮಿಲನದಂತಿತ್ತು ಈ ಬಾರಿಯ ವಿಶ್ವಕಪ್ ಫೈನಲ್…
ಕ್ಲಾಸನ್ ಕಾರ್ಗಾಲದ ಕಾರ್ಮೋಡದ ಮಳೆಯಾಗಿ ಅಪ್ಪಳಿಸಿದರು
ಬೂಮ್ರ ಆಫ್ರಿಕಾಕ್ಕೆ ಭಯಹುಟ್ಟಿಸಿದರು
ಕೊಹ್ಲಿ ಆಪತ್ಕಾಲಕ್ಕೆ ಕೈಹಿಡಿದರು
ರೋಹಿತ್ ತಮ್ಮ ಬ್ಯಾಟಿಂಗ್ ನಿಂದ ರೋಮಾಂಚನವನ್ನುಂಟು ಮಾಡಿದರು
ದ.ಆಫ್ರಿಕಾದ ಆಟಗಾರರು ಭಾರತೀಯರ ಮನಸ್ಸನ್ನೂ ಒಂದುಹಂತಕ್ಕೆ ದುಃಖಿಸುವಂತೆ ಮಾಡಿದರು. ಭಾವಪೂರ್ಣವಾಗಿ ಮನಃಸೂರೆಗೊಂಡರು
ಕ್ರೀಡೆಗೆ ಅಂತಹ ಅದಮ್ಯ ಶಕ್ತಿಇದೆ.. ಜಾಗತಿಕವಾಗಿ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್ ಈ ಬಾರಿ ಅಮೆರಿಕಾವನ್ನು ತಲುಪಿ ವಿಶ್ವಕಪ್ ಫೈನಲ್ ಪಂದ್ಯ ಜಗತ್ತಿನ ಕ್ರೀಡಾಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು…ಭಾರತ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟು ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದವರನ್ನು ಎದುರಿಸಬೇಕಾಗಿ ಬಂದಾಗ ಇಡೀ ಭಾರತೀಯ ಕೋಟ್ಯಂತರ ಮನಸ್ಸುಗಳಿಗೆ “ಯಾರಾದರೂ ಗೆದ್ದರೂ ಸಂತೋಷವೇ” ಎಂಬ ಭಾವನೆಯೊಂದು ಮನೆಮಾಡಿಬಿಟ್ಟಿತು……ಗಾಂಧೀಜಿ ನೆಲ್ಸನ್ ಮಂಡೇಲರ ಮೂಲಕ ಭಾರತ ಆಫ್ರಿಕಾವನ್ನು ತಮ್ಮ ದಿವ್ಯ ವ್ಯಕ್ತಿತ್ವ ಹೋರಾಟಗಳಿಂದ ಒಂದಾಗಿಸಿದ್ದರು…ಇಲ್ಲಿ ಮತ್ತೊಮ್ಮೆ ಕ್ರಿಕೆಟ್ ಮಾಂತ್ರಿಕತೆಯ ಮೂಲಕ ಭಾರತ ದ.ಆಫ್ರಿಕಾಗಳೆರಡು ಭಾವಪೂರ್ಣವಾಗಿ ಜಗತ್ತಿನ ಜನಮಾನಸದಲ್ಲಿ ಅಜರಾಮರರಾಗಿ ಉಳಿದು ಹೋದವು…
ಮಹಾಭಾರತದ ಕರ್ಣನ ಅವಸಾನವನ್ನು ನೆನಪಿಸುವಂತಿತ್ತು ಆಫ್ರಿಕನ್ ಹರಿಣಗಳ ಸೋಲು. ಪಾಂಡವರು ಯುದ್ದದಲ್ಲಿ ಗೆಲುವನ್ನೂ ಕಂಡರೂ ಸಂಭ್ರಮಿಸಲಾರದಂತಹ ಮನಃಸ್ಥಿತಿಯಂತೆಯೇ ಕರ್ಣನ ಮರಣಕ್ಕಾಗಿ ಮಿಡಿಯುವಂತೆ ಮಾಡಿತು.. . ದ.ಆಫ್ರಿಕಾದ ಕ್ರೀಡಾಳುಗಳು ಸೋತು ಕಣ್ಣೀರು ಹಾಕಿದಾಗ ಸ್ವತಃ ಭಾರತೀಯ ಕ್ರಿಕೆಟ್ ಪಟುಗಳು ನೈತಿಕ ಸ್ಥೈರ್ಯ ತುಂಬಿದರು.
ಇಲ್ಲಿ ದ್ವೇಷದಾಚೆಗಿಂತ ಸ್ನೇಹಭಾವವಿದೆ.
ರಿಷಬ್ ಪಂತ್ ಕ್ವಿಂಟನ್ ಡಿಕಾಕ್ ರ ಮಗುವನ್ನು ಮುದ್ದಿಸಿ ಅವನಿಗೆ ಧೈರ್ಯತುಂಬುತ್ತಿದ್ದ ಸನ್ನಿವೇಶಗಳು, ರೋಹಿತ್ ನೆಲದ ಮಣ್ಣನ್ನು ಭಕ್ತಿಯಿಂದ ಸೇವಿಸಿದ್ದು, ಪಾಂಡ್ಯ ಭಾವುಕವಾಗಿ ಅತ್ತದ್ದೂ, ಹರಿಣಗಳ ಪ್ರೇಯಸಿಯರು ತಮ್ಮ ಪ್ರಿಯಕರರನ್ನು ತಬ್ಬಿ ಸಮಾಧಾನಿಸುತ್ತಿದ್ದ ದೃಶ್ಯಗಳೇ ಕ್ರೀಡಾಂಗಣವನ್ನೂ ಆವರಿಸಿದ್ದಿತು.
ಈ ವಿಜಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಭಾರತೀಯನ ಮನಸ್ಸು ದ.ಆಫ್ರಿಕಾವೂ ಗೆಲ್ಲಬೇಕಿತ್ತೆಂಬ ಒಂದು ಅಭಿಪ್ರಾಯವನ್ನಾದರೂ ತನ್ನಂತರಾತ್ಮದಿಂದ ವ್ಯಕ್ತಪಡಿಸಿದ್ದಾನೆ… ಕೊನೆಗೂ ಛಲದಿಂದಲೇ ಹೋರಾಡಿ ಸೋತ ಆಫ್ರಿಕಾದ ಸೋಲು ದುರ್ಯೋಧನನ ಸೋಲನ್ನು ನೆನಪಿಸುವಂತಿತ್ತು…ಸೂರ್ಯನೂ, ಕುರಕುಲದ ದುರ್ಯೋಧನನೂ ಅಸ್ತಂಗತನಾದ ದುಃಖಿತ ಭಾವವೊಂದು ಭಾವದೀಪ್ತಿಯಾಗಿ ಬೆಳಗಿತು.…
ಭಾರತದೊಳ್ ಪೆರಾರುಮನೊಂದೆ ಚಿತ್ತದಿಂ ನೆನವೊಡೆ ಆಫ್ರಿಕನ್ ಕ್ರಿಕೆಟ್ ಕಲಿಗಳನ್ ನೆನೆಯೆಂಬಂತೆ ಭಾರತೀಯ ಮನಸ್ಸು ಬೀಗಿತು.. ಪಂದ್ಯದ ಪ್ರತಿ ಹಂತದಲ್ಲೂ ಭಾರತೀಯ ಕ್ರೀಡಾಕಲಿಗಳಿಗೆ ಆತ್ಮಸ್ಥೈರ್ಯ ಕಳೆದುಕೊಂಡ ಮಗನೊಬ್ಬನಿಗೆ ಧೈರ್ಯ ತುಂಬುವ ತಂದೆಯಂತೆ ಬೆಂಗಾವಲಾಗಿ ನಿಂತವರು ಕನ್ನಡಿಗ ದ್ರಾವಿಡ್.
ಪಂದ್ಯದ ನಂತರ ದ್ರಾವಿಡ್ ಅವರನ್ನು ಮಗುವಿನಂತೆ ಮೆಲಕ್ಕೆತ್ತೆಸದದ್ದು ಇದನ್ನು ಇಡೀ ಕ್ರೀಡಾಂಗಣಕ್ಕೆ ಅವರ ಮತ್ತು ಕ್ರೀಡಾಳುಗಳ ಭಾವಪೂರ್ಣ ಸಂಬಂಧವನ್ನು ಸಾರಿ ಹೇಳುವಂತಿತ್ತು… ಭಾರತೀಯರ ಗೆಲುವಿನಲ್ಲಿ ಕೊನೆವರೆಗೂ ಕಣ್ಣಾಗಿ, ಕೊನೆಯಲ್ಲಿ ಅವರೂ ಕಣ್ಣೀರು ಸುರಿಸಿ ತಂಡದ ಮಾರ್ಗದರ್ಶಕ ಸ್ಥಾನಕ್ಕೆ ಸಾರ್ಥಕತೆಯ ಅರ್ಥಪೂರ್ಣವಿದಾಯ ಹೇಳಿದರು…
ಇಡೀ ಕ್ರೀಡಾಂಗಣದಲ್ಲಿ ಎತ್ತ ನೋಡಿದರೂ ಸೋಲಿನ ಕಣ್ಣೀರು, ಗೆಲುವಿನ ಕಣ್ಣೀರೇ… ಭಾವನಾತ್ಮಕತೆಯ ವಿದಾಯದೊಂದಿಗೆ ಹಳೆ ಬೇರುಗಳು ಹೊಸ ಚಿಗುರಿಗೆ ದಾರಿಮೊಡಿಕೊಟ್ಟಿವೆ…ಇನ್ನೊಮ್ಮೆ ಭಾರತದ ಪರ ಚುಟುಕು ಕ್ರೀಡಾಲೋಕದಲ್ಲಿ ರೋಹಿತ್, ಕೋಹ್ಲಿ, ಜಗ್ಗು ಅಬ್ಬರಿಸಲಾರರು. IPL ನಲ್ಲಿ ಅವರು ಆಟವನ್ನೂ ಮುಂದವರೆಸಿದರೂ ಭಾರತವನ್ನು ಪ್ರತಿನಿಧಿಸಿ ಆಡವ ರೋಮಾಂಚನವೇ ಬೇರೆ… ಆದರೂ ಅವರು ನೀಡಿದ ಕೊಡುಗೆ ಮಾತ್ರ ಭಾರತೀಯನ ಜನಮಾನಸದೆದೆಯಲ್ಲಿ ಅವಿಸ್ಮರಣೀಯ…ಇಷ್ಟೊಂದು ಭಾವಪರವಶಕ್ಕೆ ಸಾಕ್ಷಿಯಾದ ಈ ಪಂದ್ಯ ಪ್ರತಿಯೊಬ್ಬ ಭಾರತೀಯ ಮತ್ತು ಆಫ್ರಿಕನ್ ಬದುಕಿನಲ್ಲಿ ಸದಾ ಹಚ್ಚಹಸಿರು…
ರಾಜ್ ಕುಮಾರ್ ಬಂಗಾರದ ಮನುಷ್ಯ ಸಿನಿಮಾದ ಕೊನೆಯ ದೃಶ್ಯದಲ್ಲಿ ಮಣ್ಣನ್ನು ಎದೆಗೊತ್ತಿಕೊಂಡರು. ರೋಹಿತ್ ಇಲ್ಲಿ ಅದೇ ಮಣ್ಣನ್ನು ಬಾಯಿಂದ ಮೆದ್ದರು… ಮಣ್ಣು.. ನೆಲದೊಟ್ಟಿಗಿನ ಈ ಭಾವಪೂರ್ಣ ಸಂಬಂಧಕ್ಕೆ ಸಾಕ್ಷಿಯಾದ ಈ ಚುಟುಕು ಕ್ರೀಡೆಗೆ ದ್ವೇಷದಾಚೆಯ ಸ್ನೇಹಭಾವದ ಸಂದೇಶದೊಂದಿಗೆ ವಿದಾಯವಿತ್ತರು…
– ಮಂಜುನಾಥ.ಬಿ (ಕೋಟೆ) ಹೊಳೆಹೊನ್ನೂರು, ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ.ಕಾ. ಯಗಟಿ




