ಕೃಷಿ ಇಲಾಖೆಯಲ್ಲಿ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು: ಚೆಲುವರಾಯಸ್ವಾಮಿ

3 years ago

#Thousands #posts #filled #agriculture #department #Cheluvarayaswamy

ಬೆಂಗಳೂರು: ಕೃಷಿ ಅನುವುಗಾರ, ಕೃಷಿ ಸಹಾಯಕ ಸೇರಿದಂತೆ ಹಲವಾರು ಹುದ್ದೆಗಳು ಖಾಲಿ ಇವೆ. ಈ ಎಲ್ಲಾ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ

ಕರ್ನಾಟಕ ಬೀಜ ನಿಗಮ ಮತ್ತು ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಮತ್ತು ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಸುಮಾರು 2,500 ಹುದ್ದೆಗಳು ಖಾಲಿ ಇದ್ದು, ಮೊದಲ ಹಂತದಲ್ಲಿ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಅವರು ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ. ಆದಷ್ಟು ಬೇಗ ನೇಮಕಾತಿ ಮಾಡಲಾಗುವುದು. ಇದರಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಕಾರಿಗಳ ಹುದ್ದೆಗಳು ಸೇರಿವೆ ಎಂದರು.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೃಷಿ ಅಧಿಕಾರಿಗಳಿದ್ದಾರೆ. ಆದರೆ ಕ್ಷೇತ್ರ ಮಟ್ಟದಲ್ಲಿ ಇಲ್ಲ. ಹೋಬಳಿ, ತಾಲ್ಲೂಕು ಮಟ್ಟದಲ್ಲೂ ಕೃಷಿ ಅಧಿಕಾರಿಗಳು ರೈತರ ಸಂಪರ್ಕಕ್ಕೆ ಸಿಗಬೇಕೆಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಹುದ್ದೇಶಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಕೃಷಿ ಇಲಾಖೆಯಲ್ಲಿ ನೇಮಕಾತಿಯನ್ನೇ ಮಾಡಿಲ್ಲ. ನಾವು ನಾಲ್ಕೂವರೆ ತಿಂಗಳಲ್ಲೇ ನೇಮಕಾತಿಗೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ 360 ಕೃಷಿ ಸಹಾಯಕ ಅಧಿಕಾರಿಗಳ ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 113 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ 22 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸರ್ಕಾರ ಕೆಲಸ ಮಾಡುತ್ತಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

Leave a Reply