ಹಳೆಯ ವಿಷಯಗಳಲ್ಲಿ ಆಸಕ್ತಿ ಇದ್ದವರಿಗೆ ಮಾತ್ರ  ಈ ಪೋಸ್ಟ್!

2 years ago

#MRKAMALA #metikurke #post #interested #old #stuff

ಹಾಸನದ ಜಿಲ್ಲಾಧಿಕಾರಿಗಳಾಗಿದ್ದ ಶ್ರೀಮಾನ್ ಎಲ್ . ಮುನಿಸ್ವಾಮಿ, ಬಿ. ಎ ಅವರಿಗೆ  27 . 6 . 1949 ರಲ್ಲಿ   ಬರೆದಿದ್ದ `ಬಿನ್ನವತ್ತಳೆ’ ಯನ್ನು ಓದುತ್ತಿದ್ದೆ. ಊರನ್ನು ಕಟ್ಟುವುದರ ಬಗ್ಗೆ ಇದ್ದ ಹಿರಿಯರ ಕಾಳಜಿ, ಬರವಣಿಗೆಯ ರೀತಿ, ಚಾತುರ್ಯ ಇತ್ಯಾದಿಗಳೆಲ್ಲ  ನನ್ನನ್ನು ಆಕರ್ಷಿಸಿತು. ಜೊತೆಗೆ ಪಶುವೈದ್ಯ ಶಾಲೆಗೆ ನಮ್ಮದೊಂದು ಮನೆಯನ್ನು ಬಿಟ್ಟು ಕೊಟ್ಟಿರುವುದನ್ನು ಇದರಲ್ಲಿ  ಗಮನಿಸಿದೆ. ಹಾಗೆ ನೋಡಿದರೆ ನಮ್ಮ ದೇವಸ್ಥಾನದ ಬಳಿಯಿದ್ದ ನಮ್ಮ ಎರಡು ಪುಟ್ಟ ಮನೆಗಳು ನಾನು ಹುಟ್ಟುವ ಹೊತ್ತಿಗೆ ಪಶು ವೈದ್ಯ ಶಾಲೆಯಾಗಿ ನಂತರ ಪೋಸ್ಟ್ ಆಫೀಸ್ ಆಯಿತು. ಜೊತೆಗೆ ಅಲ್ಲಿಯೇ  ಶಿಶುವಿಹಾರವಿತ್ತು, ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ `ಸಮಾಜ’ವಿತ್ತು. ನಂತರ BAIF ಬಂತು. ಸ್ವಾತಂತ್ರ್ಯ ಬಂದ ಹೊಸದರಲ್ಲಿ ಒಂದಷ್ಟು ಹಿರಿಯರು  ಸೇರಿ ಗ್ರಾಮವೊಂದನ್ನು ಮಾದರಿ ಎನ್ನುವಂತೆ ಕಟ್ಟಿದ ಬಗೆ ವಿಸ್ಮಯ ಮೂಡುತ್ತದೆ.  ಜೊತೆಗೆ ಈ ಬಿನ್ನವತ್ತಳೆ ಯಲ್ಲಿ ಎಷ್ಟೊಂದು ವಿಷಯಗಳಿವೆ. ಓದುವುದು ಕಷ್ಟವಾಗುವುದರಿಂದ ಅದನ್ನಿಲ್ಲಿ ಕೊಟ್ಟಿದ್ದೇನೆ.

– ಎಂ.ಆರ್.ಕಮಲ, ಕವಯಿತ್ರಿ

ಮಾನ್ಯ ಜಿಲ್ಲಾಧಿಕಾರಿಗಳೇ,

ಸೌಜನ್ಯಶಾಲಿಗಳೂ, ಜನಾನುರಾಗಿಯೂ ಆದ ತಾವು ಮೈಸೂರು ಶ್ರೀಮನ್ಮಹಾರಾಜರವರ ಸರ್ಕಾರದ ನಾನಾ ಇಲಾಖೆಗಳಲ್ಲಿ ಈಗ್ಗೆ ಇಪ್ಪತ್ತು ವರ್ಷಗಳಿಗೆ ಮೇಲ್ಪಟ್ಟು ದಕ್ಷತೆಯಿಂದಲೂ ಪ್ರಾಮಾಣಿಕತೆಯಿಂದಲೂ ಕೆಲಸ ಮಾಡಿ ಕೀರ್ತಿಗಳಿಸಿ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿ ಐತಿಹಾಸಿಕ ಮಹತ್ವವುಳ್ಳ ನಮ್ಮ ಜಿಲ್ಲೆಯನ್ನು ಸುಮಾರು ಮೂರು ವರ್ಷಗಳಿಂದಲೂ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತ ನಡೆಸುತ್ತಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷವನ್ನುಂಟುಮಾಡಿದೆ. ರೈತರ ಹಿತಚಿಂತಕರಾದ ತಾವು ಈ ಜಿಲ್ಲೆಯ ಮೂಲೆಯಾದ ಈ ಗ್ರಾಮಕ್ಕೆ ನಮ್ಮ ಆಹ್ವಾನವನ್ನು ಮನ್ನಿಸಿ ಪಶುವೈದ್ಯಶಾಲಾ ಪ್ರಾರಂಭೋತ್ಸವವನ್ನು ನೆರವೇರಿಸಲು ದಯಮಾಡಿಸಿರುವ ಈ ಸಮಯದಲ್ಲಿ ತಮಗೆ ಸ್ವಾಗತ ಬಯಸುತ್ತೇವೆ.

ಕಣಕಟ್ಟೆ ಹೋಬಳಿಯಲ್ಲಿ ಮಧ್ಯ ರಾಷ್ಟ್ರವಾದ ಈ ಗ್ರಾಮದಲ್ಲಿ ಈಗಾಗಲೇ ಹಾಸನದ ಜಿಲ್ಲಾಬೋರ್ಡಿನ ಆಶ್ರಯದಲ್ಲಿ ಶ್ರೀ ಜಯಚಾಮರಾಜೇಂದ್ರ ಹೈಸ್ಕೂಲು ಸ್ಥಾಪಿತವಾಗಿರುವುದು ವೇದ್ಯವೇ ಇರುತ್ತೆ. ಈ ಹೈಸ್ಕೂಲಿನಿಂದ ಈ ಪ್ರಾಂತ್ಯದ ಗ್ರಾಮಾಂತರ ಪ್ರದೇಶದವರಿಗೆ ಬಹಳ ಉಪಕಾರವಾಗಿರುತ್ತೆ. ರೈತನ ಆರ್ಥಿಕ ಅಭಿವೃದ್ಧಿಯೂ ಮತ್ತು ವ್ಯವಸಾಯಾಭಿವೃದ್ಧಿಯೂ ರೈತನ ಗೋಸಂಪತ್ತನ್ನೇ ಅವಲಂಬಿಸಿದೆ. ಗೋವುಗಳ ರೋಗರುಜಿನಗಳನ್ನು ತಡೆಗಟ್ಟಲು ಈ ಗ್ರಾಮಕ್ಕೆ ಪಶುವೈದ್ಯ ಶಾಲೆಯನ್ನು, ಜನರ ವ್ಯಾಪಾರೋದ್ಯಮಗಳು ಹೆಚ್ಚಲು ಅನುಕೂಲವಾಗುವಂತೆ ಸಂತೆಯನ್ನು ಮಂಜೂರು ಮಾಡಿಸಿ ಕೊಟ್ಟಿದ್ದಕ್ಕಾಗಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ಶ್ರೀಮಾನ್ ವೈ. ಧರ್ಮಪ್ಪ, ಬಿ. ಎ , ಬಿ. ಎಲ್ , ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಮತ್ತು ಈ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಗೋಸಂಪತ್ತಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಶು ವೈದ್ಯ ಇಲಾಖೆಯ ಜಿಲ್ಲಾ ಸೂಪರಿಡೆಂಟರಾದ ಶ್ರೀಮಾನ್ ಎಂ. ರಾಮಸ್ವಾಮಿ ನಾಯಿಡು ಅವರಿಗೆ ನಮ್ಮ ಅಭಿನಂದನೆಗಳು. ಪಶುವೈದ್ಯಶಾಲಾ ಕಟ್ಟಡಕ್ಕೆ ಈ ಗ್ರಾಮದ ಶ್ರೀಮಾನ್ ಮೇಲಪ್ಪನವರು ಒಂದು ಸಹಸ್ರ ರೂಪಾಯಿಗಳನ್ನು , ಶ್ರೀಮಾನ್ ಪಟೇಲ್ ರಾಮೇಗೌಡರು ಐದು ನೂರು ರೂಪಾಯಿಗಳನ್ನು ದಾನ ಮಾಡಿರುತ್ತಾರಲ್ಲದೆ ಇನ್ನೂ ಅನೇಕ ಮಹನೀಯರು ಉದಾರವಾಗಿ ಸಹಾಯ ಮಾಡಲು ಒಪ್ಪಿರುತ್ತಾರೆ. ಈ ಆಸ್ಪತ್ರೆಯು ಸದ್ಯದಲ್ಲಿ ನಡೆಯಲು ಶ್ರೀಮಾನ್ ಎಂ.ಎಚ್ ಹರಿಯಣ್ಣನವರು ತಮ್ಮ ಮನೆಯೊಂದನ್ನು ಬಿಟ್ಟು ಕೊಟ್ಟಿರುತ್ತಾರೆಂಬ ಸಂಗತಿಯನ್ನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳಲು ಅಪ್ಪಣೆ ಬೇಡುತ್ತೇನೆ.

ಆಹಾರ ಪದಾರ್ಥಗಳ ಕಂಟ್ರೋಲು ಇರುವ ಕಾಲದಲ್ಲಿ ಬೆಳೆದ ರೈತರಿಂದ ಧಾನ್ಯಗಳನ್ನು ವಸೂಲಿ ಮಾಡುವಾಗಲೂ ಮತ್ತು ಜಮೀನಿಲ್ಲದವರಿಗೆ ಆಹಾರ ಪದಾರ್ಥಗಳನ್ನು ಹಂಚುವಾಗಲೂ ಕೆಲವು ನ್ಯೂನತೆಗಳು ತಲೆದೋರಿ ಪ್ರಾಮಾಣಿಕರಾದವರಿಗೆ ಸಹ ಅನೇಕ ವೇಳೆ ತೊಂದರೆಯಾಗುವ ಸಂಭವವೂ ತಮ್ಮ ಚಿತ್ತಕ್ಕೆ ಬಂದಿರುವ ಸಂಗತಿಯಾಗಿರುತ್ತೆ. ಬಡವರ ಆಧಾರಿಗಳಾದ ತಾವು ರೈತಾಪಿ ವರ್ಗದವರಿಗೆ ತೊಂದರೆಯಾಗದ ರೀತಿಯಲ್ಲಿ ಈ ಜಿಲ್ಲೆಯಲ್ಲಿ ಆಹಾರ ಸಮಸ್ಯೆಯನ್ನು ಬಿಡಿಸುತ್ತಿರುವುದಕ್ಕೆ ನಾವುಗಳು ಚಿರಋಣಿಗಳಾಗಿರುತ್ತೇವೆ. ಆಹಾರೋತ್ಪತ್ತಿಯು ಜಾಸ್ತಿಯಾಗಬೇಕಾದರೆ ಮಳೆಯ ನೀರನ್ನೇ ನಂಬಿಕೊಂಡರೆ ರೈತನು ಹೆಚ್ಚು ಬೆಳೆಯನ್ನು ಬೆಳೆಯಲಾರನು. ಆದ್ದರಿಂದ ಶೀಘ್ರವಾಗಿ  ಈ ಹೋಬಳಿಯ ಎಲ್ಲ ಸರ್ಕಾರಿ ಕೆರೆಗಳನ್ನು ರಿಪೇರಿ ಮಾಡಿಸಿಕೊಡಬೇಕಾಗಿ ಅರಿಕೆ ಮಾಡಿಕೊಳ್ಳುತ್ತೇವೆ.

ವಿನಯಶೀಲರೂ, ರೈತರ ಹಿತ ಚಿಂತಕರೂ ಆದ ತಾವು ಅನೇಕ ಕಾರ್ಯ ಗೌರವಗಳ ನಡುವೆ ಅವಕಾಶ ಕಲ್ಪಿಸಿಕೊಂಡು ಇಲ್ಲಿಗೆ ದಯಮಾಡಿಸಿದ್ದಕ್ಕೆ ತಮ್ಮನ್ನು ವಂದಿಸುತ್ತೇವೆ. ಕರುಣಾಮಯನಾದ ಭಗವಂತನು ತಮಗೂ ತಮ್ಮ ಕುಟುಂಬದವರಿಗೂ ಆಯುರಾರೋಗ್ಯ ಐಶ್ವರ್ಯಾದಿಗಳನ್ನು, ತಮಗೆ ಇನ್ನೂ ಉನ್ನತ ಪದವಿಯನ್ನು ಕೊಟ್ಟು ಕಾಪಾಡಲೆಂಬುದೇ ನಮ್ಮ ಪ್ರಾರ್ಥನೆ.

ಇಂತು ತಮ್ಮ ವಿಧೇಯರುಗಳಾದ,
ದೊಡ್ಡಮೇಟಿಕುರ್ಕೆ ಗ್ರಾಮದ ಪ!! ರಾಮೇಗೌಡ, ಮೇಲಪ್ಪ,  ಎಂ. ಹೆಚ್. ಹರಿಯಣ್ಣ ಮತ್ತು ಗ್ರಾಮಸ್ಥರು

Leave a Reply