ಬಳ್ಳಾರಿ: ಭಕ್ತಶ್ರೇಷ್ಠ ಕನಕದಾಸರ ಕೀರ್ತನೆಗಳಲ್ಲಿ ಪ್ರತಿಯೊಂದು ಪದಕ್ಕೂ ಜೀವನಾಂಶದ ಮೌಲ್ಯವಿದೆ. ಆ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಆಯೋಸಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪವಿತ್ರ ಮನಸ್ಸು ಹೊಂದಿದವರು. ಅದೇರೀತಿಯಾಗಿ ಸಂಗೊಳ್ಳಿ ರಾಯಣ್ಣನವರ ಧೈರ್ಯ, ಶೌರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ನಗರದಲ್ಲಿ ರಾಯಣ್ಣನವರ ಪುತ್ಥಳಿ ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ನಗರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಳ್ಳಾರಿ ನಗರ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಮಾತನಾಡಿ, ಕನಕದಾಸರು ಭಕ್ತ ಶ್ರೇಷ್ಠರು. ಸಾಮಾಜಿಕ ಚಿಂತನೆಗೆ ಒಳ್ಳೆಯ ಸಂದೇಶ ಮೌಲ್ಯಗಳನ್ನು ನೀಡಿದವರು. ಕುಲ, ಗೋತ್ರ, ಜಾತಿ ಧರ್ಮ ಎನ್ನದೇ ಸಮಾನತೆಯನ್ನು ಸಾರಿದವರು. ಯುವಕರು ದಾಸರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಪಿ.ಎಲ್ ಗಾದಿಲಿಂಗನ ಗೌಡ ಮಾತನಾಡಿ, ಇಂದು ಕನಕದಾಸರ 538 ನೇ ಜಯಂತಿ. ಕನಕದಾಸರು ವ್ಯಕ್ತಿಯಲ್ಲ ಶೋಷಿತರ ದೊಡ್ಡ ಧ್ವನಿಯಾಗುವ ಮೂಲಕ ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾನತೆಯನ್ನು ಸಾರಿದವರು. 16 ನೇ ಶತಮಾನದಲ್ಲಿ ಅವರ ಕೀರ್ತನೆಗಳಿಂದ ಸಮಾಜ ಸುಧಾರಣೆಯನ್ನು ಮಾಡಿದವರು ಎಂದರು.
ವೀರಶೈವ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ನೀಲಮ್ಮ.ಕೆ ಮಾತನಾಡಿ, ದಾಸಶ್ರೇಷ್ಠ ಕನಕದಾಸ ಎಂದೂ ಕರೆಯಲ್ಪಡುವ ಇವರು, ಭಾರತದ ಕರ್ನಾಟಕದ ಹರಿದಾಸ ಸಂತ ಮತ್ತು ದ್ವೈತ ವೇದಾಂತದ ತತ್ವಜ್ಞಾನಿಯಾಗಿದ್ದರು ಎಂದರು.
ಕನಕದಾಸರು ಕ್ರಿ.ಶ. 1509ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಹರಿದಾಸ ಸಂತ, ದಾರ್ಶನಿಕ ಮತ್ತು ಕವಿಯಾದ ಕನಕದಾಸ ಮೂಲ ಹೆಸರು ತಿಮ್ಮಪ್ಪ ನಾಯಕ. ಇವರು ಯುದ್ಧದಲ್ಲಿ ಗಾಯಗೊಂಡ ನಂತರ ಸೈನಿಕ ವೃತ್ತಿಯನ್ನು ತ್ಯಜಿಸಿ ಶ್ರೀಕೃಷ್ಣನ ಭಕ್ತರಾದರು. ನಂತರ ‘ಕನಕದಾಸರು’ ಎಂಬ ಹೆಸರನ್ನು ಪಡೆದು, ತಮ್ಮ ಕೀರ್ತನೆಗಳ ಮೂಲಕ ಸಿರಿ ಮತ್ತು ಸಂಪತ್ತು ಶ್ರೇಷ್ಠವಲ್ಲ ಎಂದು ಒತ್ತಿ ಹೇಳಿದರು ಎಂದರು.
ಇದೇ ವೇಳೆ ಗಣ್ಯರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಭಕ್ತ ಕನಕದಾಸರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕವಿತಾ ಗಂಗೂರು ತಂಡದ ದಾಸರ ಪದಗಳು ಕೇಳುಗರಿಗೆ ಇಂಪು ನೀಡಿತು.
ಕನಕದಾಸ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆ ಬಳ್ಳಾರಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು ಹಾಗೂ ವಾದ್ಯಗಳೊಂದಿಗೆ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಯು-ಗಡಿಗಿ ಚೆನ್ನಪ್ಪ ವೃತ್ತ-ಬೆಂಗಳೂರು ರಸ್ತೆ-ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮುಂಭಾಗ ತೇರು ಬೀದಿ-ಹೆಚ್.ಆರ್.ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆವರೆಗೆ ತಲುಪಿತು.
ಈ ವೇಳೆ ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಪಿ.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗು ಇತರರು ಹಾಜರಿದ್ದರು.




