ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಾನು ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಸೆಮಿಕಂಡಕ್ಟರ್ ಸೇರಿದಂತೆ ಕೈಗಾರಿಕಾ ವಲಯದ ಹಲವು ಬೇಡಿಕೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಆ ಸಂದರ್ಭದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಿದ್ದೆ. ಹೀಗಾಗಿ ರಾಜ್ಯ ಸರ್ಕಾರ ಅಸಹಕಾರ ತೋರಿಸುತ್ತಿದೆ ಎನ್ನುವುದು ಸರಿಯಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿರುಗೇಟು ನೀಡಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಇವರನ್ನೆಲ್ಲ ಆಹ್ವಾನಿಸಲು ಸದ್ಯದಲ್ಲೇ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆಗಲೂ ಇದನ್ನೆಲ್ಲ ದಾಖಲೆಗಳ ಸಮೇತ ಕುಮಾರಸ್ವಾಮಿಯವರಿಗೆ ನೆನಪಿಸಲಾಗುವುದು. ನಿರ್ಮಲಾ ಸೀತಾರಾಮನ್ ಮತ್ತು ರಾಜನಾಥ್ ಸಿಂಗ್ ಬಳಿ ಕೂಡ ನಾನು ಹಿಂದೆ ಭೇಟಿಯಾಗಿದ್ದಾಗ ರಾಜ್ಯದ ಬೇಡಿಕೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೆ ಎಂದಿದ್ದಾರೆ.
ಕುಮಾರಸ್ವಾಮಿ ಕೂಡ ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಕೂಡ ಒಂದು ಹೆಜ್ಜೆ ಮುಂದೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು. ರಾಜ್ಯಕ್ಕೆ ಉದ್ದಿಮೆಗಳನ್ನು ತಂದರೆ ಅವರಿಗೂ ಒಳ್ಳೆಯ ಹೆಸರು ಬರುತ್ತದೆ. ಹಿಂದೆ ಭೇಟಿಯಾಗಿದ್ದಾಗ ಸೆಮಿಕಂಡಕ್ಟರ್ ಉದ್ದಿಮೆಗಳು ಮೊದಲು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರೂ ಕೊನೆಗೆ ಗುಜರಾತಿಗೆ ಹೋಗುತ್ತಿರುವ ವಿದ್ಯಮಾನದ ಬಗ್ಗೆ ಚರ್ಚಿಸಿದ್ದೆ. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಇರಬಾರದು ಎಂದರು.
ನಾವು ಹಿಂದೆ ಏನೇನು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೆವು ಎನ್ನುವ ವಿವರ ನಮ್ಮ ಬಳಿ ಇದೆ. ಆಗಿನ ಭೇಟಿಯಲ್ಲಿ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಕೂಡ ಇದ್ದರು. ಕೈಗಾರಿಕಾ ಸಚಿವನಾಗಿ ನಾನು ಅವರ ಬಳಿ ಹೋಗಿದ್ದೆ. ಇದರಲ್ಲಿ ನನ್ನದು ಅನ್ನುವ ಸ್ವಾರ್ಥವೇನೂ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಪಕ್ಷದ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಮಾತನಾಡಬಾರದು ಎನ್ನುವ ಅರ್ಥದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಅವರು ನಮ್ಮ ವಯಸ್ಸಿಗಿಂತ ಹೆಚ್ಚು ಕಾಲ ರಾಜಕಾರಣ ಮಾಡಿರುವ ಹಿರಿಯರು. ಪಕ್ಷದಲ್ಲಿ ಶಿಸ್ತು ಇರಬೇಕು ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಯಾರಿಗಾದರೂ ಸಮಸ್ಯೆ ಇದ್ದರೆ ಪಕ್ಷದ ವ್ಯವಸ್ಥೆಯೊಳಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮುಂತಾದವರ ಜತೆ ಚರ್ಚಿಸಬಹುದು ಎಂದರು.
ಕಾಂಗ್ರೆಸ್ಸಿನಲ್ಲಿ ಈಗ 139 ಶಾಸಕರಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿದೆ. ನಮ್ಮಲ್ಲಿ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೀಗಿರುವಾಗ ಎಂ ಬಿ ಪಾಟೀಲ, ಪರಮೇಶ್ವರ ಮತ್ತು ಸತೀಶ ಜಾರಕಿಹೊಳಿ ಅವರದೇನೂ ನಡೆಯುವುದಿಲ್ಲ. ಇನ್ನೊಂದೆಡೆಯಲ್ಲಿ, ಬಿಜೆಪಿಯಲ್ಲಿ ಯತ್ನಾಳ, ರಮೇಶ ಜಾರಕಿಹೊಳಿ, ವಿಜಯೇಂದ್ರ ಅವರೆಲ್ಲ ಪರಸ್ಪರ ಏಕವಚನದಲ್ಲಿ ಜಗಳವಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಡೆಯಿಂದ ಸದ್ಯದಲ್ಲೇ 25 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಅವರೆಲ್ಲ ಅಲ್ಲಿ ಬೇಸತ್ತಿದ್ದು, ಬೇಷರತ್ತಾಗಿ ನಮ್ಮೊಂದಿಗೆ ಬರಲಿದ್ದಾರೆ ಎಂದರು.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳಗಳ ಆಯ್ಕೆ ನಡೆದಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.




