ಬೆಳಗಾವಿಯಿಂದ ಮಡಿಕೇರಿಗೆ‌ ಬಂದು ಮಣ್ಣಾದವರ ದುರಂತ ಕತೆ

2 years ago

#tragic #story #came #Madikeri #Belgaum

ಮಡಿಕೇರಿ: ಹೊಟ್ಟೆ ಪಾಡಿಗಾಗಿ ದೂರದ ಬೆಳಗಾವಿಯಿಂದ ಮಡಿಕೇರಿಗೆ‌ ಬಂದು ಮಣ್ಣಾದವರ ದುರಂತ ಕತೆಯಿದು.

ಕಟ್ಟಡ ನಿರ್ಮಾಣ ಮಾಡುವ ವೇಳೆ ದಿಢೀರ್ ಮಣ್ಣು ಕುಸಿದು ಅದರಡಿ ಸಿಲುಕಿದ ಮೂವರು ಕಾರ್ಮಿಕರು  ಮೃತಪಟ್ಟಿರುವ ದಾರುಣ ಘಟನೆ  ನಗರದ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ  ನಡೆದಿದೆ.

ಮಣ್ಣಿನಡಿ ಸಿಲುಕಿದ ಮೂವರು ಮೃತದೇಹಗಳನ್ನು ಅಗ್ನಿ ಶಾಮಕ ದಳ ಮತ್ತು ಪೋಲಿಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಹೊರತೆಗಿದಿದ್ದಾರೆ.

ಮೃತ ದುರ್ದೈವಿಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಿವಾಸಿಗಳಾದ ಬಸಪ್ಪ, ನಿಂಗಪ್ಪ ಹಾಗೂ ಆನಂದ ಎಂದು ಗುರುತಿಸಲಾಗಿದೆ.

ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಣ್ಣು ತೆಗೆಯುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಅದೃಷ್ಟವಶಾತ್ ಕಾರ್ಮಿಕ ರಾಜು ಎಂಬವರು ಇತರ ಕಾರ್ಮಿಕರ ಸಹಕಾರದಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಉಳಿದ ಮೂವರು ಮಣ್ಣಿನಡಿ ಸಿಲುಕಿಕೊಂಡ ಪರಿಣಾಮ ಮೇಲೆ ಬರಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ಸುಮಾರು 9 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು.

ಘಟನೆಯ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರುಗಳು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply