ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿವಿಗಳ ಪಾತ್ರ ಬಹಳ ಮುಖ್ಯ.ಇವುಗಳ ಸಂಶೋಧನೆಯ ಲಾಭ ರೈತನಿಗೆ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಸಿರು ಕ್ರಾಂತಿ ಬಳಿಕ ದೇಶ ಆಹಾರ ಸ್ವಾವಲಂಬನೆಯನ್ನು ಸಾಧಿಸಿತು. ಅದಕ್ಕೂ ಮೊದಲು ಅವಲಂಬನೆ ಇತ್ತು. ಇತ್ತೀಚಿಗೆ ನಿಧನರಾದ ಕೃಷಿತಜ್ಞ ಸ್ವಾಮಿನಾಥನ್ ಅವರು ಈ ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು. ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು ಹೆಚ್ಚಾಗಬೇಕು ಎಂದರು.
ಕುಷ್ಕಿ ಭೂಮಿ ಅತಿ ಹೆಚ್ವು ಇರುವ ರಾಜ್ಯ ನಮ್ಮದು. ವಾತಾವರಣ ಬದಲಾವಣೆಯಿಂದ ರಾಜ್ಯ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ. ಈ ಕಾರಣಕ್ಕೇ ನಮ್ಮ ರೈತರಿಗೆ ಕೃಷಿ, ತಜ್ಞರು ಮತ್ತು ತಂತ್ರಜ್ಞರ ನೆರವು ಅತ್ಯಗತ್ಯ ಇದಕ್ಕಾಗಿಯೇ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು. ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಕಡಿಮೆ ಮಳೆಯಲ್ಲಿ, ಕಡಿಮೆ ನೀರಲ್ಲಿ ಎಂಥಾ ಬೆಳೆ ಬೆಳೆಯಬಹುದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗದಂತೆ ಏನು ಮಾಡಬೇಕು ಎನ್ನುವ ಕುರಿತಂತೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆದು ರೈತರಿಗೆ ತಲುಪುವಂಥಾಗಬೇಕು ಎಂದು ಹೇಳಿದರು.
ಪ್ರಯೋಗಶಾಲೆಗಳಿಂದ ಕೃಷಿ ಭೂಮಿಗೆ ಏನು ತಲುಪಿದೆ, ಕೃಷಿ ಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ Lab to Land-Land to Lab ಪರಿಕಲ್ಪನೆಯಲ್ಲಿ ವೈಜ್ಞಾನಿಕ ಕೆಲಸಗಳನ್ನು ಕೃಷಿ ವಿವಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷಿ ವಿವಿಗಳು ಅಭಿವೃದ್ಧಿಪಡಿಸಿರುವ ಹೊಸ ತಳಿಗಳು ರೈತರಿಗೆ ತಲುಪಿವೆಯಾ ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಹೊಸ ತಳಿಗಳು ಅಭಿವೃದ್ಧಿ ಮಾಡಿ ಏನು ಪ್ರಯೋಜನ ಎಂದರು.
ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.




