ಐಟಿ ದಾಳಿ ಕುರಿತು ಸಿಬಿಐ ತನಿಖೆ ಅಗತ್ಯ: ರವಿಕುಮಾರ್

2 years ago

#CBI #probe #ITattack #Ravikumar #itraid

ಬೆಂಗಳೂರು: ರಾಜ್ಯದಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿದ 94 ಕೋಟಿ ನಗದು ಮತ್ತು 8 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, 102 ಕೋಟಿ ರೂ. ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ. 1 ಸಾವಿರ ಕೋಟಿ ರೂ. ಸಂಗ್ರಹಿಸಿದ ಮಾಹಿತಿ ಇದೆ ಎಂದು ಬಿಜೆಪಿ ಮುಖಂಡ ರವಿಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಂತ್ರಿಗಳಾದ  ಶಿವಾನಂದ ಪಾಟೀಲ, ಡಿ.ಕೆ.ಶಿವಕುಮಾರ್, ಬೈರತಿ ಸುರೇಶ್, ಸಿಎಂ ಪುತ್ರ ಯತೀಂದ್ರ ಹಣ ಸಂಗ್ರಹಿಸಿದ್ದಾರೆ. ಶಿವಕುಮಾರ್ ನೇತೃತ್ವದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಇದೆಲ್ಲದರ ಕುರಿತು ಸಿಬಿಐ- ಇಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಅಬಕಾರಿ, ಕೈಗಾರಿಕಾ ವಲಯ, ಎಲ್ಲ ಪೊಲೀಸ್ ಠಾಣೆಗಳಿಗೆ ಕಲೆಕ್ಷನ್ ಗುರಿ ಕೊಟ್ಟಿದ್ದಾರೆ. ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿ ಅಧಿಕಾರಿಗಳ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿ ವರ್ಗಾವಣೆಗೆ ಕನಿಷ್ಠ 1ರಿಂದ 3 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು.

ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಬೆಂಗಳೂರಿನಲ್ಲಿ ವಿಪರೀತ ಹಣ ಸಂಗ್ರಹಿಸಿದ್ದಾರೆ. ಅಂಥ ಸಾವಿರಾರು ಕೋಟಿ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಕಳುಹಿಸುತ್ತಾರೆ; ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 251ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಕುರಿತು ಒಂದು ಪೈಸೆ ಪರಿಹಾರ ನೀಡಿಲ್ಲ. ಬರ, ಬಿಸಿಲಿನಿಂದ ರಾಜ್ಯದ ಸಂಪೂರ್ಣ ಬೆಳೆ ನಾಶವಾಗಿದೆ; ಕರೆಂಟಿಲ್ಲದೆ ನೀರಾವರಿ ಬೆಳೆಯೂ ನಾಶವಾಗಿದೆ. ಇದರ ಬಗ್ಗೆಯೂ ಪರಿಹಾರ ಕೊಡುತ್ತಿಲ್ಲ. ಪ್ರತಿದಿನ ಕಾವೇರಿ ನೀರನ್ನು ಹರಿಸುತ್ತಿದ್ದಾರೆ. ಅದನ್ನು ನಿಲ್ಲಿಸಿಲ್ಲ; ಕರ್ನಾಟಕವು ಪೂರ್ತಿ ಎಟಿಎಂ ಆಗಿದೆ ಎಂದು  ದೂರಿದರು.

Leave a Reply