ಕೊನೆಗೂ ಬಯಲಾಯ್ತು ಬಿಜೆಪಿ-ಜೆಡಿಎಸ್ ಮೈತ್ರಿಯ ಅಸಲೀ ರಹಸ್ಯ!!

2 years ago

ಇದು ಕರ್ನಾಟಕ ರಾಜಕಾರಣವನ್ನೆ ಬೆಚ್ಚಿಬೀಳಿಸುವ ಅಧಿಕೃತ ಸುದ್ದಿ!

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಈಗ ಹೊಸ ವಿಷಯವೇನಲ್ಲ. ಆದರೆ ತನ್ನ ಹೆಸರಿನಲ್ಲೇ ಜಾತ್ಯತೀತತೆ ಇಟ್ಟುಕೊಂಡಿರುವ ಜೆಡಿಎಸ್, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಂಡಿದ್ದು ಹೇಗೆ? ಅನ್ನೋ ವಿಚಾರ ಇವತ್ತಿಗೂ ರಾಜಕೀಯ ವಿಶ್ಲೇಷಕರಿಂದ ವಿವರಿಸಲು ಸಾಧ್ಯವಾಗಿರಲಿಲ್ಲ.

ಒಂದು ಮೂಲದ ಪ್ರಕಾರ ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು, ಬಿಜೆಪಿ ಈ ಮೈತ್ರಿ ಮಾಡಿಕೊಂಡಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿತ್ತು. ಅದು ನಿಜವೂ ಇರಬಹುದು. ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಗೆ ಇದಕ್ಕಿಂತಲೂ ಮುಖ್ಯವಾದ ಕಾರಣ ಇನ್ನೊಂದು ಇತ್ತೆಂಬುದು ಈಗಷ್ಟೆ ಬೆಳಕಿಗೆ ಬರುತ್ತಿದೆ!!

ಈ ಸುದ್ದಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನಾವು ಒಂದು ವರ್ಷದಷ್ಟು ಹಿಂದಕ್ಕೆ ಸಾಗಬೇಕು. ಕರ್ನಾಟಕವು ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿದ್ದ ಕಾಲ. ಆಗ ರಾಜ್ಯದಲ್ಲಿ ಉರೀಗೌಡ, ನಂಜೇಗೌಡನ ದೊಡ್ಡ ವಿವಾದ ಭುಗಿಲೆದ್ದಿದ್ದು ನಿಮಗೆ ನೆನಪಿರಬಹುದು. ಅಡ್ಡಂಡ ಕಾರ್ಯಪ್ಪ ಎಂಬ ಅವಿವೇಕಿ ಹುಟ್ಟುಹಾಕಿದ್ದ ಕಾಲ್ಪನಿಕ ಪಾತ್ರಗಳನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ರಾಜಕೀಯ ರಣಾಂಗಣವನ್ನೇ ಸೃಷ್ಟಿಸಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯ ಮೂಲ ಇರುವುದೇ ಇಲ್ಲಿ!!

ಹೌದು! ಶತಾಯಗತಾಯ ಉರೀಗೌಡ-ನಂಜೇಗೌಡ ಕಟ್ಟುಕಥೆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ತೆಗೆಯಬೇಕೆಂದು ಮುಂದಾಗಿದ್ದ ಬಿಜೆಪಿ ಚುನಾವಣೆಯವರೆಗೆ ಆ ಕಾವನ್ನು ಜೀವಂತವಾಗಿಡುವ ಸಲುವಾಗಿ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದನ್ನು ನೀವು ಮರೆತಿರಲಿಕ್ಕಿಲ್ಲ. ಬಿಜೆಪಿಯ ಮುನಿರತ್ನ ನಾಯ್ಡು ನಿರ್ಮಾಣ ಸಂಸ್ಥೆಯಾದ ವೃಷಭಾದ್ರಿ ಪ್ರೊಡಕ್ಷನ್ಸ್ ಮೂಲಕ ಫಿಲ್ಮ್ ಚೇಂಬರ್‌ನಲ್ಲಿ ‘ಉರೀಗೌಡ ನಂಜೇಗೌಡ’ ಟೈಟಲ್ಲನ್ನೂ ಬಿಜೆಪಿ ರೆಜಿಸ್ಟರ್ ಮಾಡಿಸಿತ್ತು. 

ಆದರೆ ಚಿತ್ರನಿರ್ಮಾಣ ಆರಂಭದಲ್ಲೇ ಹಠಾತ್ ನಿಂತುಹೋಯ್ತು. ಯಾಕೆ ಗೊತ್ತಾ? ಬಹಳಷ್ಟು ಜನ, ಆದಿಚುಂಚನಗಿರಿಯ ಮಠಾಧೀಶರು ಮಧ್ಯಸ್ಥಿಕೆ ವಹಿಸಿ ಎಚ್ಚರಿಕೆ ಕೊಟ್ಟಿದ್ದರಿಂದ ಬಿಜೆಪಿ ತೆಪ್ಪಗಾಯಿತು ಎಂದುಕೊಂಡಿದ್ದಾರೆ. ಆದರೆ ಅದು ಪೂರ್ಣಸತ್ಯವಲ್ಲ. ‘ಉರೀಗೌಡ-ನಂಜೇಗೌಡ’ ಸಿನಿಮಾಕ್ಕೆ ಸಂಪೂರ್ಣ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದ ಬಿಜೆಪಿಗೆ ಆ ಲೀಡ್ ಪಾತ್ರಗಳಿಗೆ ಜೀವತುಂಬಬಲ್ಲ ನಟರೇ ಸಿಕ್ಕಿರಲಿಲ್ಲವಂತೆ!

ಬಿಜೆಪಿ ನಡೆಸಿದ್ದ ಆಡಿಷನ್‌ನಲ್ಲಿ ಸಿಟಿ ರವಿ, ಅಶ್ವತ್ಥ್ ನಾರಾಯಣ, ಆರ್ ಅಶೋಕ್, ಪ್ರತಾಪ್ ಸಿಂಹ.. ಕೊನೆಗೆ ಇಳಿವಯಸ್ಸಿನ ಸದಾನಂದ ಗೌಡರೂ ಉರೀಗೌಡ-ನಂಜೇಗೌಡ ಪಾತ್ರಕ್ಕಾಗಿ ಉತ್ಸಾಹದಿಂದ ಭಾಗವಹಿಸಿದರಾದರೂ, ಅವರಲ್ಲಿ ಆ ಪಾತ್ರಗಳ ಹತ್ತಿರಕ್ಕೂ ಸುಳಿಯುವ ಸಾಮರ್ಥ್ಯವಿರಲಿಲ್ಲ. ಸೂಕ್ತ ಲೀಡ್ ನಟರೇ ಇಲ್ಲದೇ ಸಿನಿಮಾ ಸೆಟ್ಟೇರುವುದಾದರು ಹೇಗೆ? ಹಾಗಾಗಿ ಆ ಮಹತ್ವಾಕಾಂಕ್ಷಿ ಪ್ರೊಜೆಕ್ಟ್ ಅನ್ನೇ ಬಿಜೆಪಿ ಕೈಚೆಲ್ಲಿತ್ತು. ಆದರೆ ಪಾತ್ರಗಳಿಗೆ ಸೂಕ್ತ ನಟರ ಹುಡುಕಾಟ ಮಾತ್ರ ಬಿಜೆಪಿ ಪಾಳೆಯದಲ್ಲಿ ನಡೆಯುತ್ತಲೇ ಇತ್ತು.

ಯಾವಾಗ ಜೆಡಿಎಸ್‌ನವರು ಮೈತ್ರಿ ಪ್ರಸ್ತಾಪ ತೆಗೆದುಕೊಂಡು ಬಂದರೋ, ಆಗ ಮೋದಿ-ಅಮಿತ್ ಶಾ ಕಣ್ಣಿಗೆ ಕುಮಾರಸ್ವಾಮಿ-ಎಚ್.ಡಿ. ರೇವಣ್ಣ ಅವರೇ ಉರೀಗೌಡ-ನಂಜೇಗೌಡ ಪಾತ್ರಗಳಿಗೆ ಹೇಳಿ ಮಾಡಿಸಿದ ನಟರು ಎಂಬುದು ಮನದಟ್ಟಾಯ್ತು. ಹೇಗೂ ಕುಮಾರಸ್ವಾಮಿ ರಾಜಕಾರಣಕ್ಕೂ ಮೊದಲು ಸಿನಿಮಾ ಹಿನ್ನೆಲೆಯಿಂದಲೇ ಬಂದವರಾದ್ದರಿಂದ, ಅವರಿಗೆ ನಟನೆಯೂ ಕರಗತವಾಗಿತ್ತು. ಅದನ್ನು ಅರ್ಥ ಮಾಡಿಕೊಂಡ ಬಿಜೆಪಿಗೆ ತಮ್ಮ ‘ಉರೀಗೌಡ-ನಂಜೇಗೌಡ’ ಸಿನಿಮಾವನ್ನು ಮತ್ತೆ ಶುರು ಮಾಡಬಹುದೆಂಬ ವಿಶ್ವಾಸ ಬಂತು. ತಡಮಾಡದೇ ಸಿನಿಮಾದ ತಮ್ಮ ಷರತ್ತನ್ನು ಮುಂದಿಟ್ಟು ಮೈತ್ರಿಗೆ ಸಮ್ಮತಿ ಸೂಚಿಸಿದರು. ಇತ್ತ ವಿಧಾನಸಭಾ ಹೀನಾಯ ಸೋಲಿನಿಂದ ಕೆಲಸವಿಲ್ಲದೆ ಕಂಗೆಟ್ಟಿದ್ದ ಕುಮಾರಣ್ಣ-ರೇವಣ್ಣ ಕೂಡಾ ‘ಉರೀಗೌಡ-ನಂಜೇಗೌಡ’ರಾಗಲು ಒಪ್ಪಿದರು. ಇದೇ ಮೈತ್ರಿಯ ಅಸಲೀ ಗುಟ್ಟು!

ಇತ್ತೀಚೆಗೆ ಗೌಡರ ಇಡೀ ಫ್ಯಾಮಿಲಿ ದಿಲ್ಲಿಗೆ ಹೋಗಿದ್ದಾಗ, ಒಂದು ಅದ್ಭುತ ಫ್ಯಾಮಿಲಿ ಫೋಟೊ ಶೂಟ್ ನಡೆದಿದ್ದು ನಿಮಗೆ ನೆನಪಿರಬಹುದು. ‘ನಮ್ಮ ಸಂಸಾರ, ಆನಂದ ಸಾಗರ’ ಅನ್ನೋ ಸಿನಿಮಾ ಹಾಡನ್ನು ನೆನಪಿಸುವಂತೆ ಎಲ್ಲರೂ ಒಂದೇ ಫ್ರೇಮಿನಲ್ಲಿ ಫೋಜು ಕೊಟ್ಟಿದ್ದರು. ಬಲ್ಲ ಮೂಲಗಳ ಪ್ರಕಾರ ಅದು ‘ಉರೀಗೌಡ-ನಂಜೇಗೌಡ’ ಸಿನಿಮಾಕ್ಕಾಗಿ ಮೋದಿಯವರೇ ಮುತುವರ್ಜಿವಹಿಸಿ ನಡೆಸಿದ ಫೋಟೊಸೆಷನ್ ಅಂತೆ! ಆದರೆ, ಸಿನಿಮಾದಲ್ಲಿ ದೇವೇಗೌಡರ ಪಾತ್ರ ಏನು ಅನ್ನೋ ಗುಟ್ಟನ್ನು ಮಾತ್ರ ಬಿಜೆಪಿ-ಜೆಡಿಎಸ್ ಬಿಟ್ಟುಕೊಡುತ್ತಿಲ್ಲ.

ಎಲ್ಲಾ ಅಂದುಕೊಂಡಂತೆ ನಡೆದರೆ, ಎಂಪಿ ಎಲೆಕ್ಷನ್‌ಗೂ ಮೊದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ‘ಕೇರಳ ಸ್ಟೋರಿ’ ರೀತಿಯಲ್ಲಿ ಸಿನಿಮಾ ಬಿಡುಗಡೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಪದ್ಮನಾಭನಗರದ ಗೋಡೌನುಗಳಲ್ಲಿ ಉರೀಗೌಡ-ನಂಜೇಗೌಡ ಪಾತ್ರರೂಪಿ ಕುಮಾರಣ್ಣ-ರೇವಣ್ಣನ ಮುಗಿಲೆತ್ತರದ ಕಟೌಟುಗಳ ತಯಾರಿ ನಡೆದಿದೆಯಂತೆ. ರೇವಣ್ಣನ ನಟನೆಯನ್ನು ನೋಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆಯಂತೆ..

ಶುಭಂ
(ವಿಶೇಷ ಸೂಚನೆ: ಸಾಧ್ಯವಾದ್ರೆ ನಕ್ಕುಬಿಡಿ!)

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply