ಸರ್ವರ್‌ ಸಮಸ್ಯೆಯಿಂದ ದಾಖಲೆ ಅಪ್‌ಲೋಡ್‌ ಮಾಡಲು ಪರದಾಡುವ ಪರಿಸ್ಥಿತಿ

2 years ago

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ವರ್‌ ಸಮಸ್ಯೆಯಿಂದ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಶಿಕ್ಷಣ ಇಲಾಖೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಎಸ್‌ಎಟಿಎಸ್‌ ತಂತ್ರಾಂಶ (ವಿದ್ಯಾರ್ಥಿ ಸಾಮರ್ಥ್ಯ ಪತ್ತೆ ವ್ಯವಸ್ಥೆ) ಕಡ್ಡಾಯಗೊಳಿಸಿದೆ. ಈ ತಂತ್ರಾಂಶಕ್ಕೆ ವಿದ್ಯಾರ್ಥಿಗಳು ಶಾಲಾ ಹಂತದ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಹಾಗೆ ಅಪ್‌ಲೋಡ್‌ ಮಾಡಿದ ದಾಖಲೆಗಳನ್ನೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿಗೆ ಬಳಸಿಕೊಳ್ಳುತ್ತದೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರೈಸಿ, ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಾವು ಹಿಂದೆ ಓದಿದ ಶಾಲೆಗಳ ದಾಖಲೆಗಳನ್ನು ಎಸ್‌ಎಟಿಎಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಲು ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಕಳೆದ 10 ದಿನಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಪ್ರತಿದಿನ ಸರಾಸರಿ 30 ಸಾವಿರದವರೆಗೆ ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಸರ್ವರ್‌ ತೊಂದರೆಯ ಕಾರಣದಿಂದ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಸಮಸ್ಯೆ ಎದುರಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಹೆಚ್ಚುವರಿ ಸರ್ವರ್‌ ಅಳವಡಿಕೆಗೆ ಸಮ್ಮತಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.

Leave a Reply