‘’ಪೋಟೊ’’ ಸಿನೆಮಾವನ್ನು ನೋಡುತ್ತಿದ್ದಾಗ ಥಿಯೇಟರಿನ ತೆರೆಯ ಮೇಲೆ ಮಾತ್ರವಲ್ಲ ನಮ್ಮ ಮನಸ್ಸಿನ ತೆರೆಯ ಮೇಲೆಯೂ ಒಂದು ಚಿತ್ರ ಓಡುತ್ತಿರುತ್ತದೆ. ಅದು ಕೊರೊನಾ ದಿನಗಳ ಜನರ ಸಾವು, ನೋವು, ಕಣ್ಣೀರು, ಅಸಹಾಯಕತೆ ಮತ್ತು ಸರ್ಕಾರಗಳ ನಿಷ್ಕ್ರಿಯತೆ, ಅಸೂಕ್ಷ್ಮತೆ, ಭ್ರಷ್ಟಾಚಾರಗಳ ಕರಾಳ-ವಿಕರಾಳ ಮುಖಗಳ ಬಿಡಿ ಚಿತ್ರಗಳು.
ಇದು ನಮ್ಮ ಪೋಟೊವನ್ನು ನಾವೇ ಕನ್ನಡಿಯಲ್ಲಿ ನೋಡಿ ಸಂಕಟಪಡುವಂತೆ ಮಾಡುತ್ತದೆ. ನಮ್ಮೊಳಗೆ ಒಣಗಿಹೋಗಿರುವ ಗಾಯಗಳನ್ನು ಹಸಿ ಮಾಡುತ್ತದೆ.
ಕೊರೊನಾ ಕಾಲದಲ್ಲಿ ನಾವು ಕಳೆದುಕೊಂಡ ಬಂಧು-ಮಿತ್ರರ ಮುಖಗಳು, ಅವರ ಕುಟುಂಬದ ದುಃಖ ಎಲ್ಲವನ್ನು ನೆನಪಿಸಿ ಮನಸ್ಸನ್ನು ಭಾರವಾಗಿಸುತ್ತದೆ. ಸಿನೆಮಾಗಳ ಉದ್ದೇಶ ಮನರಂಜನೆ ಎಂಬ ವ್ಯಾಖ್ಯಾನವನ್ನು ಸುಳ್ಳು ಮಾಡುತ್ತದೆ. ಇದೇ ಈ ಸಿನೆಮಾದ ಶಕ್ತಿ ಮತ್ತು ಯಶಸ್ಸು.
ಸಾರ್ವಜನಿಕರ ಸ್ಮರಣ ಶಕ್ತಿಗೆ ಆಯಷ್ಯ ಕಡಿಮೆ. ಇತಿಹಾಸವನ್ನ ಮರೆಯಬಾರದು ಎಂದು ನೆನಪಿಸುವ ಚಿತ್ರ ಇದು. ಇದಕ್ಕಾಗಿಯೇ “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು.
ನಟನೆ, ನಿರ್ದೆಶನ, ಪೋಟೊಗ್ರಫಿ ಎಲ್ಲದರಲ್ಲಿಯೂ ಬೆಸ್ಟ್. ಮಹದೇವ ಹಡಪದ ಅವರು ಇಂತಹ ಪಾತ್ರವನ್ನು ಮಾಡಲೆಂದೇ ಹುಟ್ಟಿಬಂದಂತೆ ಕಾಣುತ್ತದೆ. ವೀರೇಶ್ ಗೊನ್ವಾರ್, ಸಂಧ್ಯ ಅರಕೆರೆ, ಜಹಂಗೀರ್ ಅವರೂ ಅಷ್ಟೆ, ತಮ್ಮ ಪಾತ್ರಗಳನ್ನು ಬದುಕಿದ್ದಾರೆ. ಉತ್ಸವ್ ಗೊನ್ವಾರ್ ದುಡ್ಡಿನ ಆಸೆ ಇಟ್ಟುಕೊಂಡು ಈ ಚಿತ್ರ ಮಾಡಿರಲಾರರು, ಇಂತಹದ್ದೊಂದು ಚಿತ್ರ ಮಾಡದೆ ಇದ್ದರೆ ನೆಮ್ಮದಿಯಿಂದ ಇರಲಾರೆ ಎಂದು ತಿಳಿದುಕೊಂಡು ಮಾಡಿರಬಹುದು. ಇಂತಹ ಯುವಪ್ರತಿಭೆಗಳನ್ನು ನಾವೆಲ್ಲ ಬೆಂಬಲಿಸಬೇಕು. ಇದಕ್ಕಾಗಿ ಹೋಗಿ ಸಿನೆಮಾ ನೋಡಬೇಕು.
ಈ ರೀತಿಯ ಸಿನೆಮಾಗಳನ್ನು ಮಲ್ಪಿಫ್ಲೆಕ್ಸ್ ಗಳ ಹಿತವಾದ ವಾತಾವರಣದಲ್ಲಿ ನೋಡುವುದೇ ಹಿಂಸೆ. ಎಲ್ಲಾದರೂ ಟೆಂಟ್ ಗಳಲ್ಲಿ ನೆಲದಲ್ಲಿ ಕೂತು ನೋಡಬೇಕು. ಕಣ್ಣೆದುರು ಸುಡುಬಿಸಿಲಲ್ಲಿ ಬಳಲಿ ಕುಂಟುತ್ತಾ ಏದುಸಿರುಬಿಡುತ್ತಾ ಅಪ್ಪ ಮತ್ತು ಮಗ ನಡೆಯುತ್ತಿದ್ದಾಗ ನಾವು ಕೂತ ಥಿಯೇಟರ್ ನ ಮೆತ್ತನೆಯ ಸೋಫಾ ಚುಚ್ಚತೊಡಗುತ್ತದೆ.
ನಮ್ಮೊಳಗಿನ ಮನುಷ್ಯನನ್ನು ಜಾಗೃತಗೊಳಿಸಿದ, ಸಿಟ್ಟು ಬರಿಸಿದ, ಕಣ್ಣೀರು ಹಾಕುವಂತೆ ಮಾಡಿದ, ಇತಿಹಾಸವನ್ನು ಮರೆಯಬಾರದು ಎಂದು ಬುದ್ದಿಹೇಳಿದ ಚಿತ್ರಕ್ಕೆ, ಚಿತ್ರದ ತಂಡಕ್ಕೆ ಶರಣು.
ಇದು ನಾನು ನೋಡಿದ ಕೊರೊನಾ ಕಾಲದ ಅತ್ಯುತ್ತಮ ಸಿನೆಮಾ. ಕೆಟ್ಟ ದಿನಗಳ ಒಂದು ಒಳ್ಳೆಯ ಚಿತ್ರ. ಬಹಳ ದಿನ ಥಿಯೇಟರಿನಲ್ಲಿ ಇರಲಾರದು, ತಕ್ಷಣ ಹೋಗಿ ನೋಡಿ. ಕೆಲಸಕ್ಕೆ ರಜೆ ಹಾಕಿಯಾದರೂ ನೋಡಿ.
- ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು




