ಸಂವಿಧಾನದ ಮಹತ್ವ ಜನ ಸಾಮಾನ್ಯರಿಗೆ ಸಾರಬೇಕು

2 years ago

ಬಳ್ಳಾರಿ: ಜಿಲ್ಲೆಯಲ್ಲಿ ನಡೆಯುತ್ತಿರುವ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮದ ಅಂಗವಾಗಿ ಜಾಥಾವು ಸಂಡೂರು ತಾಲ್ಲೂಕಿನ ಎಚ್.ಕೆ.ಹಳ್ಳಿ, ಕಾಳಿಂಗೇರಿ, ಅಗ್ರಹಾರ ಹಾಗೂ ಸೋವೇನಹಳ್ಳಿ  ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲ್ಲಿ ಸಂಚರಿಸಿ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು  ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಪ್ರತಿ ಗ್ರಾಮಗಳಲ್ಲಿ ಜಾಥಾವನ್ನು ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳು, ಕೋಲಾಟದ ಮೂಲಕ ನೃತ್ಯ, ಹಲಗೆ ಮತ್ತು ಡೊಳ್ಳು ಕಲಾವಿದರು, ತಾಷಾ ರಾಂಡೋಲ್, ಕಂಸಾಳೆ ಹಾಗೂ ನಂದಿ ಕೋಲು ಕುಣಿತದ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.

ಪ್ರಥಮವಾಗಿ ಜಾಥಾವನ್ನು ಎಚ್.ಕೆ.ಹಳ್ಳಿ (ಹಿರೇಕೆರೆಯಾಗಿನಹಳ್ಳಿ) ಗಾಮದಲ್ಲಿ ವಿವಿಧ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿವಿಧ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

ಜಾಥಾದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಟ್ಟೆಪ್ಪ.ಪಿ.ಎಸ್ ಅವರು ಭಾಗವಹಿಸಿ ಮಾತನಾಡಿ, ಸಂವಿಧಾನದ ರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂವಿಧಾನದ ಬಗ್ಗೆ ಎಲ್ಲರಲ್ಲೂ ತಿಳುವಳಿಕೆ ಮೂಡಿಸಿ, ಸಂವಿಧಾನದ ಮಹತ್ವವನ್ನು ಜನ ಸಾಮಾನ್ಯರಿಗೆ ಸಾರಬೇಕು ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಕರಿಬಸಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವನ್ನು ನೀಡಿದುದಲ್ಲದೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದರು ಎಂದರು.

ಕಾಳಿಂಗೇರಿ ಗ್ರಾಮದಲ್ಲಿ ಮಕ್ಕಳ ಕೋಲಾಟ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕಿರು ನಾಟಕದ ಮೂಲಕ ಅದ್ದೂರಿಯಾದ ಸ್ವಾಗತ ದೊರೆಯಿತು.

ನಂತರ ಅಗ್ರಹಾರ ಗ್ರಾಮದಲ್ಲಿ ಶಿಕ್ಷಕರಾದ ನಾಗರಾಜ ಅವರು ಮಾತನಾಡಿ, ನಾವೆಲ್ಲರೂ ಸಂವಿಧಾನದ ಮೂಲಭೂತ ಕಾನೂನುಗಳನ್ನು, ಮೂಲಭೂತ ಹಕ್ಕುಗಳನ್ನು ಹಾಗೂ ಮೂಲಭೂತ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ಸರ್ಕಾರ ನಮಗೆ ಮೂಲಭೂತ ಸೌಲಭ್ಯಗಳನ್ನು ಎನ್ನುವುದರ ಜೊತೆಗೆ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದರು.
ಸೋವೇನಹಳ್ಳಿ ಗ್ರಾಮದಲ್ಲಿ ಬೈಕ್ ರ್ಯಾಲಿ ನಡೆಸಿದ್ದು ವಿಶೇಷವಾಗಿತ್ತು.

ಎಲ್‍ಇಡಿ ಪರದೆಯ ಮೂಲಕ ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.

ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply