ಪರಿಹಾರ ಕೊಡದ ಕಂಪನಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ 

2 years ago

ಹೆಚ್.ಡಿ.ಎಫ್.ಸಿ ಏರ್ಗೋ ಕಂಪನಿಗೆ ನಿರ್ದೇಶನ

ಧಾರವಾಡ: ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನ ಸಂತೋಷ ಅನ್ನುವವರು ತನ್ನ ದ್ವಿ-ಚಕ್ರ ವಾಹನಕ್ಕೆ  ಹೆಚ್.ಡಿ.ಎಫ್.ಸಿ ಏರ್ಗೋ ಕಂಪನಿಯಿಂದ  ವಿಮೆ ಮಾಡಿಸಿದ್ದರು.  ಪ್ರಿಮಿಯಮ್ನಲ್ಲಿ ರೂ.375/- ಹೆಚ್ಚುವರಿಯಾಗಿ ಕೊಟ್ಟು ವಾಹನದ ಮಾಲೀಕ/ಚಾಲಕನಿಗೆ 15 ಲಕ್ಷ ರೂಪಾಯಿ ಮೊತ್ತದ ಪಿ.ಎ.ಕವರೇಜ್ ವಿಮೆಯನ್ನು ಮಾಡಿಸಿದ್ದರು. ದಿ:20/08/2021 ರಂದು ವಿಮಾದಾರ ಸಂತೋಷ ತನ್ನ ದ್ವಿ-ಚಕ್ರ ವಾಹನದಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ ಅವರ ತಲೆ ಮತ್ತು ದೇಹದ ಇತರೆ ಭಾಗಕ್ಕೆ ತೀರ್ವ ಗಾಯಗಳಾಗಿದ್ದವು. ದಾವಣರೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿ:24/08/2021 ರಂದು ವಿಮಾದಾರ ಸಂತೋಷ ಮರಣ ಹೊಂದಿದ್ದರು.

ವಿಮಾ ಪಾಲಿಸಿ ನಿಯಮದಂತೆ ಮೃತನ ವಾರಸುದಾರರಿಗೆ 15 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಮೃತ ಸಂತೋಷನ ಹೆಂಡತಿ ಮತ್ತು ಕುಟುಂಬದವರು ವಿಮಾ ಕಂಪನಿಗೆ ಕ್ಲೇಮು ಸಲ್ಲಿಸಿದರು. ಸಾಕಷ್ಟು ಕಾಲಾವಕಾಶ ಕಳೆದರೂ ವಿಮಾ ಕಂಪನಿಯವರು ತಮಗೆ ಪರಿಹಾರದ ಹಣ ಕೊಡದೆ ತೊಂದರೆ ಮಾಡುತ್ತಿದ್ದಾರೆ ಮತ್ತು ಅಂತಹ ಅವರ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಹೆಚ್.ಡಿ.ಎಫ್.ಸಿ ಏರ್ಗೋ ಕಂಪನಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಪರಿಹಾರಕೊಡಿಸುವಂತೆ ಕೋರಿ ಮೃತರ ಹೆಂಡತಿ ರಂಜಿತಾ ಮತ್ತು ಕುಟುಂಬದ ಇತರೆ ಸದಸ್ಯರು ದಿ:25/04/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಸದಸ್ಯರು, ಮೃತ ಸಂತೋಷ ಪಡೆದುಕೊಂಡಂತಹ ವಿಮಾ ಪಾಲಿಸಿ ಅಪಘಾತವಾದ ಕಾಲಕ್ಕೆ ಚಾಲ್ತಿಯಿದೆ. ವಿಮಾ ನಿಯಮದಂತೆ ಪಾಲಿಸಿದಾರ ಅಪಘಾತಕ್ಕೆಈಡಾಗಿ ಮೃತನಾದಲ್ಲಿ ಆತನ ವಾರಸುದಾರರು 15 ಲಕ್ಷ ರೂಪಾಯಿ ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಈ ಬಗ್ಗೆ ಮೃತನ ಹೆಂಡತಿ ಮತ್ತುಇತರೆ ವಾರಸುದಾರರು ಕ್ಲೇಮ್ ಅರ್ಜಿ ಸಲ್ಲಿಸಿದರೂ ಅದನ್ನು ಎದುರುದಾರರು ನಿರ್ಣಯಿಸದೆ ಮತ್ತು ದೂರುದಾರರಿಗೆ ವಿಮಾ ಪರಿಹಾರ ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ಪ್ರಕಟಿಸಿದೆ. 

ವಿಮಾ ಪಾಲಿಸಿಯ ಷರತ್ತಿನಂತೆ ಎದುರುದಾರ ಹೆಚ್.ಡಿ.ಎಫ್.ಸಿ ಏರ್ಗೋ ಕಂಪನಿಯವರು ತೀರ್ಪು ನೀಡದ ಒಂದು ತಿಂಗಳ ಒಳಗಾಗಿ 15 ಲಕ್ಷ ರೂಪಾಯಿ ಪರಿಹಾರ ಮತ್ತು ದಿ:31/03/2023 ರಿಂದ ಶೇ.8% ರಂತೆ ಬಡ್ಡಿ ಲೆಕ್ಕಾ ಹಾಕಿ ದೂರುದಾರರಿಗೆ ಕೊಡುವಂತೆ ಆಯೋಗ ಆದೇಶಿಸಿದೆ. ಆ ರೀತಿ ಬಂದ ಹಣದಲ್ಲಿ ಮೃತನ ತಂದೆಗೆ 2 ಲಕ್ಷರೂಪಾಯಿ ಮತ್ತು ಬಡ್ಡಿ ಸಮೇತ ಉಳಿದ ಹಣ ಮೃತನ ಹೆಂಡತಿಗೆ ಹೋಗಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50 ಸಾವಿರ ರೂಪಾಯಿ ಪರಿಹಾರ ಮತ್ತು 10 ಸಾವಿರ ರೂಪಾಯಿ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗ ವಿಮಾ ಕಂಪನಿಗೆ ನಿರ್ದೇಶಿಸಿದೆ.

Leave a Reply