ಕಾಂಗ್ರೆಸ್ ಪಕ್ಷದ ಬದ್ಧತೆಯ ನಾಯಕ ಕೆ.ಎಂ.ನಾಗರಾಜ್

1 year ago

ಕೆ.ಎಮ್.ನಾಗರಾಜ್ ಕೇವಲ ಒಬ್ಬ ವ್ಯಕ್ತಿಯಲ್ಲ. ಒಂದು ರೀತಿಯ ವಿಶ್ವವಿದ್ಯಾನಿಲಯವಿದ್ದಂತೆ. ಪಕ್ಷದ ಸಂಘಟನೆ, ಕಾರ್ಯಕ್ರಮದ ಆಯೋಜನೆ, ಶಿಸ್ತುಬದ್ಧವಾದಂತಹ ನಡವಳಿಕೆ ಇವುಗಳು ಕೆ,ಎಂ,ನಾಗರಾಜ್ ರವರಿಂದ ಕಲಿಯಬಹುದಾದ ಪಾಠವಾಗಿದೆ.

ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಬದ್ಧತೆಯ ನಾಯಕರಾಗಿ ತಮ್ಮ ಮನೆಗೆ ಬಂದವರಿಗೆ ತಮ್ಮ ಸಂಪರ್ಕಕ್ಕೆ ಬಂದವರಿಗೆ ಕಾಂಗ್ರೆಸ್ ವಿಚಾರವನ್ನು ತಮ್ಮ ಅಪಾರವಾದ ಅನುಭವ, ಅಧ್ಯಯನದ ಮೂಲಕ ಗಳಿಸಿರುವ ಜ್ಞಾನವನ್ನು ಹಂಚಿಕೊಳ್ಳುತ್ತಾ ಸಾಮಾನ್ಯ ಕಾರ್ಯಕರ್ತರಲ್ಲೂ ಕಾಂಗ್ರೆಸ್ ವಿಚಾರಧಾರೆ ತಿಳಿಸಿ ಅವರಲ್ಲೂ ಸಹ ಪಕ್ಷದ ವಿಚಾರದಲ್ಲಿ ಆಸಕ್ತಿಯನ್ನು ಮೂಡಿಸುತ್ತಾರೆ.

ವಿದ್ಯಾರ್ಥಿ ನಾಯಕರಾಗಿ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಅದೆಷ್ಟು ಪಕ್ಷದ ಕಾರ್ಯಕ್ರಮಗಳನ್ನ ಸಂಘಟಿಸಿದ್ದರು ಲೆಕ್ಕವೇ ಇಲ್ಲ ಹಂತಹಂತವಾಗಿ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನ ನಿರ್ವಹಿಸಿ, ಪ್ರತಿಯೊಂದು ಸಂದರ್ಭದಲ್ಲಿ ತಾವು ವಹಿಸಿಕೊಂಡಂತಹ ಹುದ್ದೆಗಳ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿ ಅಥವಾ ಅಧಿಕಾರದಲ್ಲಿ ಇಲ್ಲದೆ ಇರಲಿ, ಎಲ್ಲ ಸಂದರ್ಭದಲ್ಲಿ ಸಹ ಪಕ್ಷದ ವಿಚಾರದಲ್ಲಿ ಅಷ್ಟೇ ನಿಷ್ಠೆಯಿಂದ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಅತಿ ಹೆಚ್ಚು ಪ್ರೀತಿಸುವ ಮತ್ತು ಪಕ್ಷದ ವಿಚಾರಗಳಿಗಾಗಿ ದುಡಿಯುವಂತಹ ಕೆಲವೇ ಕೆಲವು ನಾಯಕರುಗಳಲ್ಲಿ ಇವರು ಮುಂಚೂಣಿಯಲ್ಲಿ ಇರುತ್ತಾರೆ.

ಅನೇಕ ರಾಜ್ಯ ಮಟ್ಟದ ನಾಯಕರನ್ನು ಬೆಳೆಸಿರುವ ಇವರು ಎಂದಿಗೂ ಸಹ ತಾವು ಅಧಿಕಾರಕ್ಕೆ ಬರಬೇಕೆಂದು ಹಂಬಲಿಸಲಿಲ್ಲ. ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನವನ್ನ ಬಿಟ್ಟು ನಡೆದುಕೊಂಡಿಲ್ಲ. ಪಕ್ಷ ನನಗೇನು ಮಾಡಿದೆ ಎನ್ನುವುದಕ್ಕಿಂತ ಪಕ್ಷಕ್ಕೆ ನಾನೇನು ಮಾಡಿದ್ದೇನೆ ಎಂಬಂತಹ ಪ್ರಶ್ನೆಯನ್ನು ಯಾರಾದರೂ ಕೇಳಿಕೊಳ್ಳುವ ಹಾಗಿದ್ದರೆ ಅದು ಕೆ.ಎಂ.ನಾಗರಾಜ್ ರವರ ಬದುಕಿನ ರೀತಿಯಿಂದ ಅರಿತುಕೊಳ್ಳಬೇಕು. ಎಂದೂ ಸಹ ಪಕ್ಷ ನನಗೇನು ಮಾಡಿದೆ ಎಂದು ಚಿಂತಿಸಲೇ ಇಲ್ಲ. ತನಗೆ ಅಧಿಕಾರ ನೀಡಲಿಲ್ಲ ಎಂದು ಎಂದೂ ಸಹ ಪಕ್ಷದ ವಿರುದ್ಧ ಮುನಿಸಿಕೊಳ್ಳಲಿಲ್ಲ, ಎಲ್ಲವನ್ನು ಸಮಚಿತ್ತದಿಂದ ನಿರ್ವಹಿಸಿಕೊಂಡು ಬಂದಂತಹ ಇವರ ತಾಳ್ಮೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

ತಮ್ಮ ಮಾರ್ಗದರ್ಶನದಲ್ಲಿ ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಹಲವರು ಮಂತ್ರಿಗಳಾಗಿದ್ದಾರೆ, ಶಾಸಕರಾಗಿದ್ದಾರೆ, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಆದರೂ ಸಹ ತಮಗೆ ಅಧಿಕಾರ ಸಿಗಲಿಲ್ಲ ಎಂದು ಬೇಸರಿಸಿಕೊಂಡಿಲ್ಲ.

ಕಾರ್ಯಕ್ರಮವನ್ನು ಆಯೋಜಿಸುವ ರೀತಿ ಮತ್ತು ಆ ಕಾರ್ಯಕ್ರಮದಲ್ಲಿ ಯಾವ ರೀತಿ ವ್ಯವಸ್ಥೆಗಳಿರಬೇಕು ಎನ್ನುವುದನ್ನು ತಿಳಿಯಬೇಕಾದರೆ ಕೆ.ಎಂ.ನಾಗರಾಜ್ ರವರು ಆಯೋಜಿಸುವ ಕಾರ್ಯಕ್ರಮಗಳನ್ನ ಹತ್ತಿರದಿಂದ ಇದ್ದು ಗಮನಿಸಿದರೆ ದೊಡ್ಡ ಅನುಭವವಾಗುತ್ತದೆ.

ಕಾರ್ಯಕ್ರಮದ ದಿನ, ಆಹ್ವಾನ ಪತ್ರಿಕೆ, ವೇದಿಕೆ, ಅತಿಥಿಗಳು, ಮಾತನಾಡುವವರ ಸಮಯ, ಕಾರ್ಯಕ್ರಮಕ್ಕೆ ಬೇಕಾದಂತಹ ಸಾಮಗ್ರಿಗಳು, ಊಟದ ವ್ಯವಸ್ಥೆ ಸನ್ಮಾನಿತರಿಗೆ ನೀಡುವ ವಸ್ತು, ಎಲ್ಲದರ ಬಗ್ಗೆಯೂ ಪ್ರತಿ ಕ್ಷಣದಲ್ಲೂ ಗಮನಹರಿಸುತ್ತಾರೆ. ಎಲ್ಲಿಯೂ ಒಂದು ಸಣ್ಣ ಲೋಪವಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಎಲ್ಲದರಲ್ಲೂ ಅಚ್ಚುಕಟ್ಟು ಮತ್ತು ಶಿಸ್ತು ಪ್ರಮುಖವಾಗಿ ಕಾಣಬಹುದಾಗಿರುತ್ತದೆ.

ಧಾರ್ಮಿಕ ವಿಚಾರದಲ್ಲಿ ಅಪಾರವಾದಂತಹ ಆಸಕ್ತಿಯನ್ನು ಹೊಂದಿರುವ ಇವರು, ಅದೇ ರೀತಿಯಲ್ಲಿ ಹಲವಾರು ಮಹಾನ್ ಕೃತಿಗಳನ್ನು ಮತ್ತು ಗ್ರಂಥಗಳನ್ನು ಧಾರ್ಮಿಕತೆಯ ಸಂಬಂಧದಲ್ಲಿ ಅಧ್ಯಯನ ಮಾಡಿ ಅವುಗಳ ಬಗ್ಗೆ ಯಾರೊಂದಿಗೆ ಬೇಕಾದರೂ ಚರ್ಚಿಸುವಷ್ಟು ಜ್ಞಾನವನ್ನು ಹೊಂದಿರುತ್ತಾರೆ. ಇವರು ಅಭಿವೃದ್ಧಿಪಡಿಸಿರುವ ಮತ್ತು ಅಭಿವೃದ್ಧಿಪಡಿಸುತ್ತಿರುವ ದೇವಾಲಯಗಳ ಸಂಖ್ಯೆ ಲೆಕ್ಕವಿಲ್ಲ. ಧಾರ್ಮಿಕತೆಯ ಬಗ್ಗೆ ಹಿಂದು ಧರ್ಮದ ಬಗ್ಗೆ ಮಾತನಾಡುವಂತಹ ಅನೇಕ ಮಹಾನ್ ನಾಯಕರುಗಳು ಇವರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿರುವಂತಹ ಸೇವೆ ಮತ್ತು ಸಾಧನೆಯ ಹಾದಿಯಲ್ಲಿ ಪೈಪೋಟಿ ನೀಡಲು ಸಾಧ್ಯವೇ ಇಲ್ಲ. ಅಷ್ಟೊಂದು ಮಟ್ಟದಲ್ಲಿ ಇವರು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಮತ್ತು ದುಡಿದಿದ್ದಾರೆ.

ಇವರು ಹಲವಾರು ಸಾಮಾಜಿಕ ಸಂಸ್ಥೆಗಳಲ್ಲೂ ಪದಾಧಿಕಾರಿಯಾಗಿ ಅಧ್ಯಕ್ಷರಾಗಿ ಜವಾಬ್ದಾರಿಯನ್ನ ಈಗಲೂ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ಮಂದಿಗೆ ಉಚಿತವಾದಂತಹ ಪಾಠದ ತರಗತಿಗಳನ್ನ ನಡೆಸಿದ ಅಣ್ಣಯ್ಯನವರ ಯುವಕ ಸಂಘದ ಅಧ್ಯಕ್ಷರಾಗಿ ಈಗಲೂ ದುಡಿಯುತ್ತಿದ್ದಾರೆ. ಎಚ್ ಬಿ ಸಮಾಜ ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಕಮ್ಯುನಿಟಿ ಸೆಂಟರ್ ಮೂಲಕ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಗುಡಮಟ್ಟದ ಶಿಕ್ಷಣವನ್ನ ಅಲ್ಲಿ ನೀಡುತ್ತಿದ್ದಾರೆ. ಕಮಲ ನೆಹರು ಪಾಠಶಾಲೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಇವರು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಪಟ್ಟಿಯೇ ದೊಡ್ಡದಾಗಿದೆ. ಸಹಕಾರಿ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ನಗರದ ಅತ್ಯಂತ ಹಿರಿಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಅಶೋಕನಗರ ಕೋಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕನಕನಪಾಳ್ಯದಲ್ಲಿ ಇಂದಿಗೂ ಸಹ ಕೆ.ಎಮ್.ನಾಗರಾಜರವರ ಮನೆ ಯಾವುದೆಂದು ಯಾರನ್ನು ಯಾರೂ ಕೇಳಬೇಕಿಲ್ಲ, ಯಾರ ಮನೆಯ ಮುಂದೆ ಸದಾ ಜನ ಇರುತ್ತಾರೋ ಅದೇ ಇವರ ಮನೆಯಾಗಿರುತ್ತದೆ. ಸದಾ ಕಾಲ ಊರಿನ ಹಲವಾರು ಮಂದಿ ಇವರೊಂದಿಗೆ ಇರುತ್ತಾರೆ, ಇವರು ತೋರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ.

ಒಟ್ಟಾರೆಯಾಗಿ ಒಬ್ಬ ವ್ಯಕ್ತಿ ರಾಜಕೀಯ, ಧಾರ್ಮಿಕತೆ, ಶಿಕ್ಷಣ ಸಹಕಾರಿ ಸಂಘ ಮತ್ತು ಸಾಮಾಜಿಕ ಚಟುವಟಿಕೆ ಹೀಗೆ ಎಲ್ಲಾ ರಂಗದಲ್ಲೂ ಸಕ್ರಿಯವಾಗಿ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಮತ್ತು ಬದ್ಧತೆಯಿಂದ ದುಡಿಯಬಹುದು ಎನ್ನುವುದಕ್ಕೆ ಕೆ ಎಮ್ ನಾಗರಾಜ ಅವರಿಗಿಂತ ಉದಾಹರಣೆ ಬೇಕಿಲ್ಲ.

ವಿಶೇಷವಾಗಿ ಕನಕನಪಾಳ್ಯದಲ್ಲಿ ನಡೆಯುವಂತಹ ಊರ ಹಬ್ಬ ಬೆಂಗಳೂರು ನಗರದಲ್ಲಿ ಮೈಸೂರಿನ ದಸರಾವನ್ನ ನೆನಪಿಗೆ ತರಿಸುತ್ತದೆ. ಇವರ ನೇತೃತ್ವದಲ್ಲಿ ನಡೆಯುವಂತಹ ಊರ ಹಬ್ಬ ಒಂದು ದೊಡ್ಡ ಸಂಭ್ರಮದ ಕಾರ್ಯಕ್ರಮವಾಗಿರುತ್ತದೆ. ಇಲ್ಲಿ ಧಾರ್ಮಿಕತೆ ಇರುತ್ತದೆ, ಜನಪದ ಮೇಳಗಳಿರುತ್ತದೆ, ಅಚ್ಚುಕಟ್ಟಾದ ಭೋಜನವೂ ಇರುತ್ತದೆ, ಇದರ ಸಂಘಟನೆಯನ್ನು ಗಮನಿಸಿದಾಗ ಅಚ್ಚರಿಯಾಗುತ್ತದೆ.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿ ಅರ್ಚಕರು ಮತ್ತು ಅವರ ಕುಟುಂಬದವರಿಗೆ ಹಲವಾರು ಸೌಲಭ್ಯಗಳು ಇತ್ತೀಚಿನ ದಿನಗಳಲ್ಲಿ ಸಚಿವರಾದ ರಾಮಲಿಂಗಾರೆಡ್ಡಿರವರ ನೇತೃತ್ವದಲ್ಲಿ ದೊರಕುತ್ತಿರುವುದು ಮತ್ತು ದೇವಾಲಯಗಳಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳಿಗೂ ಸಹ ಕೆ ಎಮ್ ನಾಗರಾಜ್ ರವರ ಮಾರ್ಗದರ್ಶನ ಪ್ರಮುಖವಾಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply