ಪ್ರಭಾವಿಗಳಾಗಿದ್ದ ಮಾಜಿ ಮುಖ್ಯಮಂತ್ರಿಗಳು

3 years ago

ಕರ್ನಾಟಕ ರಾಜ್ಯದಲ್ಲಿ ಇಲ್ಲಿಯ ತನಕ ಅನೇಕರು ಮುಖ್ಯಮಂತ್ರಿಗಳಾಗಿ ಕೆಲವರು ಕಾಲವಾಗಿದ್ದಾರೆ. ಕೆಲವರು ಮಾಜಿಗಳಾಗಿದ್ದಾರೆ. ಇವರುಗಳ ಪೈಕಿ ಕೆಲವೇ ಕೆಲವು ಮುಖ್ಯಮಂತ್ರಿಗಳು ಮಾತ್ರ ತಮ್ಮದೇ ಆದಂತಹ ವ್ಯಕ್ತಿತ್ವ ಮತ್ತು ಪ್ರಭಾವವನ್ನು ಹೊಂದಿ ಜನಾಕರ್ಷಣೆಯ ನಾಯಕರಾಗಿ ಚುನಾವಣೆಗಳ ಮೇಲೆ ಪ್ರಭಾವ ಬೀರಬಲ್ಲಂತಹ ಶಕ್ತಿಗಳಾಗಿದ್ದರು.

1947ರಲ್ಲಿ ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿಯಾಗಿದ್ದರು. ಆಗ ದೇಶದಲ್ಲಿ ನೆಹರುರವರ ಪ್ರಭಾವದ ಮುಂದೆ ರೆಡ್ಡಿಯವರ ವೈಯಕ್ತಿಕ ವರ್ಚಸ್ಸು ಮತ್ತು ಪ್ರಭಾವ ರಾಜ್ಯದಲ್ಲಿ ಬೀರಲು ಸಾಧ್ಯವಿರಲಿಲ್ಲ.

ತದನಂತರ ಕೆಂಗ‌ಲ್ ಹನುಮಂತಯ್ಯನವರು ರಾಜ್ಯದಲ್ಲಿ ಅತ್ಯಂತ ಪ್ರಭಾವಿಯುತ ನಾಯಕರಾಗಿ ಹಲವಾರು ಸಂದರ್ಭದಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕೇಂದ್ರ ನಾಯಕತ್ವ ವಿರುದ್ಧ ತಮ್ಮಅಭಿಪ್ರಾಯ ಸೂಚಿಸಬಲ್ಲಂತಹ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದರು. ಆದರೂ ಸಹ ಅವರು ನೆಹರುರವರ ಪ್ರಭಾವದ ಮುಂದೆ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದಂತಹ ತಂಡವನ್ನು ರಚಿಸಿಕೊಂಡು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ನಿಜಲಿಂಗಪ್ಪನವರಿಗೆ ಕೇಂದ್ರ ನಾಯಕರುಗಳಾದ ನೆಹರು ಮತ್ತು ಇಂದಿರಾಗಾಂಧಿಯವರ ಆತ್ಮೀಯತೆ ಇದ್ದು, ರಾಜ್ಯದಲ್ಲಿ ಅತಿಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿದ್ದರೂ ಸಹ ಚುನಾವಣೆಗಳಲ್ಲಿ ತಮ್ಮ ಹೆಸರಿನ ಮೇಲೆ ಮತಗಳನ್ನು ಕೇಳಿ ಪಡೆದುಕೊಳ್ಳುವ ಅಥವಾ ತಮಗಿಷ್ಟ ಬಂದ ಅಭ್ಯರ್ಥಿಗಳನ್ನು ಶಾಸನ ಸಭೆಗೆ, ಸಂಪುಟಕ್ಕೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಸಂಪೂರ್ಣವಾಗಿ ಇರಲಿಲ್ಲ.

ಕರ್ನಾಟಕದಲ್ಲಿ ಪ್ರಭಾವೀಯುತವಾದ, ಪ್ರಾದೇಶಿಕವಾದ ನಾಯಕತ್ವ ರಾಷ್ಟ್ರೀಯ ಪಕ್ಷದಲ್ಲಿ ಗಟ್ಟಿಯಾಗಿ ಕಂಡದ್ದು ದೇವರಾಜ್ ಅರಸು ಅವರ ಮೂಲಕ. ಅರಸು ಅವರ ಹೆಸರಿನ ಮೇಲೆ ಚುನಾವಣೆಗಳನ್ನು ಗೆಲ್ಲಿಸುವಂತಹ ಶಕ್ತಿಯಿತ್ತು. ಹಿಂದುಳಿದ ವರ್ಗದ ಸಮಾಜದ ದೊಡ್ಡ ನಾಯಕರೆಂಬ ಮನ್ನಣೆಯೂ ಇವರಿಗಿತ್ತು. ಶಾಸನಸಭೆಗೆ ಸಣ್ಣಪುಟ್ಟ ಸಮಾಜದ ಜನರನ್ನು ಆರಿಸಿ ಬರುವಂತೆ ಅವಕಾಶಗಳನ್ನು ಕಲ್ಪಿಸಿಕೊಟ್ಟವರು ಇವರು. 20 ಅಂಶದ ಕಾರ್ಯಕ್ರಮಗಳ ಪೈಕಿ ವಿಶೇಷವಾಗಿ ‘ಉಳುವವನಿಗೆ ಭೂಮಿ’ ಎಂಬ ಯೋಜನೆಯ ಮೂಲಕ ರಾಜ್ಯದಲ್ಲಿ ಧ್ವನಿಯಿಲ್ಲದ ಮತ್ತು ಶೋಷಿತ ವರ್ಗದ ಜನರ ಹೃದಯದಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡರು. ಕೇಂದ್ರದ ನಾಯಕತ್ವದ ವಿರುದ್ಧ ಅದರಲ್ಲೂ ಇಂದಿರಾಗಾಂಧಿರವರ ವಿರುದ್ಧ ಬಂಡಾಯವೆದ್ದು ರಾಜಕಾರಣವನ್ನು ಮಾಡಿದ ಗಟ್ಟಿಯಾದ ವ್ಯಕ್ತಿತ್ವ ಇವರದು.

ತದನಂತರ ರಾಮಕೃಷ್ಣ ಹೆಗಡೆರವರು ರಾಷ್ಟ್ರೀಯ ಪಕ್ಷದ ಮೂಲಕ ಅಧಿಕಾರದಲ್ಲಿದ್ದರೂ ತಮ್ಮದೇ ಆದಂತಹ ವ್ಯಕ್ತಿತ್ವವನ್ನು ಮೂಡಿಸಿ ರಾಜ್ಯದ ರಾಜಕಾರಣದಲ್ಲಿ ಜನಮನದಲ್ಲಿ ಉಳಿದುಕೊಳ್ಳುವ ನಾಯಕರಾದರು. ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಅದರಲ್ಲೂ ವಿಶೇಷವಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವುದರ ಮೂಲಕ ಹೊಸ ಇತಿಹಾಸವನ್ನು ಬರೆದರು. ಇವರಿಗೂ ಸಹ ತಮ್ಮ ಹೆಸರಿನ ಮೇಲೆ ಮತವನ್ನು ತರುವ ಮತ್ತು ಮನಾವಣೆಗಳ ಮೇಲೆ ಪ್ರಭಾವವನ್ನು ಬೀರುವ ರಾಜಕೀಯ ಶಕ್ತಿ ಇತ್ತು.

ದೇವೇಗೌಡರೂ ಸಹ ರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಚುನಾವಣೆಗಳಲ್ಲಿ ನಿರ್ಣಾಯಕವಾದಂತಹ ಪಾತ್ರವನ್ನು ವಹಿಸಬಲ್ಲಂತಹ ಸ್ವಂತ ಶಕ್ತಿಯನ್ನು ಹೊಂದಿದ್ದರು. ಇವರ ವರ್ಚಸ್ಸಿನಿಂದ ಅನೇಕರನ್ನು ರಾಜಕೀಯ ರಂಗದಲ್ಲಿ ಬೆಳೆಸಬಲ್ಲಂತಹ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು. ಇಂದಿಗೂ ಸಹ ಇವರದೇ ಆದಂತಹ ಶಕ್ತಿ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ಇದ್ದೇ ಇದೆ.

ಬಂಗಾರಪ್ಪನವರು ಸಹ ತಮ್ಮದೇ ಆದಂತಹ ವೈಯಕ್ತಿಕ ನಾಯಕತ್ವವನ್ನು ರಾಜ್ಯದಲ್ಲಿ ಹೊಂದಿದ್ದರು. ಕೇಂದ್ರದ ವಿರುದ್ಧ ಬಂಡಾಯವೆದ್ದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಅಪಾಯವನ್ನು ಉಂಟು ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ.

ಇತ್ತೀಚಿನ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪನವರು ರಾಷ್ಟ್ರೀಯ ಪಕ್ಷದ ಮೂಲಕವೇ ಮುಖ್ಯಮಂತ್ರಿಯಾದರೂ ಸಹ ರಾಜ್ಯದಲ್ಲಿ ತಾವು ಪ್ರತಿನಿಧಿಸುವ ಪಕ್ಷ ತಮ್ಮ ಶಕ್ತಿಯನ್ನು ಕಡೆಗಣಿಸುವಂತಿಲ್ಲ ಎನ್ನುವುದನ್ನು ಮತ್ತೆ ಮತ್ತೆ ತೋರಿಸಿಕೊಟ್ಟಿದ್ದಾರೆ. ‘ನನಗೆ ನನ್ನದೇ ಆದಂತಹ ಮತ ಬ್ಯಾಂಕ್‌ ಇದೆ’ ಎಂಬುದನ್ನು ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ.

ಸಿದ್ಧರಾಮಯ್ಯನವರೂ ಸಹ ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷದ ಮೂಲಕ ಮುಖ್ಯಮಂತ್ರಿಯಾದರೂ ಪ್ರಾದೇಶಿಕವಾದ ನಾಯಕತ್ವವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದ ಸಮಾಜ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮಾಜದ ವಲಯದಲ್ಲಿ ಇವರ ಪ್ರಭಾವ ಅತೀ ದೊಡ್ಡದಾಗಿದೆ. ರಾಜ್ಯದಲ್ಲಿ ಇಂದಿಗೂ ಸಹ ಕೆಲವೇ ಕೆಲವು ಜನಪ್ರಿಯ ನಾಯಕರ ಪೈಕಿ ಇವರೂ ಒಬ್ಬರಾಗಿದ್ದಾರೆ.

ಕುಮಾರಸ್ವಾಮಿಯವರು ತಂದೆಯ ನೆರಳಿನಿಂದ ಹೊರಬಂದು ತಮ್ಮದೇ ಆದಂತಹ ಪ್ರಭಾವವನ್ನು ಮಹಿಳೆಯರು ಮತ್ತು ಬಡವರ್ಗದ ಜನರಲ್ಲಿ ಹೊಂದಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಅನೇಕರು ಈ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದರೂ ತಾವು ಪ್ರತಿನಿಧಿಸುವ ಪಕ್ಷದ ಕೃಪೆಯಿಂದ ಅವಕಾಶಗಳನ್ನು ಪಡೆದು ಈ ಹುದ್ದೆಯನ್ನು ಕೇವಲ ಅಲಂಕಾರಿಕವಾಗಿ ನಿರ್ವಹಿಸಿ ನಿರ್ಗಮಿಸಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ವಂತ ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಹುಶಃ ಇದಕ್ಕೆ ಅವರಲ್ಲಿ ಧೈರ್ಯದ ಕೊರತೆ, ತಂತ್ರಗಾರಿಕೆ, ಮುಂತಾದವುಗಳ ಕಾರಣಗಳೂ ಇರಬಹುದು. ಜನರ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದವರು ಮಾತ್ರ ಜನಮನದಲ್ಲಿ ಉಳಿದಿರುತ್ತಾರೆ. ಸಾಂದರ್ಭಿಕವಾಗಿ ಯಾವುದ್ಯಾವುದೋ ಕಾರಣಕ್ಕೆ ಅವಕಾಶಗಳನ್ನು ಪಡೆದವರು ಪ್ರಭಾವಶಾಲಿಗಳಾಗುವುದಿಲ್ಲ ಎಂಬುದನ್ನೂ ಇಲ್ಲ ಗಮನಿಸಬಹುದಾಗಿದೆ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply