ಸಿನಿಮೋತ್ಸವದ ಅತ್ಯುತ್ತಮ ಚಲನಚಿತ್ರ ಬೊಂಷೋ ಸ್ವಿಜರ್ ಲ್ಯಾಂಡ್

2 years ago

ನಾ ಮೆಚ್ಚಿದ ಸಿನೆಮಾ

ಬೆಂಗಳೂರು ಅಂತರಾಷ್ಟ್ರೀಯ  ಚಲನಚಿತ್ರೋತ್ಸವದಲ್ಲಿ ನೋಡಿದ ಅತ್ಯುತ್ತಮ ಸಿನೆಮಾ “BONJOUR SWITZERLAND”. ಸ್ವಿಜರ್ ಲ್ಯಾಂಡ್ ದೇಶದ ಈ ಚಲನಚಿತ್ರವನ್ನು ನಿರ್ದೇಶಿಸಿದ್ದು PETER LUISI. ಆ ದೇಶದಲ್ಲಿ ಸ್ವಿಸ್, ಜರ್ಮನ್, ಪ್ರೆಂಚ್ ಹಾಗೂ ಇಟಾಲಿಯನ್ ಭಾಷೆ ಮಾತಾಡುವ ಜನರಿದ್ದಾರೆ. ಪ್ರೆಂಚ್ ಭಾಷಾಭಿಮಾನ ಅತಿಯಾಗಿರುವ ಉನ್ನತ ಅಧಿಕಾರಿಯೊಬ್ಬ ಆ ದೇಶದಲ್ಲಿ ಪ್ರೆಂಚ್ ಭಾಷೆಯಿಂದೇ ಅಧಿಕೃತವೆಂದು ಘೋಷಣೆ ಮಾಡಲು ತಂತ್ರ ರೂಪಿಸುತ್ತಾನೆ. ಭಾಷಾ ಆಯ್ಕೆಯ ಕುರಿತ ಮತದಾನದಲ್ಲಿ ಅಕ್ರಮ ಎಸಗಿ ಪ್ರೆಂಚ್ ಎಂಬುದು ಒಂದು ದೇಶ ಒಂದು ಭಾಷೆ ಎಂದಾಗುತ್ತದೆ.  ಈ ನಿರ್ಧಾರದ ವಿರುದ್ದ ಜರ್ಮನ್ ಭಾಷಿಕರು ಸಿಡಿದೇಳುತ್ತಾರೆ. ಮಿಲಿಟೆಂಟ್ ಗ್ರುಪ್ ಪ್ರಾದೇಶಿಕ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಆದರೆ ವಾಲ್ಟರ್ ಹಾಗೂ ಜೋನ್ಸ್ ಬೋರ್ನಾಂಡ್ ಎನ್ನುವ ಫೆಡರಲ್ ಪೊಲೀಸ್ ಅಧಿಕಾರಿ ಹಾಗೂ ಮಿಲಿಟೆಂಟ್ ಗ್ರುಪ್ ಸದಸ್ಯೆ ಸೇರಿ ಓಟ್ ಮ್ಯಾನುಪಲೇಟಿಂಗ್ ಹಗರಣವನ್ನು ಬಯಲಿಗೆಳೆದು ಸಂಭವನೀಯ ನಾಗರೀಕ ಯುದ್ದವನ್ನು ತಪ್ಪಿಸಿ ಭಾಷಾಂದತೆಯನ್ನು ಕೊನೆಗೊಳಿಸುತ್ತಾರೆ.

ನವೀರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಲೇ ಸಾಗುವ ಈ ಚಲನಚಿತ್ರವು ಆಳುವ ವರ್ಗಗಳ ಭಾಷಾಂಧತೆ ಹಾಗೂ ಜನರ ಪ್ರತಿರೋಧವನ್ನು ಅನಾವರಣಗೊಳಿಸುತ್ತದೆ. ಜನರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಹೇರಿಕೆ ಮಾಡಿ ದಮನಸುವ ಪ್ರಭುತ್ವ ಪ್ರಜೆಗಳ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನೆಮಾ ಮನಮುಟ್ಟುವಂತೆ ಹೇಳುವುದರಲ್ಲಿ ಯಶಸ್ವಿಯಾಗಿದೆ.

ಹಿಂದಿ ಭಾಷೆಯನ್ನು ಭಾರತದ ಎಲ್ಲಾ ರಾಜ್ಯಗಳ ಮೇಲೆ ಹೇರುವ ಪ್ರಯತ್ನವನ್ನು ಕೇಂದ್ರ ಸರಕಾರವು ಸ್ವಾತಂತ್ರ್ಯ ಬಂದಾಗಿನಿಂದಲೂ ಮಾಡುತ್ತಲೇ ಬಂದಿದೆ. ಬಿಜೆಪಿ ಸರಕಾರವಂತೂ ಹಿಂದೀ ಹೇರಿಕೆಯನ್ನು ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಲೇ ಇದೆ. ವಿಶ್ವಗುರುವಿನ ಸರ್ವಾಧಿಕಾರ ಹೀಗೆಯೇ ಮುಂದುವರೆದರೆ ಮುಂದೊಮ್ಮೆ ಭಾರತದಲ್ಲೂ ಒಂದು ದೇಶ ಒಂದು ಭಾಷೆ ಎಂದು ಘೋಷಿಸಿ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರವು ಭಾಷಾ ದಬ್ಬಾಳಿಕೆಯನ್ನು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ಅಂತಹ ಸಾಧ್ಯತೆಯ ವಿರುದ್ಧ ಬರಬಹುದಾದ ಪ್ರತಿರೋಧ ಹಾಗೂ ಪರಿಣಾಮಗಳನ್ನು ನೋಡಬೇಕೆಂದರೆ ಈ ಸಿನೆಮಾವನ್ನು ನೋಡಲೇಬೇಕಿದೆ.

BIFF ಚಲನಚಿತ್ರೋತ್ಸವದ ಪ್ರಾರಂಭದ ಪ್ರದರ್ಶನವಾಗಿ ಈ ಸಿನೆಮಾವನ್ನು ವಿಧಾನಸೌಧದಲ್ಲಿ ತೋರಿಸಲಾಗಿತ್ತು. ಅದರ ರಿಪೀಟ್ ಶೋಗಳು ಓರಿಯನ್ ಮಾಲ್ ನಲ್ಲಿದ್ದವು. ಭಾಷೆಯ ಅರಿವಿನ ಮಿತಿಯನ್ನೂ ಮೀರಿ ಈ ಚಲನಚಿತ್ರವು ನೋಡುಗರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಇಡೀ ಸಿನೆಮೋತ್ಸವದ ಹೈಲೈಟ್ ಮೂವಿ ಆಗಿದೆ.

– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply