ಬೆಂಗಳೂರು: ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಭರ್ಜರಿ ರಂಗು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿಗಳು ನಾಮಪತ್ರ ಸಲ್ಲಿಸುವ ಮೂಲಕ ಅಖಾಡಕ್ಕೆ ಧುಮುಕಿದ್ದಾರೆ
ಬಹುತೇಕ ಎಲ್ಲಾ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆಗೂ ಮುನ್ನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ,ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು. ನಂತರ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾಣಾಧಿಕಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಶಕ್ತಿ ಪ್ರದರ್ಶನ ನಡೆಸಿದರೆ,ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ರಾಹುಲ್ ಗಾಂಧಿ ರೋಡ್ ಶೋ ಮೂಲಕ ಹೊಸ ಹುರುಪು ತುಂಬಿದರು.
ಜೆಡಿಎಸ್ ಅಭ್ಯರ್ಥಿಗಳಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ- ಹೊಳೆನರಸೀಪುರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ-ರಾಮನಗರ, ಎ. ಮಂಜುನಾಥ್-ಮಾಗಡಿ, ಹೆಚ್.ಪಿ.ಸ್ವರೂಪ್- ಹಾಸನ, ನಾರಾಯಣಸ್ವಾಮಿ- ಗಾಂಧಿನಗರ, ಆರ್. ಪ್ರಕಾಶ್ ಗೋವಿಂದರಾಜನಗರ ಕ್ಷೇತ್ರದಲ್ಲಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ.ವಿಜಯೇಂದ್ರ, ಶಿಕಾರಿಪುರ, ಸಿ.ಟಿ.ರವಿ- ಚಿಕ್ಕಮಗಳೂರು, ಜ್ಯೋತಿ ಗಣೇಶ್ -ತುಮಕೂರು ನಗರ, ಎಸ್.ಪಿ.ಸ್ವಾಮಿ -ಮದ್ದೂರು, ಡಾ. ಇಂದ್ರೇಶ್ -ಮೇಲುಕೋಟೆ, ಸಚ್ಚಿದಾನಂದ -ಶ್ರೀರಂಗಪಟ್ಟಣ, ಎಸ್.ರಘು -ಸಿ.ವಿ.ರಾಮನ್ ನಗರ, ರವಿ ಸುಬ್ರಮಣ್ಯ- ಬಸವನಗುಡಿ, ಕುಮಾರ ಬಂಗಾರಪ್ಪ -ಸೊರಬ, ವರ್ತೂರ ಪ್ರಕಾಶ್ -ಕೋಲಾರ, ಹರೀಶ್ ಪೂಂಜಾ-ಬೆಳ್ತಂಗಡಿ, ರೂಪಾಲಿ ನಾಯಕ್- ಕಾರವಾರ, ಶಿವನಗೌಡ ನಾಯಕ್-ದೇವದುರ್ಗ, ಶಿವರಾಜ್ ಪಾಟೀಲ್-ರಾಯಚೂರು, ಮುನಿರತ್ನ ನಾಯ್ಡು- ಆರ್. ಆರ್.ನಗರ, ಎಸ್.ಮುನಿರಾಜು-ದಾಸರಹಳ್ಳಿ, ಎಂ.ಕೃಷ್ಣಪ್ಪ -ಬೆಂಗಳೂರು ದಕ್ಷಿಣ, ಅಶೋಕ್ ಜಯರಾಮ್-ಮಂಡ್ಯ, ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ
ಹೆಚ್.ಸಿ.ಬಾಲಕೃಷ್ಣ -ಮಾಗಡಿ, ಶರತ್ ಬಚ್ಚೇಗೌಡ- ಹೊಸಕೋಟೆ, ಇಕ್ಬಾಲ್ ಅಹ್ಮದ್ -ತುಮಕೂರು ನಗರ, ಟಿ.ಬಿ.ಯಚಂದ್ರ -ಶಿರಾ, ಕೆ.ಎನ್.ರಾಜಣ್ಣ -ಮಧುಗಿರಿ, ದಿನೇಶ್ ಗುಂಡೂರಾವ್ -ಗಾಂನಗರ, ರಾಜವೆಂಕಟಪ್ಪ ನಾಯಕ್-ಸುರಪುರ, ಎಚ್.ಕೆ.ಪಾಟೀಲ್ -ಗದಗ, ಇಕ್ಬಾಲ್ ಹುಸೇನ್- ರಾಮನಗರ, ಎಸ್.ಎಸ್.ಮಲ್ಲಿಕಾರ್ಜುನ- ದಾವಣಗೆರೆ ಉತ್ತರ, ಪ್ರಿಯಾಂಕ ಖರ್ಗೆ- ಚಿತ್ತಾಪುರ, ಎಚ್.ವೈ.ಮೇಟಿ- ಬಾಗಲಕೋಟೆ, ಈಶ್ವರ್ ಖಂಡ್ರೆ ಭಾಲ್ಕಿ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ವಿರೋಧ ಪಕ್ಷಗಳಾದ ಕಾಂಗ್ರೆಸ್ ಅಭ್ಯರ್ಥಿಗಳಿಂದ 31 ಹಾಗೂ ಜೆಡಿಎಸ್ ಅಭ್ಯರ್ಥಿಗಳಿಂದ 32 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಎಪಿಯಿಂದ 32 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಬಿಎಸ್‍ಪಿ 1, ಸಿಪಿಐ ಎಂನಿಂದ 2, ಸ್ವತಂತ್ರ ಅಭ್ಯರ್ಥಿಗಳಿಂದ 86 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಏ.20ರವರೆಗೂ ಅವಕಾಶವಿದೆ.
ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರಗಳ ಪರಿಶೀಲನೆಯು ಏ.21ರಂದು ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ.24ರ ಗಡುವು ನೀಡಲಾಗಿದೆ. ಮೇ.10ರಂದು ರಾಜ್ಯದ 224 ಕ್ಷೇತ್ರಗಳಲ್ಲೂ ಏಕಕಾಲಕ್ಕೆ ಮತದಾನ ನಡೆಯಲಿದೆ.




