ಕಲಬುರಗಿ: ಚಿತ್ತಾಪುರ ನನ್ನ ಕರ್ಮಭೂಮಿ. ನಿಮ್ಮೆಲ್ಲರ ಆಶೀರ್ವಾದದಿಂದ ಎರಡು ಸಲ ಶಾಸಕನಾಗಿ ಆಯ್ಕೆಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ನನಗೆ ಚಿತ್ತಾಪುರ ಶಾಸಕನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿತ್ತಾಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಖರ್ಗೆ ಸಾಹೇಬರು ಗುರುಮಠಕಲ್ ಕ್ಷೇತ್ರವನ್ನು ತಮ್ಮ ಕರ್ಮಭೂಮಿ ಎಂದು ತಿಳಿದು ಅಲ್ಲಿನ ಜನರ ಸೇವೆ ಮಾಡಿದಂತೆ ನಾನು ಕೂಡಾ ಚಿತ್ತಾಪುರ ಕ್ಷೇತ್ರವನ್ನು ಕರ್ಮಭೂಮಿ ಎಂದು ತಿಳಿದು ಜನರ ಸೇವೆ ಮಾಡುತ್ತಿದ್ದೇನೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮೆಲ್ಲರ ಆಶೀರ್ವಾದ,ಪ್ರೀತಿ ಹಾಗೂ ವಿಶ್ವಾಸದಿಂದ ಎಂದರು.
ಕಾಂಗ್ರೆಸ್ ಪಕ್ಷ ತಮ್ಮ ಮೇಲೆ ಅತ್ಯಂತ ವಿಶ್ವಾಸವಿಟ್ಟಿದೆ. ಅದಕ್ಕೆ ತಕ್ಕಂತೆ ನಾನೂ ಕೂಡಾ ಅಷ್ಟೆ ಪ್ರಾಮುಖ್ಯತೆಯಿಂದ ಕೆಲಸ ಮಾಡುತ್ತಿದ್ದೇನೆ. ನಾನು ಸರ್ಕಾರದಲ್ಲಿ ಸಚಿವನಾಗಿ ಹಾಗೂ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ಇರುವುದಕ್ಕೆ ನೀವೆ ಕಾರಣ. ನೀವು ನನಗೆ ಆಶೀರ್ವಾದ ಮಾಡದೇ ಇದ್ದಿದ್ದರೆ ನಾನು ಅಲ್ಲಿಯವರೆಗೂ ಹೋಗುತ್ತಿರಲಿಲ್ಲ ಎಂದರು.
ಬಿಜೆಪಿ ಈಗ ಮುಳುಗುತ್ತಿರುವ ಹಡಗು, ಪಕ್ಷ ನೆಲಕಚ್ಚುವ ಸೂಚನೆ ಇದ್ದಿದ್ದರಿಂದಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅಲ್ಲಿ ಡಿ.ಕೆ.ಶಿವಕುಮಾರ ಅವರ ವಿರುದ್ದ ಸಚಿವ ಅಶೋಕರನ್ನು ಹಾಕಿದ್ದರೆ, ವರುಣಾದಲ್ಲಿ ಸಿದ್ದರಾಮಯ್ಯನವರ ವಿರುದ್ದ ಸೋಮಣ್ಣನವರನ್ನು ನಿಲ್ಲಿಸಿದ್ದಾರೆ. ಆದರೆ, ಚಿತ್ತಾಪುರದಲ್ಲಿ ಹಾಕಿರುವ ಅಭ್ಯರ್ಥಿ ಎಂತವರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಬಿಜೆಪಿ ಸರ್ಕಾರ ಇದ್ದಾಗಲೇ ಇಲ್ಲಿನ ಬಿಜೆಪಿ ಅಭ್ಯರ್ಥಿ ವಿರುದ್ದ ಕೇಸುಗಳನ್ನು ದಾಖಲಿಸಿ ಜೊತೆಗೆ ಗಡಿಪಾರು ಆದೇಶ ಕೂಡಾ ಮಾಡಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿದೆಯಾ? ಖಂಡಿತ ಇಲ್ಲ. ಇಂತಹ ಅಭ್ಯರ್ಥಿಗೆ ಬೆಂಬಲ ನೀಡಲು ಮುಜಗರಕ್ಕೊಳಗಾಗುವ ಸ್ವಾಭಿಮಾನಿ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾದರೆ ಸ್ವಾಗತವಿದೆ ಎಂದು ಕರೆನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಗೆ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಕೊರತೆಯಿಲ್ಲ. ಯಾವ ಬೂತ್ ನಲ್ಲಿ ನಾವು ಸದೃಢವಾಗಿಲ್ಲ ಎನಿಸುತ್ತದೆಯೂ ಅಂತಹ ಬೂತ್ ಗಳನ್ನು ಗಟ್ಟಿಗೊಳಿಸಿದರೆ ಸಾಕು ನಮ್ಮ ಗೆಲವು ಸುಲಭವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿ ಮುಖಂಡರು ಹಾಗೂ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಸೂರ್ಯಕಾಂತ್ ಕಟ್ಟಿಮನಿ, ಕೋಲಿ ಸಮಾಜದ ಯುವ ಮುಖಂಡ ರಮೇಶ ತಿನಬೋ ಮತ್ತು ಸಾಬಣ್ಣ ಬೆನಳ್ಳಿ ಅವರು ಸೇರ್ಪಡೆಗೊಂಡರು. ಅವರಿಗೆ ಪ್ರಿಯಾಂಕ್ ಖರ್ಗೆ ಆತ್ಮೀಯ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಮಹೇಬೂಬ್ ಸಾಹೇಬ್, ಜಗನಗೌಡ ರಾಮತೀರ್ಥ, ವೀರಣಗೌಡ ಪರಸರೆಡ್ಡಿ, ಮಲ್ಲಿಕಾರ್ಜುನ ಕಾಳಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಶಿವರಾಜ ಪಾಟೀಲ, ಶ್ರೀನಿವಾಸ ಸಗರ, ಅಜೀಜಸೇಠ, ಜುಮ್ಮಣ್ಣ ಪೂಜಾರಿ, ಶೀಲಾಕಾಶಿ, ಶೇಖರ ಕಾಶಿ,ವಿನೋದ ಗುತ್ತೇದಾರ, ಮುಕ್ತಾರ ಪಟೇಲ, ಪ್ರಭುರಾಜ ಕಾಂತಾ ಸೇರಿದಂತೆ ಹಲವರು ಹಾಜರಿದ್ದರು.




