ಇನ್ನೊಬ್ಬ ಲಿಂಗಾಯತ ನಾಯಕ ಪಕ್ಷದೊಳಗೆ ಬೆಳೆಯುವುದು
ಅವರಿಗೆ ಬೇಕಾಗಿರಲಿಲ್ಲ

3 years ago

“ಶೆಟ್ಟರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ,ಜನ ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಸೋಲಿಸುತ್ತೇನೆ” ಎಂಬ ಬಿ.ಎಸ್.ಯಡಿಯೂರಪ್ಪನವರ ಆಕ್ರೋಶಭರಿತ ಮಾತುಗಳನ್ನು ಕೇಳಿ ಹದಿನೈದು ವರ್ಷಗಳ ಹಿಂದಿನ ಘಟನೆ ಮತ್ತು ನಂತರದ ಕೆಲವು ರಾಜಕೀಯ ಬೆಳವಣಿಗೆಗಳ ನೆನಪಾಯಿತು.

ಹೆಚ್.ಡಿ.ಕುಮಾರಸ್ವಾಮಿಯವರ ವಚನಭಂಗದ ಪ್ರಹಸನದ ಫಲವಾಗಿ 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ(2010) ಪಡೆದಿತ್ತು. ನಿಯೋಜಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆ ಸಮಾಲೋಚನೆಗಾಗಿ ದೆಹಲಿಗೆ ಬಂದಿದ್ದರು. “ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ, ಅವರು ವಿಧಾನಸಭಾ ಅಧ್ಯಕ್ಷರಾಗಲಿ” ಎಂದು ಯಡಿಯೂರಪ್ಪನವರು ಹಟ ಹಿಡಿದ್ದ ಕಾರಣ, ಈ ಬಗ್ಗೆ ಪ್ರತ್ಯೇಕ ಚರ್ಚೆಗಾಗಿ ನನಗೆ ನೆನಪಿದ್ದ ಹಾಗೆ ಇನ್ನೊಂದು ಉಪಸಭೆ 2008ರ ಮೇ 18-19ರಂದು ದೆಹಲಿಯಲ್ಲಿನ ಆಗಿನ ಸಚಿವ ಅನಂತಕುಮಾರ್ ಮನೆಯಲ್ಲಿ ಏರ್ಪಾಡಾಗಿತ್ತು.

ಆ ಸಭೆಯಲ್ಲಿ ಯಡಿಯೂರಪ್ಪ ಮತ್ತು ಶೆಟ್ಟರ್ ಜೊತೆಯಲ್ಲಿ ಅನಂತಕುಮಾರ್, ಅರುಣ್ ಜೇಟ್ಲಿ ಮತ್ತು ವಾಮನಾಚಾರ್ಯ ಭಾಗವಹಿಸಿದ್ದರು. ಯಡಿಯೂರಪ್ಪನವರು ಮತ್ತು ಶೆಟ್ಟರ್ ಇಬ್ಬರು ಪಟ್ಟು ಸಡಿಲಿಸದಿದ್ದ ಕಾರಣ ಇಬ್ಬರ ಮನವೊಲಿಕೆಗಾಗಿ ಉಳಿದವರೆಲ್ಲರೂ ನಿರಂತರ ಪ್ರಯತ್ನ ನಡೆಸುತ್ತಿದ್ದರು.

ನಾವೆಲ್ಲ ಪತ್ರಕರ್ತರು ಅನಂತಕುಮಾರ್ ಬಂಗಲೆ ಗೇಟ್ ಬಳಿ ಚರ್ಚೆಯ ಫಲಿತಾಂಶ ತಿಳಿಯಲು ಕಾಯುತ್ತಾ ಕೂತಿದ್ದೆವು. ರಾತ್ರಿ ಹತ್ತು ಗಂಟೆ ವರೆಗೂ ಏನೂ ಇತ್ಯರ್ಥವಾಗದೆ ಸಭೆ ಮುಂದುವರಿದ ಕಾರಣ ನಾವೆಲ್ಲ ಮನೆಗೆ ಹಿಂದಿರುಗಿದೆವು.
ಶೆಟ್ಟರ್ ನನಗೆ ಪರಿಚಿತರಾಗಿದ್ದ ಕಾರಣ ಸಭೆಯ ಫಲಿತಾಂಶ ತಿಳಿಸಲು ಅವರಿಗೊಂದು ಮೆಸೆಜ್ ಹಾಕಿದ್ದೆ. ತಡರಾತ್ರಿ ವರೆಗೆ ಯಾವ ಸಂದೇಶವೂ ಬಂದಿರಲಿಲ್ಲ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಶೆಟ್ಟರ್ ಪೋನ್ ಮಾಡಿ ‘’ ಎಲ್ಲರೂ ಬಹಳ ಒತ್ತಡ ಹೇರಿದರು, ಕೊನೆಗೆ ಸ್ಪೀಕರ್ ಆಗಲು ಒಪ್ಪಿ ಬಿಟ್ಟೆ’ ಎಂದು ಬೇಸರದಿಂದ ತಿಳಿಸಿ ಸಂಭಾಷಣೆ ಮುಂದುವರಿಸಲು ಇಚ್ಚಿಸದೆ ಪೋನ್ ಕಟ್ ಮಾಡಿದ್ದರು.ಒಂದು ವರ್ಷ ಕಾಲ ಸ್ಪೀಕರ್ ಆಗಿದ್ದ ಶೆಟ್ಟರ್ ಆ ಮೇಲೆ ಯಡಿಯೂರಪ್ಪನವರ ಸಂಪುಟದಲ್ಲಿ ಸಂಪುಟ ಸಚಿವರಾದರು.

( ಈ ಘಟನೆಗೆ ಪುರಾವೆ ಬಯಸುವವರು ಈಗ ರಾಜಕೀಯ ರಂಗದಿಂದ ತುಸು ಮರೆಗೆ ಸರಿದಿರುವ ವಾಮನಾಚಾರ್ಯ ಅವರನ್ನು ಸಂಪರ್ಕಿಸಬಹುದು. ಕರ್ನಾಟಕದಲ್ಲಿ ಬಿಜೆಪಿಯಿಂದ ಬ್ರಾಹ್ಮಣರು ಮುಖ್ಯಮಂತ್ರಿಯಾಗುವುದಿಲ್ಲ ಎಂದು 2015ರ ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಮೋದಿ-ಶಹಾ ಜೋಡಿ ಕೈಗೊಂಡಿದ್ದ ನಿರ್ಧಾರವನ್ನು ಉಲ್ಲೇಖಿಸಿ ಬರೆದಿದ್ದೆ. ಕೆಲಕಾಲ ನನ್ನ ಗೋಜಿಗೆ ಬರದೆ ಇದ್ದ ಚರಂಡಿತೀರ್ಥ ಇದಕ್ಕೆ ಪುರಾವೆ ಎಲ್ಲಿದೆ ಎಂದು ತನ್ನ ಗೋಡೆಯಲ್ಲಿ ವಾಂತಿ ಮಾಡಿಕೊಂಡಿದ್ದನಂತೆ. ಅವನೂ ವಾಮನಚಾರ್ಯರನ್ನು ಸಂಪರ್ಕಿಸಬಹುದು)

ನಿಜ ಸಂಗತಿ ಏನೆಂದರೆ ಯಡಿಯೂರಪ್ಪನವರು ಎಂದೂ ಶೆಟ್ಟರ್ ಅವರನ್ನು ತಮ್ಮ ಆತ್ಮೀಯ ವಲಯಕ್ಕೆ ಸೇರಿಸಿಕೊಂಡಿರಲಿಲ್ಲ, ಅವರನ್ನು ಇಷ್ಟಪಟ್ಟವರೂ ಅಲ್ಲ. ಇದಕ್ಕೆ ಮುಖ್ಯ ಕಾರಣ ಬಿಜೆಪಿಯಲ್ಲಿ ತಮಗೆ ಇದಿರಾಗಿ ಇನ್ನೊಬ್ಬ ಲಿಂಗಾಯತ ನಾಯಕರು ಬೆಳೆಯುವುದು ಅವರಿಗೆ ಬೇಕಾಗಿರಲಿಲ್ಲ. ಇದನ್ನು ಚೆನ್ನಾಗಿ ಅರಿತಿದ್ದ ಶೆಟ್ಟರ್ ತಮ್ಮ ರಾಜಕೀಯ ಹಿತಾಸಕ್ತಿಯ ರಕ್ಷಣೆಗಾಗಿ ಅನಂತಕುಮಾರ್ ಅವರಿಗೆ ಹೆಚ್ಚು ಹತ್ತಿರವಾಗಿದ್ದರು, ಯಡಿಯೂರಪ್ಪನವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅನಂತಕುಮಾರ್ ಅವರೂ ಶೆಟ್ಟರ್ ಅವರನ್ನು ಬಳಸಿಕೊಂಡಿದ್ದರು.

ಮೂರು ವರ್ಷಗಳ ಹಿಂದೆ ಪದತ್ಯಾಗ ಮಾಡಬೇಕಾದ ಸ್ಥಿತಿಯಲ್ಲಿಯೂ ಯಡಿಯೂರಪ್ಪನವರಿಗೆ ಶೆಟ್ಟರ್ ನೆನಪಾಗಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ತಮಗೆ ಇದಿರಾಗಿ ಇನ್ನೊಬ್ಬ ಲಿಂಗಾಯತ ನಾಯಕ ಪಕ್ಷದೊಳಗೆ ಬೆಳೆಯುವುದು ಅವರಿಗೆ ಬೇಕಾಗಿರಲಿಲ್ಲ.

ಭ್ರಷ್ಟಾಚಾರದ ಹಗರಣದಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದಾಗ ಲಿಂಗಾಯತರನ್ನೇ ಉತ್ತರಾಧಿಕಾರಿ ಮಾಡಬೇಕೆಂಬ ಒತ್ತಡ ಇದ್ದರೂ ಯಡಿಯೂರಪ್ಪನವರು ಮೊದಲು ಸೂಚಿಸಿದ್ದು ಒಕ್ಕಲಿಗ (ಅರೆಬಾಸೆ ಗೌಡ) ಸಮುದಾಯಕ್ಕೆ ಸೇರಿದ್ದ ಸದಾನಂದ ಗೌಡರನ್ನೇ ಹೊರತು ಶೆಟ್ಟರ್ ಅವರನ್ನಲ್ಲ. ಸದಾನಂದ ಗೌಡರೂ ಕೈಕೊಡುತ್ತಿದ್ದಾರೆ ಎಂದು ಅನಿಸಿದಾಗ ಎರಡನೇ ಆಯ್ಕೆಯಾಗಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಒಲ್ಲದ ಮನಸ್ಸಿನಿಂದಲೇ ಕೂರಿಸಿದ್ದರು.

ಇಂದು ಅನಂತಕುಮಾರ್ ಬದುಕಿದ್ದರೆ ಶೆಟ್ಟರ್ ಸ್ಥಿತಿ ಹೀಗಾಗುತ್ತಿರಲಿಲ್ಲ, ಶೆಟ್ಟರ್ ಸ್ಥಿತಿ ಮಾತ್ರ ಯಾಕೆ, ಬಿಜೆಪಿ ಸ್ಥಿತಿಯೂ ಹೀಗಾಗುತ್ತಿರಲಿಲ್ಲ.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply