ತೇಜಸ್ವಿ ಸೂರ್ಯ ನನ್ನ ಹೇಳಿಕೆಯನ್ನು ಹರಿಬಿಟ್ಟು ವಿಕೃತಿ ಮರೆದಿದ್ದಾರೆ: ಸಿದ್ದರಾಮಯ್ಯ

2 years ago

#TejaswiSurya #mislead #statement #forgotten #perversity #Siddaramaiah

ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು

ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ

ಕಿಂಚಿತ್ತು ಮಾನ – ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತೇಜಸ್ವಿ ಸೂರ್ಯ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು

ಬೆಂಗಳೂರು: ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ಹೇಳಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ ಎಂದಿದ್ದಾರೆ.

ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ ಅವರ ಕುಟುಂಬಕ್ಕೆ ನೀಡಿದ್ದಾರೆ ಎಂದಿದ್ದಾರೆ.

ಪತ್ರಕರ್ತರ ಮುಂದೆ ನಾನು ನೀಡಿರುವ ಹೇಳಿಕೆ ಪೂರ್ಣ ವಿಡಿಯೋವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ – ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದಿದ್ದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ ಎಂದಿದ್ದಾರೆ.

ಆದರೆ ಈ ಬಿಜೆಪಿ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನ ಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದಿದ್ದಾರೆ.

ಈ ವಿವಾದದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಯೋಧರೊಬ್ಬರು ತೀರಿಕೊಂಡು 12 ದಿವಸಗಳಾದರೂ ನಿಮ್ಮ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸದೇ ಇದ್ದಿದ್ದು ಸತ್ಯ. ನಾನು ನಿಮಗೆ ಪತ್ರ ಬರೆದು ಜ್ಞಾಪಿಸುವವರೆಗೂ ಪರಿಹಾರ ನೀಡಲು ತಾವುಗಳು ಮೀನ ಮೇಷ ಎಣಿಸಿದ್ದು ಕೂಡ ಸತ್ಯ. ಮಾಧ್ಯಮದ ಸ್ನೇಹಿತರು ತಮ್ಮನ್ನು ಪ್ರಶ್ನಿಸಿದಾಗ, ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದು ಸಹ ಸತ್ಯ ಎಂದಿದ್ದಾರೆ.

ನಂತರದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸಿ ಆಗ್ರಹ ಪಡಿಸುವವರೆಗೂ ತಾವು ಪರಿಹಾರ ಘೋಷಣೆ ಮಾಡದೇ ಇದ್ದಿದ್ದು ಕೂಡ ಸತ್ಯ . ಎರಡನೇ ಬಾರಿ ನಾನು ಪತ್ರಿಕಾಗೋಷ್ಠಿ ನಡೆಸಿ ಮತ್ತೆ ಆಗ್ರಹ ಮಾಡಿದ ನಂತರ, ಮಾಧ್ಯಮ & ಸಾರ್ವಜನಿಕರ ನಿರಂತರ ಒತ್ತಡದ ನಂತರವೇ ನಿನ್ನೆ ತಡರಾತ್ರಿ ತಾವು ಪರಿಹಾರ ಘೋಷಿಸಿದ್ದು ಕೂಡ ಸತ್ಯ ಎಂದಿದ್ದಾರೆ.

ಇದು ರಾಜಕೀಯ ಮಾಡುವ ವಿಷಯವಂತೂ ಖಂಡಿತ ಅಲ್ಲ. ಒಟ್ಟಿನಲ್ಲಿ ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ರವರ ಕುಟುಂಬಕ್ಕೆ ನ್ಯಾಯ ಸಿಕ್ಕಿರುವುದು ಸಂತಸದ ವಿಷಯ. ಧನ್ಯವಾದಗಳು. ಇದರೊಂದಿಗೆ ಆನೇಕಲ್ ತಾಲ್ಲೂಕಿನ ಜಿಗಣಿ ಪ್ರದೇಶದ ಮುಖ್ಯ ರಸ್ತೆಯನ್ನು, ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರ ಹೆಸರಿನಲ್ಲಿ ನಾಮಕರಣಗೊಳಿಸುವಂತೆ ಮನವಿ ಕೂಡ ಸಲ್ಲಿಸಿದ್ದು, ಈ ಮನವಿಗೆ ಶೀಘ್ರ ಸ್ಪಂದನೆ ಒದಗಿಸಿ ಹುತಾತ್ಮ ಯೋಧರೊಬ್ಬರಿಗೆ ಗೌರವ ಸೂಚಿಸುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.

Leave a Reply