ಬೆಳಗಾವಿ: ಭ್ರಷ್ಟರು ಭ್ರಷ್ಟರೇ, ನಾನು ಭ್ರಷ್ಟಾಚಾರ ಮಾಡಿದರೂ ಭ್ರಷ್ಟನೇ. ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ವಿಜಯೇಂದ್ರ ಅವರ ಪತ್ನಿ ಸೋದರನ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಬಾಯಲ್ಲಿ ಅವರ ಹೆಸರು ಹೇಳುವುದಿಲ್ಲ. ಯಾರು ಕರ್ನಾಟಕವನ್ನು ಲೂಟಿ ಹೊಡೆದಿದ್ದಾರೆ, ಕರ್ನಾಟಕವನ್ನು ಲೂಟಿ ಮಾಡಿ ಸಿಂಗಾಪುರ ಮಾರಿಶಸ್ ನಲ್ಲಿ ಹೂಡಿಕೆ ಮಾಡಿದ್ದಾರೆ, ಅದರ ಬಗ್ಗೆ ತನಿಖೆ ಆಗಬೇಕು ಹಾಗೂ ಜೈಲಿಗೆ ಹೋಗಬೇಕು ಎಂದು ಒತ್ತಾಯಿಸಿದರು.
ಕಂಡಕ್ಟರ್ ಆಗಿದ್ದ ಉಮೇಶ್ ಯಾರು ಅಂತ ನಮಗೆ ಗೊತ್ತಿಲ್ವಾ? ಅವರ ಮನೆಯಲ್ಲಿ ನೋಟು ಎಣಿಸುವ ಎರಡು ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ? ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು? ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಎಂದರು.
ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ಭ್ರಷ್ಟರು ಭ್ರಷ್ಟರೇ, ನಾನು ಭ್ರಷ್ಟಾಚಾರ ಮಾಡಿದರೆ ಭ್ರಷ್ಟನೇ. ಸನ್ಮಾನ್ಯ ಡಿ.ಕೆ.ಶಿವಕುಮಾರ್ ಮಾಡಿದರೂ ಭ್ರಷ್ಟರೇ ಎಂದು ಹೇಳಿದರು.




