ವಿಧಾನಸೌಧ ಬೆಂಗಳೂರಿನಿಂದ ಸುವರ್ಣಸೌಧ ಬೆಳಗಾವಿಯವರೆಗೆ

2 years ago

Vidhansouda Bangalore to Suvarnasoudha Belgaum

ಬಂಧುಗಳೇ,
1. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ, ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರ ಮತ್ತು ಆಸ್ತಿ ಹಂಚೆಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿರುತ್ತದೆ. ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಮತ್ತು ಅವಕಾಶಗಳು ಸಿಗಬೇಕೆನ್ನುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಹೇಳಿಕೊಂಡ ಎಲ್ಲಾ ಪಕ್ಷಗಳ ಸರ್ಕಾರಗಳು, ಅವಕಾಶ ವಂಚಿತರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು, ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗವನ್ನು ರಚಿಸಿತ್ತು. ಆಯೋಗವು ವರ್ಷಗಟ್ಟಲೇ ರಾಜ್ಯದಾದ್ಯಂತ ಸಮೀಕ್ಷೆ ನಡೆಸಿ, ಜಾತಿ ಮತ್ತಿತರ ಹಲವು ಕಾರಣಗಳಿಂದಾಗಿ ತಮ್ಮ ಹಕ್ಕು ಅಧಿಕಾರಗಳಿಂದ ವಂಚಿತರಾಗಿ, ಹಲವು ರೀತಿಯಲ್ಲಿ ಶೋಷಣೆಗೊಳಗಾಗಿರುವ ಜಾತಿ ಸಮುದಾಯಗಳ ವಾಸ್ತವ ಸ್ಥಿತಿಗಳ ಬಗ್ಗೆ ಅಂಕಿ ಅಂಶಗಳ ಸಮೇತವಾದ ವರದಿ ನೀಡಿದೆ ಎಂದು ಆಯೋಗದ ಮುಖ್ಯಸ್ಥರೇ ಹೇಳಿಕೊಂಡಿದ್ದಾರೆ. ಸುಮಾರು 167 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿರುವ ಕಾಂತರಾಜ್ ಆಯೋಗದ ಸಮೀಕ್ಷಾ ವರದಿಯನ್ನು ಸ್ವೀಕರಿಸಲು ಸರ್ಕಾರವು ಸಲ್ಲದ ನೆಪ ಹೇಳಿಕೊಂಡು ಬರುತ್ತಿದೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕಾಂತರಾಜ್ ವರದಿಯನ್ನು ಕೂಡಲೇ ಸ್ವೀಕರಿಸಿ, ಸಾರ್ವಜನಿಕ ಗೊಳಿಸಬೇಕೆಂದು ಎಸ್. ಡಿ. ಪಿ. ಐ ಆಗ್ರಹಿಸುತ್ತದೆ.

2. ಪರಿಶಿಷ್ಟರ ಮೀಸಲಾತಿ ಹಂಚಿಕೆಯಲ್ಲಿ, ನಾವು ಅಸ್ಪೃಶ್ಯರು ಎನ್ನುವ ಕಾರಣಕ್ಕೆ ನಮಗೆ ಅನ್ಯಾಯವಾಗಿದೆ. ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ನಮಗೆ ಒಳಮೀಸಲಾತಿ ಬೇಕು ಎನ್ನುವ ಪರಿಶಿಷ್ಟ ಜಾತಿಯ ಅಸ್ಪೃಶ್ಯ ಸಮುದಾಯಗಳ ಬೇಡಿಕೆಯ ಹೋರಾಟವು ಸುಮಾರು 30 ವರ್ಷಗಳ ಹೋರಾಟವಾಗಿರುತ್ತದೆ. ಈ ನಿಟ್ಟಿನಲ್ಲಿ ರಚನೆಯಾಗಿದ್ದ ಸದಾಶಿವ ಆಯೋಗವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿ ದಶಕವೇ ಆಗಿದೆ. ಆದರೇ ಆಡಳಿತ ಸರ್ಕಾರಗಳು ಒಳಮೀಸಲಾತಿ ಅನುಷ್ಠಾನಕ್ಕಾಗಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೆ, ಅಸ್ಪೃಶ್ಯ ಸಮುದಾಯಗಳ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಲೇ ಬರುತ್ತಿವೆ. ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು SDPI ಒತ್ತಾಯಿಸುತ್ತದೆ.

3. ರಾಜ್ಯದಲ್ಲಿ ಸುಮಾರು 17% ಜನಸಂಖ್ಯೆ ಹೊಂದಿರುವ ಮುಸಲ್ಮಾನರಿಗೆ ಇದುವರೆಗೂ ಜಾರಿಯಲ್ಲಿದ್ದ 4% ಮೀಸಲಾತಿಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ BJP ಸರ್ಕಾರವು ರದ್ದು ಮಾಡಿತ್ತು. ಸರ್ಕಾರದ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಹೈ ಕೋರ್ಟ್ ತಡೆ ಹಿಡಿದಿದೆಯಾದರೂ ಮೀಸಲಾತಿ ಮುಂದುವರಿಕೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ. ಗೊಂದಲ ನಿವಾರಣೆಗಾಗಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ತಡ ಮಾಡುತ್ತಿರುವುದು ಮುಸಲ್ಮಾನರ ವಿರೋಧಿ ನಡೆಯನ್ನು ತೋರಿಸುತ್ತದೆ. ಸರ್ಕಾರದ ಇಂತಹ ಧೋರಣೆಯನ್ನು ನಾವು ಖಂಡಿಸುತ್ತೇವೆ ಮತ್ತು ಮುಸಲ್ಮಾನರ 2B ಮೀಸಲಾತಿ ಪ್ರಮಾಣವನ್ನು 4% ನಿಂದ 8% ಗೆ ಹೆಚ್ಚು ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತೇವೆ. ನಮ್ಮಈ ನ್ಯಾಯುತವಾದ, ಸಂವಿಧಾನ ಬದ್ಧವಾದ ಹಕ್ಕೊತ್ತಾಯಗಳನ್ನು ಸರ್ಕಾರವು ಕೂಡಲೇ ಪರಿಗಣಿಸಿ ಡಿಸೆಂಬರ್ 4ನೇ  ತಾರೀಖಿನಿಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರಾರಂಭವಾಗಿರುವ ಅಧಿವೇಶನದಲ್ಲಿ ಮಂಡಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕದ ಸಮಸ್ತ ನಾಗರೀಕರ ಪರವಾಗಿ ವಿನಂತಿಸುತ್ತಿದ್ದೇವೆ. ನಾಡಿನ ಸಮಸ್ತ ನಾಗರೀಕರು, ವಿಚಾರವಂತರು, ವಿವಿದ ಸಂಘ ಸಂಸ್ಥೆಗಳು, ರೈತ, ಕೂಲಿ ಕಾರ್ಮಿಕ, ನೌಕರರು, ವಿಧ್ಯಾರ್ಥಿಗಳೆಲ್ಲರೂ ನಮ್ಮ ಈ ಹಕ್ಕೊತ್ತಾದ ಜೊತೆ ಧ್ವನಿನಿಗೂಡಿಸಬೇಕೆಂದು ವಿನಂತಿಸುತ್ತೇವೆ.

-ಎಸ್.ಡಿ.ಪಿ.ಐ., ಕರ್ನಾಟಕ

Leave a Reply