ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ಪರಿಶೀಲನೆ
ಬಳ್ಳಾರಿ: ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಭೆ ಭೇಟಿ ನೀಡಿ, ಮಹಿಳಾ ಮತ್ತು ಪುರುಷ ಕೈದಿಗಳ ಕೋಣೆಗಳ ಪರಿಶೀಲನೆ ನಡೆಸಿ ಅವರ ಆರೋಗ್ಯ, ಆಹಾರ, ಮೂಲ ಸೌಕರ್ಯದ ಜೊತೆಗೆ ಅವರ ಮಕ್ಕಳ ಕುರಿತು ವಿಚಾರಣೆ ನಡೆಸಿದರು.
ಬಳಿಕ ಗ್ರಂಥಾಲಯ ವೀಕ್ಷಿಸಿ ಎಲ್ಲ ದಿನ ಪತ್ರಿಕೆಗಳು ಮತ್ತು ಉತ್ತಮ ಪುಸ್ತಕಗಳನ್ನು ಖರೀದಿಸಿ ಅವರ ಜ್ಞಾನಾರ್ಜನೆಗೆ ಅವಕಾಶ ಮಾಡುವ ಜೊತೆಗೆ ಸನ್ನಡತೆಯಿಂದ ಅವರ ಮನಪರಿವರ್ತನೆ ಮಾಡುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.
ನಂತರ ಕಾರಾಗೃಹ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೈದಿಗಳೊಂದಿಗೆ ಸಂವಾದ ನಡೆಸಿ ಅವರ ಮಕ್ಕಳ ಮಾಹಿತಿ ಕಲೆ ಹಾಕಬೇಕು. ಅವರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆಯ ಜೊತೆಗೆ ಮಕ್ಕಳ ಸ್ಥಿತಿಗತಿಗಳ ಕುರಿತು ಪರಿಹಾರ ಕ್ರಮಗಳನ್ನು ಕೈಗೊಂಡು ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ರಾಘವೇಂದ್ರ ಹೆಚ್.ಸಿ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಅಂಬರೀಷ್ ಪೂಜಾರಿ, ಮಕ್ಕಳ ರಕ್ಷಣಾಧಿಕಾರಿಗಳು, ಅಸಂಸ್ಥಿಕ ರಕ್ಷಣಾಧಿಕಾರಿ ಮೌನೇಶ್ ಪೋತದಾರ್ ಸೇರಿದಂತೆ ಕಾರಾಗೃಹದ ಅಧಿಕಾರಿಗಳು ಇದ್ದರು.




