“ಮನುಷ್ಯ ಜಾತಿ ತಾನೊಂದೆ ವಲಂ” ಎಂದು ಸಾರಿದ ಆದಿಕವಿ ಪಂಪನ ನಂತರ ಸಾವಿರ ವರ್ಷದಲ್ಲಿ ಶೂದ್ರ ಕವಿಯೊಬ್ಬ (ಕುವೆಂಪುರವರು) ಕನ್ನಡ ಸಾಹಿತ್ಯ ಪ್ರವೇಶ ಮಾಡುವ ಮುನ್ನವೇ, ಕನ್ನಡದ ಸಣ್ಣ ಕಥೆಗಳ ಮಹತ್ವದ ಲೇಖಕರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಮೈಸೂರು ಸಂಸ್ಥಾನದಲ್ಲಿ ಜಿಲ್ಲಾಧಿಕಾರಿಯಾಗಿದ್ದವರು. ತಮ್ಮ ಕೃತಿಗಳನ್ನು ಸ್ವತಃ ಪ್ರಕಟಿಸುತ್ತಿದ್ದು, ಗೆಳೆಯರ ಕೃತಿಗಳನ್ನು ಪ್ರಕಟಿಸುವ ಅನೂಕೂಲ ಹೊಂದಿದ್ದವರು.
ಈ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣದಲ್ಲಿನ “ಶಂಭೂಕ ವಧೆ” ಎಂಬ ಪ್ರಸಂಗವನ್ನು , ಓದಿದ್ದ ಕುವೆಂಪುರವರು “ಶೂದ್ರ ತಪಸ್ವಿ” ಎಂಬ ನಾಟಕವನ್ನು ವೈಚಾರಿಕ ದೃಷ್ಟಿಕೋನದಿಂದ ವರ್ಣಾಶ್ರಮ ನೀತಿಯ ವಿರುದ್ಧವಾಗಿ ರಚಿಸಿದ್ದರು . ವಾಲ್ಮೀಕಿಯ ಶಂಭೂಕ ವಧೆ ಪ್ರಸಂಗದಲ್ಲಿ , ಶ್ರೀ ರಾಮಚಂದ್ರನು ಆಡಳಿತ ನಡೆಸುತ್ತಿದ್ದಾಗ , ಬ್ರಾಹ್ಮಣ ಕುಮಾರನೊಬ್ಬನು ಹುಲ್ಲು / ದರ್ಬೆ ತರಲು ಕಾಡಿಗೆ ಹೋಗಿದ್ದಾಗ , ಕಾಳಸರ್ಪ ಕಚ್ಚಿ ಸಾಯುತ್ತಾನೆ. ಮೃತನ ತಂದೆ ಕಾಡಿಗೆ ತೆರಳಿ ನೋಡಿದಾಗ ಕೇವಲ ಬ್ರಾಹ್ಮಣ, ಕ್ಷತ್ರಿಯರಿಗೆ ಮೀಸಲಾಗಿದ್ದ ಅಧ್ಯಾತ್ಮದ ಅಂತಿಮ ಘಟ್ಟ ತಪಸ್ಸನ್ನು “ಶಂಭೂಕ” ಎಂಬ ಶೂದ್ರ ಮಾಡುತ್ತಿರುತ್ತಾನೆ . ತತ್ಪರಿಣಾಮವಾಗಿಯೇ ತನ್ನ ಮಗ ಹಾವು ಕಡಿದು ಮೃತ ಪಟ್ಟಿದ್ದಾನೆಂದು ನಿರ್ಧರಿಸಿ ಬ್ರಾಹ್ಮಣ , ಶ್ರೀರಾಮನಿಗೆ ದೂರು ಸಲ್ಲಿಸಿ , ಜಾತಿಯ ಏಣಿ – ಶ್ರೇಣಿಗಳನ್ನು ಮರೆತು ಕ್ಷತ್ರಿಯರಂತೆ , ಬ್ರಾಹ್ಮಣನಂತೆ ತಪಸ್ಸನ್ನಾಚರಿಸಿ , ತನ್ನ ಮಗನ ಸಾವಿಗೆ ಕಾರಣನಾಗಿರುವ ಶೂದ್ರ ಶಂಭೂಕನನ್ನು ವಧಿಸಲು ಪ್ರಾರ್ಥಿಸುತ್ತಾನೆ . ವರ್ಣಾಶ್ರಮದ ರಕ್ಷಕನಾಗಿ ಶ್ರೀರಾಮ , ತನ್ನ ಖಡ್ಗದಿಂದ ಶಂಭೂಕ ಮುನಿಯನ್ನು ವಧಿಸುತ್ತಾನೆ . ದೇವಾನು ದೇವತೆಗಳು ಶ್ರೀ ರಾಮಚಂದ್ರನ ಮೇಲೆ ಪುಷ್ಪವೃಷ್ಟಿ ಮಾಡುತ್ತಾರೆ .
ಆದರೆ ಅಧ್ಯಾತ್ಮಿಕತೆಗೂ – ಜಾತಿಗೂ ಯಾವುದೇ ಸಂಬಂಧ ಮತ್ತು ಕಟ್ಟುಪಾಡುಗಳಿಲ್ಲ ಎಂದು ಪ್ರತಿಪಾದಿಸುವ ಸಲುವಾಗಿ ಸದರಿ ಕಥೆಯನ್ನೇ ಕುವೆಂಪು ಅವರು ನಾಟಕದಲ್ಲಿ ಮಾರ್ಪಡಿಸಿ ಬರೆಯುತ್ತಾರೆ. “ಶೂದ್ರ ತಪಸ್ವಿ” ಕೃತಿಯಲ್ಲಿ ಬ್ರಾಹ್ಮಣನ ದೂರಿಗೆ ಪ್ರತಿಯಾಗಿ , ಶ್ರೀರಾಮನು ಒರೆಯಿಂದ ಖಡ್ಗ ತೆಗೆದು ಶಂಭೂಕನನ್ನು ಕೊಲ್ಲುವುದಿಲ್ಲ ಬದಲಾಗಿ , “ಬ್ರಾಹ್ಮಣೋತ್ತಮ ಮತ್ತೊಮ್ಮೆ ಯೋಚಿಸು , ನಾನು ಪ್ರಯೋಗಿಸುವ ರಾಮಬಾಣ ಎಂದಿಗೂ ವಿಫಲವಾಗುವುದಿಲ್ಲ ತಪ್ಪಿತಸ್ಥನನ್ನು ಮಾತ್ರವೇ ಕೊಲ್ಲುವುದು” ಎಂದು ತಿಳಿಸುತ್ತಾ ಬಾಣ ಪ್ರಯೋಗಿಸುತ್ತಾನೆ. ರಾಮ ಬಾಣವು ಶಂಭೂಕನ ಬದಲಾಗಿ ದೂರು ನೀಡಿದ ಬ್ರಾಹ್ಮಣನನ್ನೇ ಕೊಲ್ಲಲು ಬರುತ್ತದೆ. ಬ್ರಾಹ್ಮಣನು ಶ್ರೀರಾಮನನ್ನು “ಕಾಪಾಡು , ನನ್ನನ್ನು ಮನ್ನಿಸು” ಎಂದು ಪ್ರಾರ್ಥಿಸಿ , ಜಪ ತಪಗಳು , ಅಧ್ಯಾತ್ಮ ಯಾವುದೇ ಜಾತಿಯ ಸ್ವತ್ತಲ್ಲವೆಂದು ಎಲ್ಲರಿಗೂ ಆತ್ಮಜ್ಞಾನ ಸಂಪಾದಿಸುವ , ಅಧ್ಯಾತ್ಮದಲ್ಲಿ ತೊಡಗುವ ಹಕ್ಕಿದೆಯೆಂದು ಅರಿವು ಮೂಡಿಸಿ, ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ. ಶ್ರೀ ರಾಮನು ಬ್ರಾಹ್ಮಣನನ್ನು ಮತ್ತು ಶಂಭೂಕನನ್ನು ಅನುಗ್ರಹಿಸಿ , ಜಾತಿ ಗರ್ವಾಂಧತೆಯ ಅಪಾಯದ ಬಗ್ಗೆ ತಿಳಿಸುತ್ತಾನೆ.
ಈ ನಾಟಕವು ಪ್ರಕಟವಾಗಿ ಓದುಗರಲ್ಲಿ ವೈಚಾರಿಕತೆಯ ಕಿಡಿ ಹಚ್ಚಿತು . ನಾಟಕ ವೀಕ್ಷಕರಲ್ಲಿಯೂ ಒಂದು ರೀತಿಯ ಚಿಂತನೆಗೆ ನಾಂದಿ ಹಾಡಿತು. ಆಗ ನಮ್ಮ ಮಾಸ್ತಿಯವರು ಪತ್ರಿಕೆಯಲ್ಲಿ , “ಪುಟ್ಟಪ್ಪನವರು ಬರೆದಿರುವ ನಾಟಕ ‘ಶೂದ್ರ ತಪಸ್ವಿ’ ಒಂದು ಜನಾಂಗವನ್ನು ನಿಂದಿಸಲು ಬರೆದಂತಿದೆ. ಮೂಲ ರಾಮಾಯಣದಲ್ಲಿರುವ ಪ್ರಸಂಗವನ್ನು ತಿರುಚಲಾಗಿದೆ. ಒಂದು ವೇಳೆ ಈ ವಿಚಾರವನ್ನು ಹೇಳಲೇ ಬೇಕೆಂದಿದ್ದರೆ , ಅದಕ್ಕೆ ಬೇರೆ ಕಥಾವಸ್ತುವನ್ನಿಟ್ಟು ಬರೆಯಲು ಸೂಚಿಸುತ್ತೇನೆ” ಎಂದು ಬರೆದರು. ಇದಕ್ಕೆ ಉತ್ತರವಾಗಿ ಮುಂದಿನ ಸಂಚಿಕೆಯಲ್ಲಿ ಕುವೆಂಪುರವರು, “ಲೇಖಕನಿಗೆ ಚೌಕಟ್ಟು ವಿಧಿಸಿ ಬರೆಯಲು ಸೂಚಿಸುವುದು ಸರಿಯಲ್ಲ. ಒಂದು ವೇಳೆ ಈಗಿನ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನನ್ನ ವಿಚಾರವನ್ನು ಅಳವಡಿಸಿದರೆ ಯಾವುದಾದರೂ ಮಠಗಳೋ ಪುರೋತಷಾಹಿಗಳೋ ಕೋರ್ಟಿಗೆ ಹೋಗುತ್ತವೆ” ಎಂದರು.
“ಚಿನ್ನದ ಹಳೆಯ ಒಡವೆಯನ್ನು ಯಾರೂ ಬಿಸಾಡುವುದಿಲ್ಲ , ಬದಲಿಗೆ ಈಗಿನ ಶೈಲಿಗೆ ಸರಿಹೊಂದುವಂತೆ ನೂತನ ವಿನ್ಯಾಸದಲ್ಲಿ ಒಡವೆ ಮಾಡಿಸಿ , ಉಪಯೋಗಿಸುವಂತೆ ಸುಧಾರಿಸಿ ಬರೆಯುವುದು ತಪ್ಪಿಲ್ಲ” ಎಂದು ಮಾರುತ್ತರಿಸಿದರು.
ಈ ಕಹಿ ಘಟನೆಯ ನಂತರವೂ ತಮ್ಮ ಕೊನೆಯ ದಿನಗಳವರೆಗೂ ಮಾಸ್ತಿ ಮತ್ತು ಕುವೆಂಪು ಈರ್ವರೂ ಸೌಹಾರ್ದಯುತ ಸ್ನೇಹ ಸಂಬಂಧವನ್ನು ಹೊಂದಿದ್ದರು.
ಕುವೆಂಪು ಸಾಹಿತ್ಯ ಇಂಗ್ಲಿಷಿನಲ್ಲಿ ಭಾಷಾಂತರವಾಗಿದ್ದರೆ,ಜಾಗತಿಕ ಪ್ರಶಸ್ತಿ , ಸನ್ಮಾನಗಳು ದೊರೆಯುತ್ತಿದ್ದವು ಎಂಬ ಕಾವ್ಯಾಸಕ್ತರಿಗೆ ಕುವೆಂಪು ಹೇಳಿದ್ದು : “ನನ್ನ ಕವಿತೆಗಳು ಲಂಡನ್ನಿನಲ್ಲಿ ಊದಬೇಕಿಲ್ಲ ತುತ್ತೂರಿ. ಇಲ್ಲಿನ ಕಸ್ತೂರಿ, ವೆಂಕಯ್ಯ, ಮಾಸ್ತಿ ಮೆಚ್ಚಿದರೆ ಸಾಕು”.
ಇದು ಶೂದ್ರಕವಿ/ವಿಶ್ವಮಾನವನ ಎದೆಯ ದನಿ ಎಂದರೆ ತಪ್ಪಿಲ್ಲ.
ಆಧಾರ : ತೇಜಸ್ವಿ ಲೇಖನಗಳು
– ಜಿ.ಟಿ.ನರೇಂದ್ರಕುಮಾರ್, ವಕೀಲರು




