ಸುದೀಪ್ ಪರಿಶಿಷ್ಟ ಪಂಗಡದ (ನಾಯಕ/ ವಾಲ್ಮೀಕಿ) ಸಾಮಾಜಿಕ ಹಿನ್ನೆಲೆಯ ಜನಪ್ರಿಯ ನಟ. ಗಾಂಧಿ ಅಂಬೇಡ್ಕರ್ ಲೋಹಿಯಾ ಕುವೆಂಪು ಲಂಕೇಶ್ ತೇಜಸ್ವಿ ಮುಂತಾದವರ ಚಿಂತನೆಗಳನ್ನು ಲೇಶಮಾತ್ರವೂ ತಿಳಿದಂತಿಲ್ಲ. ತಾನು ಹುಟ್ಟಿದ ಸಮುದಾಯದ ಸಂಕಟಗಳನ್ನು ಕೂಡಾ ಕಣ್ಣುಬಿಟ್ಟು ನೋಡಿದವನಲ್ಲ. ಹೀಗಾಗಿ ಆತನ ಅಪಕ್ವ ರಾಜಕೀಯ ತೀರ್ಮಾನದ ಪ್ರಭಾವದ ಅಪಕೊಡುಗೆಯನ್ನು ಕರ್ನಾಟಕ ಸ್ವಲ್ಪಮಟ್ಟಿಗೆ ಅನುಭವಿಸಬೇಕಾಗುತ್ತದೆ.
ಮಹಾಭಾರತ ಕಾವ್ಯದ ಕೃಷ್ಣನನ್ನು ಯಾದವ- ಗೊಲ್ಲನೆಂದು ಹೇಳಿರುವ ಕಾರಣ ಈಗಿನ ಗೊಲ್ಲರ ಸಮುದಾಯದ ಅನೇಕ ಯುವಕರು ಹಿಂದೂ ಧರ್ಮದ ವ್ಯಸನಕ್ಕೀಡಾಗಿ ಆರ್.ಎಸ್.ಎಸ್ ಮತ್ತು ಭಜರಂಗದಳದಲ್ಲಿ ಕಾಲಾಳುಗಳಾಗಿ ಸೇರಿಕೊಂಡಿದ್ದಾರೆ.
ಮಹಾಭಾರತದ ಕತೃವಾದ ವ್ಯಾಸ ಬೆಸ್ತರವನು ಎಂದಿರುವ ಕಾರಣ ಬೆಸ್ತರು ಜನಾಂಗದ ಅನೇಕ ಯುವಕರು ಆರ್.ಎಸ್.ಎಸ್ ಮತ್ತು ಭಜರಂಗದಳದಲ್ಲಿ ಜೀತಗಾರರಾಗಿ ಸೇರಿಕೊಂಡಿದ್ದಾರೆ.
ಹೀಗೆಯೇ ರಾಮಾಯಣ ಕಾವ್ಯದ ಕತೃ ವಾಲ್ಮೀಕಿಯು ವಾಲ್ಮೀಕಿ ಜನಾಂಗದವನು ಎಂದು ಹೇಳಿರುವ ಕಾರಣ ಈಗಿನ ವಾಲ್ಮೀಕಿ ನಾಯಕ ಸಮುದಾಯದ ಅನೇಕ ಯುವಕರು ಆರ್.ಎಸ್.ಎಸ್ ಮತ್ತು ಭಜರಂಗದಳದ ಕಾಲಾಳುಗಳಾಗಿರುವುದನ್ನು ನೋಡಬಹುದು.
ಇಂಥವರಿಗೆ ರಾಮ ಕೃಷ್ಣ ವ್ಯಾಸ ವಾಲ್ಮೀಕಿಯರಿಗಿಂತಲೂ ಹಾಗೂ ರಾಮಾಯಣ ಮಹಾಭಾರತ ಭಗವದ್ಗೀತೆಗಳಿಗಿಂತಲೂ ಇವತ್ತಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ಹಾಗೂ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳು ತುಂಬಾ ಮುಖ್ಯವಾದವು ಎಂಬುದರ ಬಗ್ಗೆ ಕನಿಷ್ಠ ತಿಳಿವಳಿಕೆ ಇರಬೇಕು. ಇಂತಹ ಯಾವುದೇ ತಿಳಿವಳಿಕೆಯಿರದ ಸುದೀಪನ ಅವೈಚಾರಿಕತೆ ಮತ್ತು ಅಪಕ್ವ ಬೌದ್ಧಿಕ ರಾಜಕೀಯ ತೀರ್ಮಾನದಿಂದಾಗಿ ಈತನ ಅನೇಕ ಅಭಿಮಾನಿಗಳು RSS ಭಜರಂಗದಳಕ್ಕೆ ಜಮಾವಣೆಯಾಗುವ ಸಾಧ್ಯತೆಗಳಿವೆ.
ಪ್ರಕಾಶ್ ರೈ ಈ ಹಿಂದೆ ಕಾಂಗ್ರೆಸ್ ಎದುರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅವರಿಗಿರುವ ವೈಚಾರಿಕತೆ, ಸಾಮಾಜಿಕ ಬದ್ಧತೆ ಮತ್ತು ರಾಜಕೀಯ ಸಿದ್ಧಾಂತ ಸಾಂವಿಧಾನಿಕ ಆಶಯಗಳಿಗೆ ಯಾವುದೇ ಘಾತವನ್ನು ಉಂಟುಮಾಡಿಲ್ಲ. ಪ್ರಕಾಶ್ ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತನಾಗಿ ಜನತೆಯ ಸಂಗಾತಿಯಾಗಿ ನಮ್ಮ ನಡುವೆ ಇದ್ದಾರೆ.
-ಡಾ.ವಡ್ಡಗೆರೆ ನಾಗರಾಜಯ್ಯ, ಸಂಶೋಧಕರು


