ಕನ್ನಡ ಸಿನಿಮಾ ರಂಗದ ಮುತುನ ರತುನಗಳೇ ಇತ್ತೀಚೆಗೆ ನೀವು ಬಿ.ಜೆ.ಪಿ. ಪಕ್ಷ ಸೇರುವಾಗ ಅಥವಾ ಆ ಪಕ್ಷಕ್ಕೆ ಬೆಂಬಲ ಸೂಚಿಸುವಾಗ ಪಕ್ಷವನ್ನು ಮತ್ತು ಅದರ ನೀತಿಯನ್ನು ನೀವು ಹೊಗಳತ್ತಿರುವ ಪರಿಯನ್ನು ಗಮನಿಸಿದ್ದೀನಿ. (ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಮತ್ತು ಇತ್ತೀಚೆಗೆ ಸುದೀಪ್, ಜಗ್ಗೇಶ್ ಇತ್ಯಾದಿ.)
ನೀವು ಮೂಲತಃ ಕಲಾವಿದರು. ಸಾಮಾಜಿಕ ಅಥವಾ ರಾಜಕೀಯ ವಿಷಯಗಳ ತಜ್ಞರಲ್ಲ. ಈ ವಿಷಯವನ್ನು ನಾನೂ ಒಪ್ಪುತ್ತೇನೆ. ಆದರೆ, ಕಳೆದ ಮೂರೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಅಮಾಯಕ ಮುಸ್ಲಿಂ ಯುವಕರು ಹಿಂದೂ ಯುವಕರಿಂದ ಹತ್ಯೆಯಾದರು. ಅದೇ ರೀತಿಯಲ್ಲಿ ಕಳೆದವಾರ ಮಂಡ್ಯನಗರದ ಗುತ್ತಲು ಬಡಾವಣೆಯ ನಿವಾಸಿ ಮುಸ್ಲಿಂ ಯುವಕ ಹಿಂದೂ ಯುವಕರಿಂದ ಸಾತನೂರು ಗ್ರಾಮದಲ್ಲಿ ಹತ್ಯೆಯಾದನು, ಇದರ ಜೊತೆಗೆ ಶಿವಮೊಗ್ಗದ ಹರ್ಷ ಮತ್ತು ಸುಳ್ಯ ಸಮೀಪದ ಯುವಕ ಇಬ್ಬರೂ ಮುಸ್ಲಿಂ ಯುವಕರಿಂದ ಹತ್ಯೆಯಾದರು.
ಸತ್ತವರು ಯಾವ ಜಾತಿ ಅಥವಾ ಧರ್ಮದವರಾಗಿರಲಿ ಹತ್ಯೆ ಎನ್ನುವುದು ಮನುಕುಲದ ಕ್ರೌರ್ಯ ಮತ್ತು ಅಮಾನುಷ ಕ್ರಿಯೆ. ಆದರೆ. ಇದೇ ಕರ್ನಾಟಕದ ಆಡಳಿತಾರೂಢ ಬಿ.ಜೆ.ಪಿ. ಸರ್ಕಾರ ಮತ್ತು ಪಕ್ಷಗಳ ಸಂಘಟನೆಗಳು ಹರ್ಷ ಎಂಬಾತನ ಕುಟುಂಬಕ್ಕೆ ಎರಡು ಕೋಟಿ ಪರಿಹಾರ ಒದಗಿಸಿದವು. ಸುಳ್ಯದ ಯುವಕನ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ಮತ್ತು ಎಂಬತ್ತಾರು ಲಕ್ಷದ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ
ನೀವು ಹಾಡಿ ಹೊಗಳುವ ಬಸವರಾಜ ಬೊಮ್ಮಾಯಿ ಎಂಬ ಮುಖ್ಯಮಂತ್ರಿ ಅಥವಾ ಇತರೆ ಮಹಾಶಯರು ಈವರೆಗೆ ಮೃತಪಟ್ಟ ಮುಸ್ಲಿಂ ಯುವಕರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರಾ? ಅಥವಾ ಪರಿಹಾರ ನೀಡಿದ್ದಾರಾ? ಏಕೆ ಆ ಮೃತಪಟ್ಟ ಯುವಕರ ತಂದೆ ತಾಯಿಗಳ ಕಣ್ಣಲ್ಲಿ ಹರಿಯುವುದು ಕಣ್ಣೀರಲ್ಲವೆ? ಅವರು ಮನುಷ್ಯರಲ್ಲವೆ? ಅವರ ಹೃದಯದ ವೇದನೆಗೆ ನೋವಿಲ್ಲವೆ? ಅವರು ಸಹ ನಮ್ಮ ಹಾಗೆ ಈ ನೆಲದಲ್ಲಿ ತೆರಿಗೆ ಪಾವತಿಸಿ, ಕಾನೂನನ್ನ ಗೌರವಿಸಿಕೊಂಡು ಬಂದವರಲ್ಲವೆ? ಇಂತಹ ಅಮಾಯಕರ ಸಾವಿನ ಕುರಿತಾಗಿ ಕನ್ನಡ ಚತ್ರರಂಗ ಮಾತ್ರವಲ್ಲ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಚಿಂತಕರು ಎನಿಸಿಕೊಂಡ ಚಿಂತಾಜನಕರು ಈವರೆಗೆ ಉಸಿರು ಬಿಟ್ಟಿಲ್ಲ.
ವರ್ತಮಾನದ ಭಾರತದಲ್ಲಿ ಇಸ್ಲಾಂ ಸಮುದಾಯವನ್ನು ದ್ವೇಷ ಮನೋಭಾವದಿಂದ ನೋಡುವ ಹಾಗೂ ಗುರುತಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ನಿಮಗೂ ಗೊತ್ತು. ಆದರೆ, ಆ ಸಮುದಾಯದಿಂದ ಬಂದ ಎಲ್ಲರೂ ಈ ನೆಲದ ಮಣ್ಣಿನ ವಾಸಿನೆಯನ್ನು ಉಸಿರಾಡಿ, ಇಲ್ಲಿನ ನೀರನ್ನು ಕುಡಿದು ಇತರೆ ಧರ್ಮಗಳ ಕ್ರೈಸ್ತರಂತೆ, ಜೈನರಂತೆ, ಬೌದ್ಧರಂತೆ ಬದುಕಿದವರು ಎಂಬ ಕನಿಷ್ಠ ಪ್ರಜ್ಞೆಯೂ ನಮಗಿಲ್ಲವಾಗಿದೆ. 1857 ರ ಸಿಪಾಯಿ ದಂಗೆಯ ಸಮಯದಲ್ಲಿ ಕಾನ್ಪುರದಲ್ಲಿ ತಾತ್ಯಾಟೋಪಿಯ ಜೊತೆಗೂಡಿ ಬ್ರಿಟೀಷರ ವಿರುದ್ಧ ಹೋರಾಡಿದ ಮುಸ್ಲಿಂ ಕಲಾವಿದೆ ಅಜೀಜ್ ಉನ್ನೀಸಾ ಸೇರಿದಂತೆ ಹನ್ನೆರೆಡಕ್ಕೂ ಹೆಚ್ಚು ಮುಸ್ಲಿಂ ಕಲಾವಿದೆಯರು ಸಾರ್ವಜನಿಕವಾಗಿ ಬ್ರಿಟೀಷರಿಂದ ನೇಣುಗಂಬಕ್ಕೆ ಏರಿಸ¸ಲ್ಪಟ್ಟ ಕಥೆ ಈಗ ದೇಶ ಮತ್ತು ಧರ್ಮದ ಬಗ್ಗೆ ಮಾತನಾಡುವವರಿಗೆ ನೆನಪಾಗುವುದಿಲ್ಲ.
ಬಿಜಾಪುರದ ಆದಿಲ್ ಶಾಹಿ ದೊರೆಯ ಆಳ್ವಿಕೆಯ ಕಾಲದಲ್ಲಿ ಅನೇಕ ಮುಸ್ಲಿಂ ಕಲಾವಿದೆಯರು ಪಾತರದವರು ಎಂಬ ಹೆಸರಿನಲ್ಲಿ ಹಿಂದೂ ದೇವಲಾಯದಲ್ಲಿ ಹಾಡುತ್ತಿದ್ದರು. ಇದಕ್ಕೆ ಪುರಾವೆಯಾಗಿ ಗದಗ ಜಿಲ್ಲೆಯ ಲಕ್ಷ್ಮೇÃಶ್ವರದ ಸೋಮೇಶ್ವರ ದೇವಲಾಯದಲ್ಲಿ ಹಾಡುತ್ತಿದ್ದ ಅಕ್ಕಸಾನಿ ಮತ್ತು ಬೆಳಗಾವಿ ಜಿಲ್ಲೆ ಸಂಕೇಶ್ವರದ ಶಂಕರಲಿಂಗ ಈಶ್ವರ ದೇವಾಲಯದಲ್ಲಿ ಹಾಡುತ್ತಿದ್ದ ಗೋಹರ್ ಜಾನ್ ಮತ್ತು ಇತರೆ ಕಲಾವಿದೆಯರು ನಮಗೆ ಸಾಕ್ಷಿಯಂತಿದ್ದಾರೆ. ಈ ಕಾರಣದಿಂದಲೇ ಶಿಶುನಾಳ ಷರೀಪರು ತನ್ನ ಒಂದು ತತ್ವ ಪದದಲ್ಲಿ ‘’ ಹಾಡಲು ಬಂದ ಪಾತರದವಳಾ ಮದ್ದಳೆ ನುಂಗಿತ್ತಾ’’ ಎಂದು ಹಾಡಲು ಸಾಧ್ಯವಾಯಿತು. ಜೊತೆಗೆ ಬಿಜಾಪುರದ ಅಮೀರ್‌ಬಾಯಿ, ಜೋಹರ್ ಬಾಯಿ, ಸವಣೂರಿನ ಜುಬೇದಾಬಾಯಿ ಹಾಗೂ ಸಿಂಧನೂರಿನ ರೆಹಮಾನವ್ವ ಇಂತಹವರ ಭವ್ಯ ಇತಿಹಾಸ ನಮ್ಮ ಕಣ್ಣ ಮುಂದಿದೆ.
ನಮ್ಮ ಕರ್ನಾಟಕದ ರಂಗಭೂಮಿಯ ಇತಿಹಾಸಕ್ಕೆ ಬಂದರೆ, ಕನ್ನಡದ ರಂಗಭೂಮಿಗೆ ಪ್ರಥಮವಾಗಿ ನಟಿಯಾಗಿ ಅಭಿನಯಿಸಿದ ಮಹಿಳೆ ಯಾರು ಗೊತ್ತಾ? ಆಕೆ ಹಿಂದೂ ಅಲ್ಲ, ಓರ್ವ ಮುಸ್ಲಿಂ ಮಹಿಳೆ ಎಂಬುದು ನಿಮಗೆ ಗೊತ್ತಿರಲಿ. ಗದಗಿನ ಮೂಲದ ಶಿವಮೂರ್ತಿ ಸ್ವಾಮಿ ಎಂಬುವರು ತಮ್ಮ ಕೊಣ್ಣೂರು ನಾಟಕ ಮಂಡಳಿಗೆ ಪ್ರಥಮವಾಗಿ ಗುಳೇದಗುಡ್ಡದಿಂದ ಯಲ್ಲೂಬಾಯಿ ಎಂಬ ಮುಸ್ಲಿಂ ಮಹಿಳೆಯನ್ನ ಕರೆಸಿ ಆಕೆಯಿಂದ ಪಾತ್ರ ಮಾಡಿಸುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದರು.
ಕಲೆ ಮತ್ತು ಸಾಹಿತ್ಯಕ್ಕೆ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷಗಳ ಬೇಧವಿಲ್ಲ ಎಂಬ ಕನಿಷ್ಠ ಪ್ರಜ್ಞೆಯೂ ನಿಮಗೆ ಇಲ್ಲವಾಯಿತೆ? ನಿಮ್ಮನ್ನು ಕೆಟ್ಟ ಶಬ್ದಗಳಿಂದ ನಾನು ನಿಂದಿಸಲಾರೆ. ಏಕೆಂದರೆ, ಅವುಗಳಿಗೂ ನೀವು ಯೋಗ್ಯರಲ್ಲ ಎಂಬುದು ಈಗ ಸಾಬೀತಾಗಿದೆ. ನೀವು ಸಾಹಿತ್ಯ, ಇತಿಹಾಸ ಓದುವುದು ಬೇಡ. ಕನಿಷ್ಠ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಎಂಬ ಮಹಾನ್ ಕಲಾವಿದ ಈ ಕನ್ನಡದ ನೆಲದಲ್ಲಿ ನಡೆದಾಡುವ ದೇವರಂತೆ ಬದುಕಿದ ಬಗೆಯನ್ನಾದರೂ ಸ್ವಲ್ಪ ಅರ್ಥಮಾಡಿಕೊಳ್ಳಿ ಸಾಕು.
-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




