ಬೆಂಗಳೂರು: ಸರ್ಕಾರ ಇರುವುದು ಜನ ಪರವಾಗಿ ಕೆಲಸ ಮಾಡುವುದಕ್ಕಾಗಿ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪ್ರಗತಿಪರ ವಿಶೇಷ ನಡೆಸಿದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಒ ಗಳು ತಮ್ಮ ಅಹಂ ಬದಿಗಿಟ್ಟು ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ, ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ನಿಮ್ಮ ಕರ್ತವ್ಯವಾಗಿದೆ ಎಂದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಓದಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧಿರಿಸಿದ್ದೇನೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇವೆರಡಕ್ಕೂ ನೇರಾನೇರ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ, ಅಭಿವೃದ್ಧಿ ಕುಂಠಿತವಾದಂತೆ. ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ನೇರ ಹೊಣೆ ಎಂದರು.
ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ. ಆದ್ದರಿಂದ ಜನಪರ ಕಾಳಜಿಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂದರು.
ಜಿಲ್ಲಾ ಮಟ್ಟದ ಶಾಂತಿ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರ್ತಾರೆ. ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿಭಂಗ ಆದ ಮೇಲೆ ಪೋಸ್ಟ್ ಮಾರ್ಟಂ ಮಾಡುತ್ತಾ ಕೂರಬಾರದು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಏನು ಸಮಸ್ಯೆ ನಿಮಗೆ ಎಂದು ಖಾರವಾಗಿ ಪ್ರಶ್ನಿಸಿದರು.
ಬಾಲ್ಯ ವಿವಾಹ ಆಗುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಏಕೆ ಬರುವುದಿಲ್ಲ? ನಿಮ್ಮ ಕೆಳಗಿನವರು ನಿಮಗೆ ವರದಿ ಮಾಡುವುದಿಲ್ಲವೇ? ಕೆಳಗಿನವರು ನಿಮಗೆ ಹೇಳದಿದ್ದರೆ ನಿಮಗೆ ದಕ್ಷತೆ ಇಲ್ಲ ಎಂದು ಅರ್ಥ. ನಿಮಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ, ನಿಮ್ಮ ಬಗ್ಗೆ ಅವರಿಗೆ ಭಯ ಇಲ್ಲ ಎಂದೇ ಅರ್ಥ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವರ್ಷ 700 ಬಾಲ್ಯ ವಿವಾಹ ನಡೆದಿದೆ, ಬಾಲ್ಯದಲ್ಲೇ ತಾಯಂದಿರಾದ ಘಟನೆಗಳೂ ವರದಿಗಳಾಗಿವೆ. ಈ ಬಗ್ಗೆ ಹಲವು ಕಡೆ ಎಫ್ ಐಆರ್ ಕೂಡ ದಾಖಲಾಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಸ್ವಾತಂತ್ರ್ಯ ಬಂದು ಇಷ್ಟ ವರ್ಷಗಳಾದರೂ 700 ಬಾಲ್ಯ ವಿವಾಹ ನಡೆಯುತ್ತಿದೆ ಎಂದರೆ ಹೇಗೆ? ಬಾಲ್ಯವಿವಾಹ ತಡೆಗೆ ಕಾಯ್ದೆ, ಕಾನೂನುಗಳಿವೆ. ಆದರೂ ಇದನ್ನು ಪರಿಣಾಮಕಾರಿಯಾಗಿ ಕೆಲವು ಕಡೆ ಬಳಸಿಲ್ಲ. ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲಾವಾರು ರೈತರ ಆತಹತ್ಯೆ ಅಂಕಿ ಅಂಶಗಳನ್ನು ಪರಿಶೀಲಿಸಿದ ಅವರು, ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಗಮನಿಸಿ ಸಿಟ್ಟಾದರು. ಆದಷ್ಟು ಬೇಗ ಪರಿಹಾರ ಪಾವತಿಸಿ ಎಂದು ಸೂಚನೆ ನೀಡಿದರು.
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಏಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ.74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಇದುವರೆಗೂ ಇದು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸಿ, ಡಿಸಿ ತಹಶೀಲ್ದಾರ್ ಕೋರ್ಟ್‌ಗಳಲ್ಲಿ ಬಾಕಿ ಕೇಸುಗಳು ಶೀರ್ಘ ವಿಲೇವಾರಿ ಆಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು, ಬೆಂಗಳೂರು ಗ್ರಾಮಾಂತರ ಮತ್ತು ಎರಡು ಜಿಲ್ಲೆಗಳಲ್ಲಿ ಮಾತ್ರ ಎಸಿ ಮತ್ತು ಡಿಸಿ ಕೋರ್ಟ್ ಗಳಲ್ಲಿ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇರುವುದಕ್ಕೆ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಭಾರೀ ಮಳೆಯಿಂದಾಗಿ ನಗರ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುವುದರಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಇಂತಹ ಪ್ರದೇಶಗಳನ್ನು ಗುರುತಿಸಬೇಕು ಮತ್ತು ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.




