ಜನತಾದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳು 3 ತಿಂಗಳೊಳಗಾಗಿ ಇತ್ಯರ್ಥ: ಸಿದ್ದರಾಮಯ್ಯ

2 years ago

ಬೆಂಗಳೂರು: ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಸಾವಿರಾರು ದೂರುಗಳನ್ನು ಹೊತ್ತು ರಾಜ್ಯದ ಮೂಲೆ ಮೂಲೆಗಳಿಂದ ವಿಧಾನಸೌಧಕ್ಕೆ ಆಗಮಿಸಿದ ಜನತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಚಿಕಿತ್ಸೆಗೆ ಸ್ಥಳದಲ್ಲೇ ಆರ್ಥಿಕ ನೆರವು ಸೇರಿದಂತೆ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಸಿದ್ದರಾಮಯ್ಯ, ಇಂದಿನ ಜನತಾದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು 3 ತಿಂಗಳೊಳಗಾಗಿಯೇ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು.

ವಿಧಾನಸೌಧದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಜನಸ್ಪಂದನದಲ್ಲಿ ಜಮಸಾಮಾನ್ಯರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ನಡೆದ ಮೊದಲ ಜನತಾದರ್ಶನದಲ್ಲಿ 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ ಶೇ.98ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಶೇ.2ರಷ್ಟು ಮಾತ್ರ ಬಾಕಿ ಉಳಿದಿವೆ ಎಂದರು.

ಇಂದಿನ ಜನತಾದರ್ಶನದಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ಜನರ ಅಹವಾಲು ಸ್ವೀಕರಿಸಲಾಗಿದೆ. ಕೆಲವರಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲಾಗಿದೆ. ಉಳಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಂದಿನ 3 ತಿಂಗಳೊಳಗಾಗಿ ಪರಿಹಾರ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು .

ಕಾನೂನಾತ್ಮಕವಾಗಿ ಸಾಧ್ಯ ಇರುವ ಎಲ್ಲಾ ಪರಿಹಾರಗಳನ್ನೂ ಒದಗಿಸಲಾಗುವುದು. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಸಕಾರಣಗಳ ಹಿಂಬರಹವನ್ನು ಅರ್ಜಿದಾರರ ವಿಳಾಸಕ್ಕೆ ತಲುಪಿಸುವುದಾಗಿ ತಿಳಿಸಿದರು.

ಇದು 2ನೇ ರಾಜ್ಯಮಟ್ಟದ ಜನತಾದರ್ಶನವಾಗಿದೆ. ಇದಕ್ಕೂ ಮೊದಲು ಜಿಲ್ಲಾ ಕೇಂದ್ರಗಳಲ್ಲಿ 108 ಜನಸ್ಪಂದನಗಳನ್ನು ನಡೆಸಲಾಗಿದೆ. ಆಡಳಿತ ಬೆಂಗಳೂರಿಗೆ ಕೇಂದ್ರೀಕೃತವಾಗಬಾರದು. ಜನರ ಬಳಿಗೆ ಹೋಗಬೇಕು ಎಂಬುದು ನಮ್ಮ ಮೂಲ ಉದ್ದೇಶ. ಸಣ್ಣಪುಟ್ಟ ಸಮಸ್ಯೆಗಳಿಗೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲಿ ಸಾಧ್ಯವಾಗದೇ ಹೋದರೆ ರಾಜ್ಯಮಟ್ಟದಲ್ಲಿ ಕಾನೂನುಬದ್ಧವಾದ ಪರಿಹಾರ ದೊರಕಿಸುವುದಾಗಿ ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳಿಂದ ಉಳಿದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ಮತ್ತು ವಿರೋಧಪಕ್ಷದವರಿಗೆ ಅಭಿವೃದ್ಧಿ ಎಂದರೆ ಗೊತ್ತಿಲ್ಲ. ಅಧಿಕಾರದಲ್ಲಿದ್ದಾಗ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಈಗ ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ವಿಷಯದಲ್ಲಿ ನಂಬಿಕೆ ಇಲ್ಲದ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ 8 ತಿಂಗಳಲ್ಲಿಯೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದು ಸಾಧ್ಯವಿಲ್ಲ ಎಂದು ಹೇಳಿದ್ದ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಂತುಹೋಗಲಿವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಜನ ಅವರ ಮಾತುಗಳನ್ನು ನಂಬಬಾರದು. ಗ್ಯಾರಂಟಿ ಯೋಜನೆಗಳು ಬಡವರ ಅನುಕೂಲಕ್ಕಾಗಿ ಅಸಮಾನತೆಯನ್ನು ತೊಲಗಿಸಲು ರೂಪಿಸಿದ ಯೋಜನೆಗಳು. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದರು.

ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾದರೂ ಜನರು ಸಮಾಧಾನದಿಂದ ಸರದಿಯಲ್ಲಿ ನಿಂತು ಅರ್ಜಿ ನೀಡಿದರು. ಸಣ್ಣ ಸಣ್ಣ ಸಮಸ್ಯೆಗಳನ್ನು ಬಹುದೂರದಿಂದ ಹೊತ್ತು ತಂದಿದ್ದ ಜನರ ಅಹವಾಲುಗಳನ್ನು ಸಿದ್ದರಾಮಯ್ಯ ನಿರಂತರವಾಗಿ ಆಲಿಸಿದರು.

ಪಿಂಚಣಿ ಮಂಜೂರಾಗದಿರುವುದು, ಪಡಿತರ ಚೀಟಿ ಸಮಸ್ಯೆ, ಜಮೀನಿನ ಪೋಡಿ, ಖಾತೆ, ಆರೋಗ್ಯ ನೆರವು, ಉದ್ಯೋಗ ಬೇಡಿಕೆ, ವಸತಿ, ನಿವೇಶನ ಕೋರಿಕೆ, ವರ್ಗಾವಣೆ ಬೇಡಿಕೆ, ಬಲಾಢ್ಯರಿಂದ ಜಮೀನು ಅತಿಕ್ರಮಣ, ಪೊಲೀಸರ ಕಿರುಕುಳ, ತಳಮಟ್ಟದ ಅಧಿಕಾರಿಗಳಿಂದ ತಮ್ಮ ಸಮಸ್ಯೆಗೆ ಪರಿಹಾರ ಸಿಗದ ದೂರು ಸೇರಿದಂತೆ ಹಲವಾರು ಮನವಿಗಳು ಮುಖ್ಯಮಂತ್ರಿಗಳನ್ನು ತಲುಪಿದವು.

ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳೀಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನೀವಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಎಂದು ಹಲವರು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಜನರ ಸಮಸ್ಯೆಗಳನ್ನು ಆಲಿಸಿದ ಸಿದ್ದರಾಮಯ್ಯ, ಸ್ಥಳೀಯವಾಗಿ ತಳಮಟ್ಟದಲ್ಲೇ ಪರಿಹಾರ ಕಾರಣಬೇಕಾಗಿದ್ದ ಸಮಸ್ಯೆಗಳಿಗೆ ಪರಿಹಾರ ಕಾಣದೆ ಜನ ದೂರದ ಊರುಗಳಿಂದ ತಮ್ಮ ಬಳಿ ಬರಲು ಕಾರಣರಾದ ಕೆಲ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡಿ ಇಲ್ಲದಿದ್ದರೆ ಸರ್ಕಾರದ ಕ್ರಮಕ್ಕೆ ಸಿದ್ಧರಾಗಿ ಎಂಬ ಎಚ್ಚರಿಕೆಯನ್ನು ಈ ಜನಸ್ಪಂದನ ಕಾರ್ಯಕ್ರಮದ ಮೂಲಕ ನೀಡಿದರು.

Leave a Reply