ಬೆಂಗಳೂರು: ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಸರ್ಕಾರದ ಆಶಯಕ್ಕೆ ತಕ್ಕಂತೆ ಅಧಿಕಾರಿಶಾಹಿ ಕೆಲಸ ಮಾಡಬೇಕು. ತಪ್ಪಿದಲ್ಲಿ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಷತೆ, ಸೋಮಾರಿತನ ಹಾಗೂ ಆಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಾಡಿನ ಜನತೆ ಸಣ್ಣಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ ಎಂದರೆ ನೀವುಗಳು ಇದ್ದು ಏನು ಪ್ರಯೋಜನ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.
ಮುಖ್ಯಮಂತ್ರಿಯಾದ ಬಳಿಕ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆ ವೇಳೆ ಜನ ಸಾಮಾನ್ಯರು ನೂರಾರು ರೀತಿಯ ಮನವಿಗಳನ್ನು ನನಗೆ ನೀಡುತ್ತಿದ್ದಾರೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನ ಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಹೇಳಿದರು.
ಕೆಲವೊಂದು ಸಮಸ್ಯೆಗಳಿಗೆ ವಾರದ ಕಾಲ ಮಿತಿಯಲ್ಲಿ ಪರಿಹಾರ ಒದಗಿಸಿ ಕೊಡಿ. ಕೆಲಸ ಆಗಿದೆಯಾ , ಇಲ್ಲವಾ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನ ತನಕ ಬರುವ ಅಗತ್ಯವೇ ಬೀಳುವುದಿಲ್ಲ ಎಂದು ತಿಳಿಸಿದರು.
ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು. ಈ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ನಾವ್ಯಾರು ರಾಜರುಗಳಲ್ಲ ಎಂದರು.
ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳೂ ಸಾರ್ವಜನಿಕರು, ಶಾಸಕರು ಮತ್ತು ಮಂತ್ರಿಗಳಿಂದ ಇವೆ. ಇದು ಒಳ್ಳೆಯದಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಇರಲಿ, ಸಚಿವರಿರಲಿ, ಶಾಸಕರಿರಲಿ, ಜನಸಾಮಾನ್ಯರಿರಲಿ, ಅವರ ಕರೆಗಳಿಗೆ ಸ್ಪಂದಿಸಬೇಕು. ಯಾವುದೇ ಪಕ್ಷದ ಶಾಸಕರುಗಳಿರಲಿ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು ಎನ್ನುವ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನೆ ಕೈರುವುದಿಲ್ಲ ಎಂದು ಎಚ್ಚರಿಸಿದರು.
ರೈತರಿಗೆ ಕಿರುಕುಳ ಸಹಿಸಲ್ಲ: ರಾಜ್ಯದಲ್ಲಿ 251 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, 174 ಪ್ರಕರಣಗಳಷ್ಟೇ ಇತ್ಯರ್ಥವಾಗಿದೆ. ಉಳಿದ ಪ್ರಕರಣಗಳನ್ನೂ ಶೀಘ್ರವೇ ವಿಲೇವಾರಿ ಮಾಡಿ, ಪರಿಹಾರ ವಿತರಿಸಬೇಕು. ಇದರಲ್ಲಿ ವಿಳಂಬ ಸರಿಯಲ್ಲ. ಬರ ಘೋಷಣೆಯಾದ ನಂತರ ಖಾಸಗಿ ಲೇವಾದೇವಿದಾರರ ಮೇಲೆ ನಿಗಾ ಇಡಬೇಕು. ಬ್ಯಾಂಕುಗಳು ರೈತರಿಗೆ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಅಧಿಕಾರಿಗಳಿಗೆ ಸೌಲಭ್ಯ ನೀಡುವುದು, ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ. ನೀವು ಚೆನ್ನಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಕೆಲಸ ಮಾಡದಿದ್ದರೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೋಸ್ಕರ ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಎಚ್ಚರಿಸಿದರು.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಅರೆ ವೈದ್ಯಕೀಯ ಸಿಬ್ಬಂದಿಯೇ ವೈದ್ಯರ ಪಾತ್ರ ನಿರ್ವಹಿಸುವುದು, ಔಷಧ ಪ್ರಿಸ್ಕ್ರಿಪ್ಷನ್ ಬರೆಯುವುದು ಇವೆಲ್ಲ ಆಗಬಾರದು. ವೈದ್ಯರು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಸೂಚನೆ ನೀಡಿದರು.
ಸ್ಮಶಾನಗಳಿಗೆ ಮತ್ತು ಖಬರ್ಸ್ತಾನ್ಗಳಿಗೆ ಕೂಡಲೇ ಜಾಗ ಒದಗಿಸಬೇಕು. ಶಾಲಾ ಕಟ್ಟಡ, ಅಂಗನವಾಡಿ, ಆರೋಗ್ಯ ಕೇಂದ್ರ ಸ್ಮಶಾನಗಳಿಗೆ ಜಾಗ ಕೂಡಲೇ ಗುರುತಿಸಿ ಕೊಡಬೇಕು. ಸಾರ್ವಜನಿಕರಿಗೆ ಭೇಟಿ ಸಮಯ ನಿಗದಿಮಾಡಬೇಕು. ಕೇಂದ್ರ ಕಚೇರಿಯಲ್ಲಿರುವಾಗ ಸಾರ್ವಜನಿಕರಿಗೆ ಸಮಯ ನಿಗದಿ ಮಾಡಬೇಕು. ಆ ಸಮಯದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಸ್ಟೆಲುಗಳು, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಅಧೀನ ಕಚೇರಿಗಳಿಗೆ ಭೇಟಿ ನೀಡಬೇಕು ಎಂದರು.




