ಬೆಳಗಾವಿ: ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಜಾರಿಗೊಳಿಸಲು ಈಗಾಗಲೇ ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ನೀಡಿದೆ. ಆದರೆ ಸರ್ಕಾರ ಆ ವರದಿಯನ್ನು ಪರಿಶೀಲನೆ ನಡೆಸಿ ಜಾರಿಗೊಳಿಸಬೇಕಿತ್ತು. ಆದರೆ ಅದನ್ನು ಪರಿಶೀಲನೆ ನಡೆಸಲು ತ್ರಿಸದಸ್ಯ ಸಮಿತಿಗೆ ನೀಡಿರುವುದು ಅವೈಜ್ಞಾನಿಕ ಹಾಗೂ ಅಸಂವಿಧಾನಿಕ ಎಂದು ಪತ್ರಕರ್ತ ರಮೇಶ್ ಹಿರೇಜಂಬೂರ್ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಶೇ.7.5 ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ನಡೆಸಿ ತ್ರಿಸದಸ್ಯ ಸಮಿತಿಯಿಂದ ಶೇ.7.5 ಮೀಸಲಾತಿ ನೀಡಿಕೆ ವಿಚಾರವನ್ನು ಹೊರಗಿಡಬೇಕು. ಗುರುವಾರ ಮಧ್ಯಾಹ್ನ ಸುವರ್ಣ ಸೌಧ ಮುತ್ತಿಗೆ ಚಳವಳಿ ಯಶಸ್ವಿಗಾಗಿದೆ. ರಾಷ್ಟ್ರೀಯ ಹೆದ್ದಾರಿ ಸುಮಾರು ಅರ್ಧ ಗಂಟೆ ಬಂದ್ ಆಗಿದೆ. ನಾಯಕ ಸಮುದಾಯದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದಿದ್ದಾರೆ.
ಈ ಹೋರಾಟ ಮುಗಿದಿಲ್ಲ. ಇದು ಆರಂಭ ಮಾತ್ರ. ಸದನದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರ ಚರ್ಚೆ ಮಾಡದೆ ಹೋದರೆ ರಾಜ್ಯದಲ್ಲಿ ನಾಯಕ ಸಮುದಾಯ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವುದು ನಿಶ್ಚಿತ. ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಹಲಗಲಿ ಬೇಡರ ದಂಗೆಯನ್ನು ಕಂಡ ಈ ನಾಡು ಮತ್ತೊಂದು ಹೊಸ ಸಂಗ್ರಾಮಕ್ಕೆ ಖಂಡಿತಾ ಮುನ್ನುಡಿ ಬರೆಯಲಿದೆ. ಅದಕ್ಕೆ ಸರ್ಕಾರ ದಯಮಾಡಿ ಅವಕಾಶ ನೀಡದೆ ತಕ್ಷಣ ಮೀಸಲಾತಿ ವಿಚಾರ ಚರ್ಚೆ ನಡೆಸಿ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮೊದಲು ನಾವು ಎರಡನೇ ಹಂತದ ಹೋರಾಟವಾಗಿ ನಮ್ಮ ನಾಯಕ ಸಮಾಜದ ಶಾಸಕರು, ಸಚಿವರ ಮನೆಗಳಿಗೇ ಮುತ್ತಿಗೆ ಹಾಕಬೇಕಾಗುತ್ತದೆ. ನಂತರ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವುದು ಶತಸಿದ್ಧ… ಎಂದಿದ್ದಾರೆ.
ಎಚ್ಚರವಿರಲಿ ಎಂಬುದನ್ನು ನೇರವಾಗಿ ಹೇಳುತ್ತಿದ್ದೇವೆ. ಬೇಡ ಸಮುದಾಯ ಹೋರಾಟದಿಂದ ಹಿಂದೆ ಸರಿಯುವ ಸಮುದಾಯವಲ್ಲ. ಇಟ್ಟ ಹೆಜ್ಜೆ ಹಿಂದಿಡುವ ನಾಯಕರೂ ನಾವಲ್ಲ. ಅಂತಹ ಸಂದರ್ಭದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ದಯಮಾಡಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ವಿನಯದಿಂದ ಸರ್ಕಾರ ಕೇಳಿಕೊಳ್ಳುತ್ತಿದ್ದೇವೆ.




