ರೂಪ ಹಾಸನ ಅವರು ಈ ಪುಸ್ತಕ ತಲುಪಿಸಿ ಮೂರು ತಿಂಗಳು ದಾಟಿದವು. ಹಲವು ಖಾಸಗಿ ಗಡಿಬಿಡಿಗಳ ಕಾರಣದಿಂದಾಗಿ ಓದಲು ಸಮಯವಾಗಿರಲಿಲ್ಲ. ಈಗ ಕ್ರಿಸ್‌ಮಸ್ ವಿರಾಮದ ಕಾರಣಕ್ಕೆ ಓದಿ ಮುಗಿಸಿದೆ. ಹಲವು ಕಾರಣಗಳಿಗಾಗಿ ಹಿರೇಮಠರ ಕುರಿತು ಕಣ್ಣು ತೆರೆಸಿದ ಪುಸ್ತಕ ಇದು.
ಮೊದಲನೆಯದಾಗಿ, ಹಿರೇಮಠ ಅವರನ್ನು ನಾನು ಇಲ್ಲಿಯ ತನಕ ತಿಳಿದಿದ್ದದ್ದು, ನಮ್ಮ ಉಳ್ಳವರ ಪರ ಮಾಧ್ಯಮಗಳ ಕಣ್ಣೋಟದಲ್ಲೇ… ಒಬ್ಬರು ಕೋರ್ಟ್ ಬರ್ಡ್ ಆಗಿ. ಅರ್ಥಾತ್ ಮನಸ್ಸಾದಾಗಲೆಲ್ಲ, ಸಿಕ್ಕಸಿಕ್ಕವರ ಮೇಲೆ ಸಾರ್ವಜನಿಕ ಹಿತಾಸಕ್ತಿಯ ಕೇಸು ದಾಖಲಿಸಿಕೊಂಡು ಹೋಗುವವರೆಂದು. ಈ ಪುಸ್ತಕ ಅವರು ಯಾಕೆ ಹಾಗೆ ಎಂಬುದರ ಚೆಂದದ ಚಿತ್ರಣವೊಂದನ್ನು ಕಟ್ಟಿಕೊಡುತ್ತದೆ.
ಎರಡನೆಯದಾಗಿ, ನಾನು ಸ್ವತಃ ಒಂದು NGOದ ಸಕ್ರಿಯ ಭಾಗವಾಗಿದ್ದರೂ, NGOಗಳ, ಅದರಲ್ಲೂ ವಿದೇಶದಿಂದ ಸಹಾಯ ಪಡೆಯುವ NGOಗಳ ಬಡಿವಾರದ ಕುರಿತು ಒಂದು ಸಣ್ಣ ಅಸಹನೆ ಇಟ್ಟುಕೊಂಡೇ ಇರುವವನು. ಅದಕ್ಕೆ ಸರಿಯಾಗಿ, ಬಳ್ಳಾರಿ ಗದ್ದಲದ ಬಳಿಕ ಹಿರೇಮಠ ಅವರ ಸಂಘಟನೆಯ ವಿದೇಶೀ ದೇಣಿಗೆಗಳ ಗದ್ದಲದ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಓದಿದ್ದೆ.
ಮೂರನೆಯದಾಗಿ, NGOಗಳ ಸಾಮಾಜಿಕ ಹೋರಾಟದ ಪ್ರಯತ್ನಗಳೆಲ್ಲ ಕೊನೆಯಲ್ಲಿ ಸರ್ಕಾರಿ ವ್ಯವಸ್ಥೆಯೊಳಗೆ, ಹೋರಾಟದ ವ್ಯಕ್ತಿಗಳು ತಮ್ಮ ತಮ್ಮ ಲಾಭ ಕಂಡುಕೊಳ್ಳುವುದರಲ್ಲೇ ಅಂತ್ಯ ಕಾಣುತ್ತವೆ ಎಂಬುದು ಕರ್ನಾಟಕದ ಈ ಭಾಗದಲ್ಲಿ ನನಗೆ ಮತ್ತೆ ಮತ್ತೆ ಕಾಣಸಿಕ್ಕ ಉದಾಹರಣೆಗಳು… ಹಾಗಾಗಿ ಸಾಮಾಜಿಕ ಹೋರಾಟಗಳನ್ನು ಸಣ್ಣ ಸಂಶಯದಿಂದಲೇ ನೋಡುವುದು ಅಭ್ಯಾಸ ಆಗಿಬಿಟ್ಟಿತ್ತು. ಇದೆಲ್ಲ ಹಾಗೆಯೇ ಇರಬೇಕಾಗಿಲ್ಲ… ಎಂದು ಈ ಪುಸ್ತಕ ತಿಳಿಸಿಕೊಟ್ಟಿತು.

ಪುಸ್ತಕ ಓದಿನ ಅಂತ್ಯದಲ್ಲಿ ದಟ್ಟವಾಗಿ ಅನ್ನಿಸಿದ್ದೆಂದರೆ, ಅಮೆರಿಕದಿಂದ ಹಿಂದಿರುಗಿದ ಹಿರೇಮಠರು ಅವರ “ರಾಜಕೀಯ” ಹೋರಾಟವನ್ನು ಆಗಲೇ ತೀವ್ರಗತಿಯಲ್ಲಿ, ವಿಸ್ತಾರವಾಗಿ ಆರಂಭಿಸಿದ್ದರೆ, ಅವರು ಕರ್ನಾಟಕದ ಜನರ ಬದುಕಿಗೆ ಹೊಸ ದಿಕ್ಕು ತೋರಿಸಬಹುದಾದ ಸಾಮರ್ಥ್ಯ ಹೊಂದಿದ್ದವರು. ಆದರೆ ಅವರ ಚಟುವಟಿಕೆಗಳ ವ್ಯಾಪ್ತಿ ಬಹಳ ಸೀಮಿತವಾಯಿತು, ಅದಕ್ಕೆ ಅವರ ಹಾದಿಯೇ ಕಾರಣವಾಯಿತು ಎಂದು.
“ಸಮಾಜದ ಋಣ ತೀರಿಸಬೇಕೆಂಬ” ಕಾರಂತರ ಭಾಷಣದ ಸ್ಫೂರ್ತಿಯಿಂದ ಹೊರಟ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ಒಳ್ಳೆಯ ಹುದ್ದೆ ತೊರೆದು ಬಂದು ಉತ್ತರ ಕರ್ನಾಟಕದ ಹಳ್ಳಿಯೊಂದರ ದೈನಂದಿನ ಬದುಕಿನಲ್ಲಿ ತೊಡಗಿಕೊಳ್ಳುವ, ಅಲ್ಲಿ ಯಶಸ್ವೀ ಮಾದರಿಗಳನ್ನು ತೋರಿಸಿಕೊಡುವ ಈ ಕತೆ ಆರ್ಥಿಕ ಉದಾರೀಕರಣದ ಪೂರ್ವದ್ದು. ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. “ಪರಿಸರ”, “ಆರೋಗ್ಯ”, “ಆರ್ಥಿಕ ಸಮಾನತೆ” ಎಂದೆಲ್ಲ ಮಾತನಾಡುವುದು ಹೆಚ್ಚು ಪರಿಶ್ರಮವಿಲ್ಲದ, ಕೆಲಸಕ್ಕೆ ಬಾರದ ಹುಚ್ಚು ಅನ್ನಿಸಿಕೊಳ್ಳುತ್ತಿದೆ.
ಹಿರೇಮಠ ಅವರಿಗೆ ಅವರ ಕಾಲದಲ್ಲಿ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಎದ್ದುಬರಲು ಸಾಧ್ಯವಾಯಿತು. ಇಂದು ಅಂತಹ ಸ್ಥಿತಿ ಇಲ್ಲ. ಜನರನ್ನು ಎಚ್ಚರಿಸಬೇಕಾದ ಎಲ್ಲ ಅಂಶಗಳೂ (ಶಿಕ್ಷಣ, ಮಾಧ್ಯಮ, ಜನಕಲ್ಯಾಣ, ಸರ್ಕಾರ, ಅಭಿವೃದ್ಧಿ ಇತ್ಯಾದಿ) ಈಗ ಜಿಲೇಬಿ ತಿಂದು ಬೆಚ್ಚಗಿವೆ. ಕರಾವಳಿಯಂತಹ ಬುದ್ಧಿವಂತರ ಊರಲ್ಲೂ, ಎದುರಾ ಎದುರು ವಿಷ ಕಾರುವ ಕಾರ್ಖಾನೆಗಳೇ ಊರಿನ ಅಭಿವೃದ್ಧಿಗೆ ಕೂಡ CSR ಗುತ್ತಿಗೆ ವಹಿಸಿಕೊಂಡಿವೆ. ಈ ಅಂಶ, ಪುಸ್ತಕ ಓದುತ್ತಾ ಹೋದಂತೆ ಮತ್ತೆ ಮತ್ತೆ ನಾಟುತ್ತಿತ್ತು.
ಈಗ ನಾವು ಅನುಭವಿಸುತ್ತಿರುವ “ಡವಲಪ್‌ಮೆಂಟು”ಗಳ ಕಾಟಕ್ಕೆ ಹಿರೇಮಠರ ಹಾದಿ ಹೆಚ್ಚು ಪ್ರಯೋಜನದ್ದಲ್ಲ, ಆದರೆ ನಡೆದುಬಂದ ಹಾದಿ ತಿಳಿಯದೇ ಮುಂದಿನ ಹಾದಿ ತೆರೆದುಕೊಳ್ಳುವುದಿಲ್ಲ. ಆ ಕಾರಣಕ್ಕಾಗಿ ಈ “ಮಹಾಸಂಗ್ರಾಮಿ” ಮಹತ್ವದ ಓದು. ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಸಿರುವ ಪುಸ್ತಕ ಇದು.
– ರಾಜಾರಾಮ್ ತಲ್ಲೂರ್



