ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನೀರು ಸಿಂಪಡಿಸಿ ಧೂಳು ಹರಡದಂತೆ ಎಚ್ಚರವಹಿಸಿ

2 years ago

ಬೆಂಗಳೂರು ನಗರದಲ್ಲಿ ವಿವಿಧ ಕಡೆಗಳಲ್ಲಿ ರಸ್ತೆ ಅಗಲೀಕರಣ, ವೈಟ್ ಟೈಪಿಂಗ್ ರಸ್ತೆಗಳು, ಪಾದಚಾರಿಗಳ ಮಾರ್ಗದ ರಿಪೇರಿ ಕಾಮಗಾರಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಇವರುಗಳ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ಇವೆಲ್ಲವೂ ನಡೆಯಬೇಕಾದದ್ದು ಇದರಲ್ಲಿ ಯಾವುದೇ ರೀತಿಯ ತಕರಾರು ಇರುವುದಿಲ್ಲ. ಆದರೆ ಇಂತಹ ಕಾಮಗಾರಿಗಳನ್ನ ಮಾಡುವ ಸಂದರ್ಭದಲ್ಲಿ ಅಗತ್ಯವಾಗಿ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಇಂತಹ ಕಾಮಗಾರಿಗಳನ್ನು ಮಾಡುವ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಮತ್ತು ಕಲ್ಲಿನ ಧೂಳು ಹೆಚ್ಚಾಗುತ್ತಿದೆ. ಇವುಗಳು ಗಾಳಿಯಲ್ಲಿ ಹರಡುವುದರಿಂದ ನಗರದ ಬಹುತೇಕ ಜನರಿಗೆ ಶ್ವಾಸಕೋಶದ ಸಮಸ್ಯೆಗಳು ಉಲ್ಬಣವಾಗುತ್ತಿದೆ. ಅದರಲ್ಲೂ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳಿರುವ ಜನರಿಗೆ ಇವುಗಳಿಂದ ಮತ್ತಷ್ಟು ಆತಂಕವಾಗುವಂತಹ ಅನೇಕ ಪ್ರಕರಣಗಳು ದಾಖಲಾಗುತ್ತದೆ.

ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆ ಮತ್ತು ಶ್ವಾಸ ಕೋಶದ ಸಮಸ್ಯೆಗಳ ಕಾರಣಕ್ಕೆ ದಾಖಲಾಗುತ್ತಿದ್ದಾರೆ. ಪ್ರತಿದಿನವೂ ಇಂಥವರ ಸಂಖ್ಯೆ ಆಸ್ಪತ್ರೆಗಳಲ್ಲಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಬಹಳಷ್ಟು ಮಂದಿಯ ದಾರುಣ ಅಂತ್ಯವೂ ಆಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರು ಇಂತಹ ದುಬಾರಿ ಚಿಕಿತ್ಸೆಗಳನ್ನ ಬರಿಸಲು ಸಾಧ್ಯವಾಗುತ್ತಿಲ್ಲ.

ಆದುದರಿಂದ ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ನಗರದ ಉಸ್ತುವಾರಿ ಸಚಿವರು ಮತ್ತು ಉಪಮುಖ್ಯಮಂತ್ರಿಗಳಾದ ಮಾನ್ಯ ಡಿಕೆ ಶಿವಕುಮಾರ್, ಅವರು ಕೂಡಲೇ ಸಂಬಂಧಪಟ್ಟಂತ ಇಲಾಖೆ ಅಧಿಕಾರಿಗಳಿಗೆ ತುರ್ತು ನಿರ್ದೇಶನವನ್ನು ನೀಡಿ, ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನೀರನ್ನು ಸಿಂಪಡಿಸಿ, ಧೂಳು ಮೇಲೆ ಬರದಂತೆ ಮತ್ತು ಹರಡದಂತೆ ನೋಡಿಕೊಂಡು ಕಾಮಗಾರಿಗಳನ್ನು ಮಾಡಬೇಕು.

ಇಂತಹ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಗುತ್ತಿಗೆದಾರರ ಮೇಲೆ ಮೇಲೆ  ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆಯನ್ನು ನೀಡಬೇಕು, ಇದು ಬೆಂಗಳೂರು ನಗರದ ನಾಗರಿಕರನ್ನ ಬಾಧಿಸುತ್ತಿರುವಂತಹ ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಗಮನಹರಿಸಬೇಕಾಗಿ ಕೋರುತ್ತೇನೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply